ರಾಜಸ್ಥಾನ :5 ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ನೆಲಕ್ಕೆ ಹೊಡೆದು ಕೊಂದ ಪಾಪಿ ತಂದೆ.

ರಾಜಸ್ಥಾನ: ಹೆಂಡತಿ ಮೇಲಿನ ಕೋಪಕ್ಕೆ ಮುದ್ದಾದ ಕೇವಲ 5 ತಿಂಗಳಷ್ಟೇ ತುಂಬಿದ್ದ ನವಜಾತ ಶಿಶುಗಳನ್ನು ನೆಲಕ್ಕೆ ಹೊಡೆದು ಕೊಂದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಕೊಲೆಯ ನಂತರ ಆರೋಪಿ ಶವಗಳನ್ನು ಹೂತು ಹಾಕಿದ್ದಾನೆ. ಆದರೆ ಮಕ್ಕಳ ಸೋದರ ಮಾವ ನೀಡಿದ ದೂರಿನ ಮೇರೆಗೆ ಈಗ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಸಿಕರ್ ಜಿಲ್ಲೆಯ ನೀಮ್‌ಕಾಥಾನಾ ಪ್ರದೇಶದಲ್ಲಿ ಈ ಭಯಾನಕ ಘಟನೆ ನಡೆದಿದೆ.
ಪತ್ನಿ ಅನಿತಾ ಜೊತೆ ಜಗಳ ಶುರು ಮಾಡಿದ ಅಶೋಕ್ ಅದೇ ಕೋಪದಲ್ಲಿ ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ , 5 ತಿಂಗಳಷ್ಟೇ ತುಂಬಿದ್ದ ಪುಟ್ಟ ಕಂದಮ್ಮಗಳಾದ ನವ್ಯಾ ಹಾಗೂ ನಿಧಿಯನ್ನು ನೆಲಕ್ಕೆ ಹೊಡೆದು ನಿರ್ದಯವಾಗಿ ವರ್ತಿಸಿದ್ದಾನೆ. ಪಾಪಿ ಅಪ್ಪನ ಕ್ರೌರ್ಯದಿಂದ ಗಂಭೀರ ಗಾಯಗೊಂಡ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ವೈದ್ಯರು ಮಕ್ಕಳು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ.
ಕೊಲೆ ಮಾಡಿದ ನಂತರ ಆರೋಪಿ ಮತ್ತು ಆತನ ಕುಟುಂಬದವರು ಶವಗಳನ್ನು ಮರೆಮಾಚಲು ಯೋಜಿಸಿದ್ದಾರೆ. ಪೊಲೀಸರು ಆರೋಪಿ ಅಶೋಕ್ ಕುಮಾರ್‌ನನ್ನು ಬಂಧಿಸಿದ್ದಾರೆ ಮತ್ತು ಆತನ ವಿರುದ್ಧ ಕೊಲೆ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.