ಮಂಡ್ಯ :ಮಾರ್ವಾಡಿಯೊಬ್ಬರ ಮನೆಯ ಹೋಳಿ ಊಟ ತಿಂದ ಹಾಸ್ಟೆಲ್‌ನ 30 ಮಕ್ಕಳು ಆಸ್ಪತ್ರೆಗೆ ದಾಖಲು, ಓರ್ವ ವಿದ್ಯಾರ್ಥಿ ಸಾವು.
ಮಂಡ್ಯ: ಹೋಳಿ ಹಬ್ಬದ ನಿಮಿತ್ತ ಮಾರ್ವಾಡಿ ಉದ್ಯಮಿಯೊಬ್ಬರು ಭರ್ಜರಿ ಊಟ ಮಾಡಿಸಿದ್ದರು. ಊಟ ಹೆಚ್ಚಾದ್ದರಿಂದ ಹತ್ತಿರದ ವಸತಿ ಶಾಲೆಗೆ ಕೊಟ್ಟಿದ್ದರು. ಈ ಊಟ ತಿಂದ ವಿದ್ಯಾರ್ಥಿಗಳಿಗೆ ವಾಂತಿ ಬೇಧಿ ಶುರುವಾಗಿದ್ದು, ಫುಡ್ಸ್ ಪಾಯ್ಸನ್‌ನಿಂದ ಓರ್ವ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ. ಕಾಗೇಪುರ ಗ್ರಾಮದಲ್ಲಿರುವ ಗೋಕುಲ ವಿದ್ಯಾಸಂಸ್ಥೆಯ ಹಾಸ್ಟೆಲ್‌ನಲ್ಲಿ ಈ ದುರಂತ ಸಂಭವಿಸಿದೆ. ಹಾಸ್ಟೆಲ್‌ನಲ್ಲಿ ಶನಿವಾರ ರಾತ್ರಿ ಆಹಾರ ಸೇವಿಸಿದ 30 ವಿದ್ಯಾರ್ಥಿಗಳಿಗೆ ವಾಂತಿ ಬೇಧಿ ಶುರುವಾಗಿದೆ. ಕೂಡಲೇ ಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯನ್ನು ಕೆರ್ಲಾಂಗ್(13) ಎಂದು ಗುರುತಿಸಲಾಗಿದೆ.
ಈ ಘಟನೆಗೆ ಹಾಸ್ಟೆಲ್ ಸಿಬ್ಬಂದಯೇ ಕಾರಣವೆಂದು ಗ್ರಾಮಸ್ಥರು ಹಾಗೂ ಮಕ್ಕಳ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಮಳವಳ್ಳಿ ಮೂಲದ ಉದ್ಯಮಿಯೊಬ್ಬರು ಶನಿವಾರ ಹೋಳಿ ಹಬ್ಬಕ್ಕೆ ಊಟ ಮಾಡಿಸಿದ್ದರು. ಇನ್ನು ಹಬ್ಬಕ್ಕೆ ಮಾಡಿಸಿದ್ದ ಊಟ ಹೆಚ್ಚಾಗಿ ಉಳಿದಿದ್ದರಿಂದ ಅದನ್ನು ತಂದು ಹಾಸ್ಟೆಲ್‌ನಲ್ಲಿರುವ ಮಕ್ಕಳಿಗೆ ನೀಡಲಾಗಿತ್ತು. ಇನ್ನು ಹೋಳಿ ಹಬ್ಬಕ್ಕೆ ಮಾಡಿಸಿದ ಊಟವನ್ನು ರಾತ್ರಿ ಸೇವನೆ ಮಾಡಿದ ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಮಕ್ಕಳು ಹೊಟ್ಟೆನೋವು, ವಾಂತಿ ಬೇಧಿಯಿಂದ ಬಳಲುತ್ತಿದ್ದರೂ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸದೆ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ. ಓರ್ವ ವಿದ್ಯಾರ್ಥಿ ಹೊಟ್ಟೆನೋವು ತಾಳಲಾರದೇ ಮೂರ್ಛೆ ಬಿದ್ದ ತಕ್ಷಣ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟೆರಲ್ಲಾಗಲೇ ಅರುಣಾಚಲ ಪ್ರದೇಶ ರಾಜ್ಯದಿಂದ ವಿದ್ಯಾಭ್ಯಾಸಕ್ಕೆ ಬಂದಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಭಾನುವಾರ ಬೆಳಗ್ಗೆ ಫುಡ್ ಪಾಯ್ಸನ್‌ನಿಂದ ಬಳಲುತ್ತಿದ್ದ ಇತರೆ 30 ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಆಸ್ಪತ್ರೆಗೆ ದಾಖಲಿಸಿದೆ. ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾರ್ವಾಡಿ ಕುಟುಂಬದವರೂ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಳವಳ್ಳಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಮೋಹನ್ ಅವರು ಪರಿಶೀಲನೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮಳವಳ್ಳಿ ಠಾಣೆಯಲ್ಲಿ FIR ದಾಖಲಿಸಲಾಗಿದೆ ಎಂದು ಜಿಲ್ಲಾ ರೋಗ್ಯಾಧಿಕಾರಿ ಮೋಹನ್ ತಿಳಿಸಿದರು.