ಬೆಳಗಾವಿ: ದೇವದಾಸಿ ಪದ್ಧತಿಯಿಂದ ಎದ್ದು ಬಂದು 4 ಸಾವಿರ ದೇವದಾಸಿಯರಿಗೆ ಬೆಳಕಾದ ಸೀತವ್ವ! ದೇವದಾಸಿ ಪದ್ಧತಿ ವಿರುದ್ಧ ದಶಕಗಳ ಕಾಲ ಹೋರಾಡಿದ ಹೋರಾಟಗಾರ್ತಿ, ಪದ್ಮಶ್ರೀ ಪುರಸ್ಕೃತೆ ಡಾ.ಸೀತವ್ವ ದುಂಡಪ್ಪ ಜೋಡಟ್ಟಿ
ಬೆಳಗಾವಿ: ದಶಕಗಳ ಕಾಲ ಸಾಮಾಜಿಕ ಪಿಡುಗಾಗಿ ಕಾಡಿದ ದೇವದಾಸಿ ಪದ್ಧತಿ ಈಗ ಬೆಳಗಾವಿ ಜಿಲ್ಲೆಯಲ್ಲಿ ಕಾಲಗರ್ಭ ಸೇರಿದೆ. ಇದರ ಶ್ರೇಯಸ್ಸು ಓರ್ವ ದಿಟ್ಟ ಮಹಿಳೆಗೆ ಸಲ್ಲುತ್ತದೆ. ತಾನೂ ದೇವದಾಸಿಯಾಗಿ ಕಷ್ಟ, ನೋವಿನಲ್ಲಿ ಬದುಕಿನ ಬಂಡಿ ಸಾಗಿಸಿದರೂ ಕೂಡ ಸಾವಿರಾರು ಮಹಿಳೆಯರ ಬಾಳಿನ ಆಶಾಕಿರಣವಾಗಿ ಹೊರಹೊಮ್ಮಿದ ಮಹಾತಾಯಿಯ ಯಶೋಗಾಥೆ ಇದು.
ಇವರ ಹೆಸರು ಡಾ. ಸೀತವ್ವ ದುಂಡಪ್ಪ ಜೋಡಟ್ಟಿ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಕಬ್ಬೂರು ಗ್ರಾಮದ ನಿವಾಸಿ. ದೇಶದ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕೃತೆ. ಅಸಹಾಯಕ ಮಹಿಳೆಯರ ದಯನೀಯ ಸ್ಥಿತಿಗೆ ಅಂತ್ಯ ಹಾಡಿದ ಹಾಗೂ ಸಾವಿರಾರು ಮಹಿಳೆಯರ ಕಣ್ಣೀರು ಒರೆಸಿದ ಮಹಾತಾಯಿ. ಬಾಲ್ಯದಿಂದಲೂ ಬಡತನ, ಕಷ್ಟದಲ್ಲಿಯೇ ಬೆಳೆದ ಸೀತವ್ವ ಸಾಮಾಜಿಕ ಪಿಡುಗಿಗೆ ಬಲಿಯಾಗಿ ಬಳಿಕ ನಿರಂತರವಾಗಿ ಹೋರಾಡಿ ಅದೇ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಪಣತೊಟ್ಟು ಯಶಸ್ವಿಯಾಗಿದ್ದಾರೆ. ನಾನು ಪಟ್ಟಂತಹ ಕಷ್ಟ ಬೇರೆ ಹೆಣ್ಣು ಮಕ್ಕಳಿಗೂ ಬರಬಾರದು ಎಂಬ ಅವರ ಉದ್ದೇಶ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ
ಮನೆಯಲ್ಲಿ ಆರು ಹೆಣ್ಣು ಮಕ್ಕಳಲ್ಲಿ ಸೀತವ್ವ ಕೊನೆಯ ಮಗಳಾಗಿದ್ದರು. ಕೊನೆಯ ಹೆಣ್ಣು ಮಗಳನ್ನು ದೇವರಿಗೆ ದೇವದಾಸಿಯರನ್ನಾಗಿ ಸಮರ್ಪಿಸುವುದರಿಂದ ಕುಟುಂಬಕ್ಕೆ ಗಂಡು ಮಗು ಪ್ರಾಪ್ತಿಯಾಗುತ್ತದೆಂಬುದು ಮೂಢನಂಬಿಕೆ. ಈ ಮೂಢನಂಬಿಕೆಯಿಂದಾಗಿ ಸೀತವ್ವ ದೇವದಾಸಿ ಕೂಪಕ್ಕೆ ಬಿದ್ದಿದ್ದರು. ಆದರೆ, ಈ ಅನಿಷ್ಟ ಪದ್ಧತಿಯಿಂದ ಸಿಡಿದೆದ್ದು ಬಂದಿರುವ ಸೀತವ್ವ 4 ಸಾವಿರ ದೇವದಾಸಿಯರ ಬದುಕಿನಲ್ಲಿ ಬದಲಾವಣೆ ತಂದಿದ್ದು ದೊಡ್ಡ ಸಾಧನೆಯೇ ಸರಿ.
ಪ್ರಾಚೀನ ಕಾಲದಿಂದ ಆರಂಭ: "ಪ್ರಾಚೀನ ಕಾಲದಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ. ಮೊದಲಿಗೆ ದೇವಸ್ಥಾನದಲ್ಲಿ ದೇವರ ಪೂಜೆ ಮಾಡಿಕೊಂಡು ಇರುತ್ತಿದ್ದರು. ಬಳಿಕ ದೇವರ ಮುಂದೆ ಹಾಡುತ್ತಾ, ಕುಣಿಯುವುದು ಶುರುವಾಯಿತು. ಇದು ಮುಂದೆ ಸಾರ್ವಜನಿಕವಾಗಿ ನೃತ್ಯ, ಹಾಡು ಹಾಡಿ ಜನರನ್ನು ಸಂತೃಪ್ತಿಗೊಳಿಸುವಂತೆ ಬದಲಾಯಿತು. ಜೊತೆಗೆ ಜಾತ್ರೆಗೆ ಹೋಗುವಾಗ ಎತ್ತಿನ ಬಂಡಿಯ ಮುಂದೆ ಹಾಡುತ್ತಾ, ಕುಣಿಯುತ್ತಾ ದೇವದಾಸಿಯರನ್ನು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರ ಮೇಲೆ ಭಂಡಾರ, ಕುಂಕುಮ ಎರಚಿ, ಕೂಗು-ಶಿಳ್ಳೆ-ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದರು. ಇದರಿಂದ ಸಾಕಷ್ಟು ಹಿಂಸೆಯನ್ನು ಅವರು ಅನುಭವಿಸುತ್ತಿದ್ದರು" ಎಂದು ಡಾ.ಸೀತವ್ವ ಜೋಡಟ್ಟಿ ತಿಳಿಸಿದರು.
ದಲಿತ ಮಹಿಳೆಯರಿಗೆ ಶಾಪ ಆಗಿದ್ದ ದೇವದಾಸಿ ಪದ್ಧತಿ: "ಗಂಡು ಮಕ್ಕಳು ಆಗದ ತಂದೆ-ತಾಯಿ ತಮಗೆ ಹುಟ್ಟುವ ಮಗಳನ್ನು ದೇವದಾಸಿ ಮಾಡುತ್ತೇವೆ ಎಂದು ಹರಿಕೆ ಹೊತ್ತುಕೊಳ್ಳುತ್ತಿದ್ದರು. ತಲೆಯಲ್ಲಿ ಜಡಿ ಇದ್ದವರಿಗೆ, ಕನಸಿನಲ್ಲಿ ಯಲ್ಲಮ್ಮ ದೇವಿ ಬಂದರೆ ಮುತ್ತು ಕಟ್ಟಿ ದೇವದಾಸಿ ಮಾಡುತ್ತಿದ್ದರು. ನಾಲ್ಕೈದು ಹೆಣ್ಣು ಮಕ್ಕಳು ಇದ್ದರೆ, ಕೊನೆಯ ಮಗಳಿಗೆ ಮತ್ತು ನಾಲ್ಕು ಗಂಡು ಮಕ್ಕಳ ಮೇಲೆ ಹುಟ್ಟಿದ ಮಹಿಳೆ ನಮ್ಮ ಜೊತೆಯೇ ಇರಲಿ ಎಂದು ದೇವದಾಸಿ ಪಟ್ಟ ಕಟ್ಟುತ್ತಿದ್ದರು. ಜೊತೆಗೆ ಕಾಯಿಲೆ ಬಂದಾಗ ದೇವರಾ ಹೇಳುವ ಸ್ವಾಮೀಜಿ ಹತ್ತಿರ ಹೋದಾಗ ಅವರು ಇದು ಯಲ್ಲಮ್ಮನ ಕಾಟ ಐತಿ ಮುತ್ತು ಕಟ್ಟಿ ದೇವದಾಸಿ ಆಗುವಂತೆ ಹೇಳುತ್ತಿದ್ದರು. ಅಲ್ಲದೇ ಊರಿಗೆ ಮಳೆ ಆಗದಿದ್ದಾಗ, ಊರಲ್ಲಿ ರೋಗಗಳು ಹೆಚ್ಚಾದಾಗಲೂ ಈ ಅನಿಷ್ಟ ಪದ್ಧತಿಗೆ ನೂಕುತ್ತಿದ್ದರು. ಈ ಎಲ್ಲಾ ಕಾರಣಗಳು ಮೇಲ್ವರ್ಗದ ಮಹಿಳೆಯರಿಗೂ ಇರುತ್ತಿತ್ತು. ಆದರೆ, ಅವರ್ಯಾರು ಈ ಮೂಢನಂಬಿಕೆಗೆ ಬಲಿ ಆಗುತ್ತಿರಲಿಲ್ಲ. ನಮ್ಮ ದಲಿತ ಮಹಿಳೆಯರೇ ಈ ಶಿಕ್ಷೆಗೆ ಗುರಿಯಾಗುತ್ತಿದ್ದರು" ಎಂದು ಸೀತವ್ವ ಜೋಡಟ್ಟಿ ಬೇಸರ ಹೊರ ಹಾಕಿದರು.
ದೇವದಾಸಿಯರಿಗೆ ಗಂಡ ಇರಲ್ಲ; ಮಕ್ಕಳು ಇರುತ್ತಾರೆ: 1991ರ ಮೊದಲು ದೇವದಾಸಿ ಎಂಬ ಶಬ್ದ ಇರಲಿಲ್ಲ. ಸೂಳೆ, ಜೋಗತಿ, ಬಸಿವಿ ಎಂದು ಆಯಾ ಜಿಲ್ಲೆಯಲ್ಲಿ ಬೇರೆ ಬೇರೆ ಹೆಸರಿನಿಂದ ಜನರು ಕರೆಯುತ್ತಿದ್ದರು. ದಲಿತ ಮಹಿಳೆಯರನ್ನಷ್ಟೇ ದೇವದಾಸಿಯರನ್ನಾಗಿ ಮಾಡುತ್ತಿದ್ದರು. ಅವರಿಗೆ ಗಂಡ, ಕುಟುಂಬ ಇರುವುದಿಲ್ಲ. ಆದರೆ, ಮಕ್ಕಳು ಇರುತ್ತಾರೆ. ದೇವರ ಪೂಜೆ, ಜೋಗತಿ ಮಾಡಿ, ಹಾಡುತ್ತಾ, ಕುಣಿಯುತ್ತಾ ತಮ್ಮನ್ನು ಮತ್ತು ಮಕ್ಕಳನ್ನು ನಿರ್ವಹಿಸಬೇಕಿತ್ತು. ಇಂಥ ಕಷ್ಟದಲ್ಲಿ ಸಿಕ್ಕಿಹಾಕಿಕೊಂಡು ನರಳಾಡಿದವರ ಪೈಕಿ ನಾನು ಒಬ್ಬಳು. ಜೀವನ ಎಂದರೆ ಏನು ಅಂತಾ ಗೊತ್ತಾಗದ 14 ವರ್ಷ ವಯಸ್ಸಿನಲ್ಲಿ ನನಗೆ ಎರಡು ಮಕ್ಕಳಾಗಿದ್ದವು. ಕೂಲಿ, ನಾಲಿ ಮಾಡಿಕೊಂಡು, ಬಹಳಷ್ಟು ಕಷ್ಟಪಟ್ಟು ಇಬ್ಬರೂ ಮಕ್ಕಳನ್ನು ಸಲುಹಿದೆ" ಎನ್ನುತ್ತಾರೆ ಸೀತವ್ವ.
4 ಸಾವಿರ ದೇವದಾಸಿಯರಿಗೆ ಮುಕ್ತಿ: 1991ರಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲತಾ ಮಾಲಾ ಅವರನ್ನು ಭೇಟಿ ಮಾಡಿದಾಗ ಅವರಿಂದ ದೇವದಾಸಿ ಪದ್ಧತಿಯಲ್ಲಿ ಮಹಿಳೆಯರ ಮೇಲೆ ಆಗುತ್ತಿದ್ದ ಅನ್ಯಾಯ, ದೌರ್ಜನ್ಯದ ಕುರಿತು ತರಬೇತಿ ಕೊಟ್ಟು ಅರಿವು ಮೂಡಿಸಿದರು. ಅಂದಿನಿಂದ ಸೀತವ್ವ ದೇವದಾಸಿ ಪದ್ಧತಿಯ ನಿರ್ಮೂಲನೆಗೆ ಪಣತೊಟ್ಟರು. ನಂತರ ಎಲ್ಲೆಡೆ ಸಂಚರಿಸಿ ಜಾಗೃತಿ ಮೂಡಿಸ ತೊಡಗಿದರು. ಅವರ ಪ್ರಯತ್ನದ ಫಲವಾಗಿ ಒಂದು ವಾರದೊಳಗೆ 44 ಜನ ಮಹಿಳೆಯರು ಅವರ ಜೊತೆ ಕೈಜೋಡಿಸಿದರು. ಮುಂದೆ ಸೀತವ್ವ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ ಜೊತೆಗೂಡಿ 4 ಸಾವಿರ ಹೆಣ್ಣು ಮಕ್ಕಳನ್ನು ಈ ಕೆಟ್ಟ ಪದ್ಧತಿಯಿಂದ ಹೊರ ತರುವಲ್ಲಿ ಯಶಸ್ವಿಯಾದರು. ಮತ್ತು ಅಂಧಕಾರದಲ್ಲಿದ್ದವರ ಬಾಳಿಗೆ ಬೆಳಕಾಗಿ ನಿಂತರು. ಮುಂದೆ 1997ರಲ್ಲಿ ಮೂಡಲಗಿ ತಾಲೂಕಿನ ಘಟಪ್ರಭಾದಲ್ಲಿ ಮಾಸ್-ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಬಡ್ತಿ ಪಡೆದರು. 25 ಜನ ಖಾಯಂ ನೌಕರರು, 106 ಜನ ಸಹಾಯಕರು, 15 ನಿರ್ದೇಶಕರು, 3,878 ಸದಸ್ಯರು, 106 ಸ್ವಯಂ ಸೇವಕರು ಸೇರಿಕೊಂಡು ದೇವದಾಸಿ ಪದ್ಧತಿ ವಿರುದ್ದದ ಹೋರಾಟದಲ್ಲಿ ಸೀತವ್ವ ಅವರ ಜೊತೆಗೆ ನಿಂತಿದ್ದಾರೆ.
ಬೇಕಿದೆ ಸರ್ಕಾರದ ಆರ್ಥಿಕ ನೆರವು: "ಒಂದು ಕಾಲಕ್ಕೆ ಬೆಳಗಾವಿ ಜಿಲ್ಲೆಯಲ್ಲೆ ಅತೀ ಹೆಚ್ಚು ದೇವದಾಸಿಯರು ಇದ್ದರು. ನಮ್ಮ ಹೋರಾಟದ ಫಲವಾಗಿ ಈಗ ದೇವದಾಸಿ ಪದ್ಧತಿ ನಮ್ಮ ಜಿಲ್ಲೆಯಲ್ಲಿ ಸಂಪೂರ್ಣ ನಿರ್ಮೂಲನೆ ಆಗಿದೆ ಎಂದು ನಾನು ಎದೆ ತಟ್ಟಿಕೊಂಡು ಹೇಳುತ್ತೇನೆ. ಆದರೆ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇನ್ನೂ ಜೀವಂತ ಇದೆ. ಅವರನ್ನು ಪರಿವರ್ತನೆ ಮಾಡಲು ನಮಗೆ ಸರ್ಕಾರದ ಆರ್ಥಿಕ ನೆರವಿನ ಅವಶ್ಯಕತೆ ಇದೆ" ಎಂಬುದು ಸೀತವ್ವ ಜೋಡಟ್ಟಿ ಅವರ ಅಭಿಪ್ರಾಯ.
2 ಎಕರೆ ಜಮೀನು, ಸರ್ಕಾರಿ ನೌಕರಿ ಮೀಸಲಾತಿ: "ನಮ್ಮ ಹೋರಾಟದ ಪರಿಣಾಮ 2007-08ರಲ್ಲಿ ಮಾಜಿ ದೇವದಾಸಿಯರಿಗೆ ಸರ್ಕಾರ ಪಿಂಚಣಿ ಕೊಡುತ್ತಿದೆ. ಆರಂಭದಲ್ಲಿ 400 ರೂ. ಕೊಡುತ್ತಿದ್ದರು. 2024ರ ಜುಲೈನಿಂದ ಅದನ್ನು 2 ಸಾವಿರ ರೂಪಾಯಿಗೆ ಏರಿಸಿದ್ದಾರೆ. ಇದು ನಮ್ಮ ಕೊನೆಯ ಪೀಳಿಗೆ, ಇನ್ಮುಂದೆ ಯಾರೂ ದೇವದಾಸಿಯರು ಹುಟ್ಟಿಕೊಳ್ಳಲ್ಲ. ಹಾಗಾಗಿ, ಪಿಂಚಣಿ 3-5 ಸಾವಿರ ರೂ. ವರೆಗೆ ಏರಿಸಬೇಕು. ಅದೇ ರೀತಿ 2018ರಿಂದ ದೇವದಾಸಿಯ ಗಂಡು ಮಗನ ಮದುವೆಗೆ 3 ಲಕ್ಷ ರೂ., ಹೆಣ್ಣು ಮಗಳ ಮದುವೆಗೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡುತ್ತಿದ್ದಾರೆ. ಅದಕ್ಕಿಂತ ಮೊದಲು ಬಹಳಷ್ಟು ಮಕ್ಕಳ ಮದುವೆ ಆಗಿದೆ. ಅವರಿಗೆ ಇದು ಸಿಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೆ 2 ಎಕರೆ ಜಮೀನು ನೀಡಬೇಕು. ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಕಲ್ಪಿಸಬೇಕು. ಈ ಮೂಲಕ ದೇವದಾಸಿ ಪದ್ಧತಿಯಿಂದ ಹೊರ ಬಂದಿರುವ ಮಹಿಳೆಯರನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬಲವರ್ಧನೆ ಆಗಬೇಕು ಎನ್ನುವುದೇ ನಮ್ಮ ಮೂಲ ಉದ್ದೇಶ" ಎಂದು ಸೀತವ್ವ ಜೋಡಟ್ಟಿ ತಿಳಿಸಿದರು.
ಜಾಗೃತಿಗೆ ಕೈಜೋಡಿಸಿ: ಯಲ್ಲಮ್ಮ ಗುಡ್ಡದಲ್ಲಿ ಭಾರತ ಹುಣ್ಣಿಮೆ ಜಾತ್ರೆಯಲ್ಲಿ ದೇವದಾಸಿ ಪದ್ಧತಿ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಷ್ಟೊಂದು ಸಹಕಾರ ನೀಡಲಿಲ್ಲ. ಹಾಗಾಗಿ, ಮುಂದೆ ಬರುವ ಜಾತ್ರೆಗಳಲ್ಲಿ ಧ್ವನಿವರ್ಧಕ ವಾಹನ ಜಾತ್ರೆಯಲ್ಲಿ ಓಡಾಡಲು, ಬೀದಿನಾಟಕ ಮಾಡಲು ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕು ಎಂದು ಸೀತವ್ವ ಜೋಡಟ್ಟಿ ಕೋರಿದರು.
ಹಲವು ಪ್ರಶಸ್ತಿ ಗರಿ: ಸೀತವ್ವ ಜೋಡಟ್ಟಿ ಅವರಿಗೆ 2018ರಲ್ಲಿ ದೇಶದ 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪುರಸ್ಕಾರ ಅರಸಿ ಬಂದಿದೆ. ಅದೇ ರೀತಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ವೀರರಾಣಿ ಬೆಳವಡಿ ಮಲ್ಲಮ್ಮ ಪ್ರಶಸ್ತಿ ಸೇರಿ ಹಲವು ಗೌರವಗಳು ಇವರಿಗೆ ಸಂದಿವೆ