ಬೆಂಗಳೂರು : ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ; ನಂದಿನಿ ಹಾಲಿಗೆ ಲೀಟರಿಗೆ 4 ರೂ. ಹೆಚ್ಚಳ.

ಬೆಂಗಳೂರು : ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಗ್ರಾಹಕರಿಗೆ ಕರ್ನಾಟಕ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ನಂದಿನಿ ಪ್ಯಾಕೆಟ್ ಹಾಲಿನ ದರ ಪ್ರತಿ ಲೀಟರ್ ಮೇಲೆ 4 ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 4 ರೂಪಾಯಿ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನ ಮಾಡಿದೆ.
ನಂದಿನಿ ಹಾಲಿನ ದರ ಹೆಚ್ಚಿಸಿ ಇನ್ನೂ ವರ್ಷವಾಗಿಲ್ಲ. ಆಗಲೇ ದರ ಏರಿಕೆಗೆ ಪ್ರಸ್ತಾಪ ಬಂದಿತ್ತು. ಕೆಎಂಎಫ್ ಅಧಿಕಾರಿಗಳ ಜೊತೆ ಮೂರು ದಿನಗಳ ಹಿಂದೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಲಿ ದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಇದೀಗ ರೈತರಿಗೆ ಹೆಚ್ಚುವರಿ ದರ ನೀಡುವ ನೆಪದಲ್ಲಿ ನಂದಿನ ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ರೈತರಿಗೆ ಪ್ರೊತ್ಸಾಹ ನೀಡುವುದು ಹಾಗೂ ಹಾಲು ಒಕ್ಕೂಟಗಳ ಹಿತದೃಷ್ಟಿಯಿಂದ ದರ ಏರಿಕೆ ಮಾಡುವ ಬಗ್ಗೆ ಬೇಡಿಕೆಗಳು ಕೇಳಿ ಬಂದಿದ್ದವು. ಆದರೆ, ಇದರಿಂದ ಈಗಾಗಲೇ ದರ ಏರಿಕೆಯಿಂದ ಬಳಲಿರುವ ಗ್ರಾಹಕರಿಗೆ ಬರೆ ಎಳೆದಂತಾಗುತ್ತದೆ. ಈ ನಿಟ್ಟಿನಲ್ಲಿ ದರ ಏರಿಕೆ ಬಗ್ಗೆ ಪರ - ವಿರೋಧ ಅಭಿಪ್ರಾಯ ಕೇಳಿಬಂದಿದ್ದವು. ಆದರೆ ಸಂಪುಟ ಸಭೆಯಲ್ಲಿ ದರ ಏರಿಕೆ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕೆಎಂಎಫ್ ಐದು ರೂಪಾಯಿ ವರೆಗೆ ದರ ಏರಿಸಲು ಪ್ರಸ್ತಾಪ ಇಟ್ಟಿತ್ತು. ನಾಲ್ಕು ರೂ. ಏರಿಸಲು ನಿರ್ಣಯ ಮಾಡಲಾಗಿದೆ. ಒಂದು ವರ್ಷದ ಹಿಂದೆ ಇದೇ ಸಮಯದಲ್ಲಿ ಹಾಲಿಗೆ ಐದು ರೂ. ಏರಿಕೆ ಮಾಡಲಾಗಿತ್ತು.