ಹೈದರಾಬಾದ್ : ಬೆಟ್ಟಿಂಗ್ ಆಪ್ ದಂಧೆ ಪರ ಜಾಹೀರಾತು ; ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ದೇವರಕೊಂಡ ಸೇರಿ 25ಕ್ಕೂ ಹೆಚ್ಚು ಟಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಎಫ್ಐಆರ್ !

ಹೈದರಾಬಾದ್ : ಸಾರ್ವಜನಿಕರನ್ನು ವಂಚಿಸುವ ವಿವಿಧ ರೀತಿಯ ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕಾಗಿ ಜಾಹೀರಾತಿನಲ್ಲಿ ಪಾಲ್ಗೊಂಡ ಟಾಲಿವುಡ್ಡಿನ ಹೆಸರಾಂತ ನಟ, ನಟಿಯರು ಸೇರಿ 25 ಮಂದಿ ವಿರುದ್ಧ ಹೈದರಾಬಾದ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ, ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ನಟಿ ಪ್ರಣೀತಾ ಸುಭಾಶ್, ಮಂಚು ಲಕ್ಷ್ಮೀ ಸೇರಿ 25 ಮಂದಿ ಸೆಲಿಬ್ರಿಟಿ ಹಾಗೂ ಉದ್ಯಮಿಗಳಿಗೆ ಕೇಸು ದಾಖಲಿಸಿದ್ದು ವಿಚಾರಣೆ ಹಾಜರಾಗುವಂತೆ ಪೊಲೀಸರು ನೋಟಿಸ್ ಕಳಿಸಿದ್ದಾರೆ.
ಸೈದರಾಬಾದ್‌ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ 32 ವರ್ಷದ ಫಣೀಂದ್ರ ಶರ್ಮಾ ಎನ್ನುವ ಉದ್ಯಮಿಯೊಬ್ಬರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲು ಮಾಡಲಾಗಿದೆ. ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಅವರು ಜಂಗ್ಲಿ ರಮ್ಮಿ, ವಿಜಯ್ ದೇವರಕೊಂಡ ಅವರು ಎ 23, ಮಂಚು ಲಕ್ಷ್ಮಿ ಯೊಲೊ 247, ಪ್ರಣೀತಾ ಪೈರ್ ಪ್ಲೇ ಮತ್ತು ನಿಧಿ ಅಗರ್ವಾಲ್ ಜೀತ್ ವಿನ್ ಎನ್ನುವ ಬೆಟ್ಟಿಂಗ್ ಆ್ಯಪ್‌ಗಳ ಜಾಹೀರಾತುಗಳಲ್ಲಿ ಭಾಗಿಯಾಗಿದ್ದರು. ಇನ್ನೂ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಬೆಟ್ಟಿಂಗ್ ಏಪ್ ಪರವಾಗಿ ಜಾಹೀರಾತನ್ನು ನೀಡುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಟಿಯರು ಮಾತ್ರವಲ್ಲದೇ, ಸಾಮಾಜಿಕ ಜಾಲತಾಣದ ಇನ್ಫೂಯೆನ್ಸರ್‌ಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸದ್ಯ ಎಲ್ಲರಿಗೂ ಪೊಲೀಸ್ ನೋಟೀಸ್ ಜಾರಿ ಮಾಡಲಾಗಿದೆ. ಗುರುವಾರ ವಿಷ್ಣುಪ್ರಿಯಾ ಎಂಬ ನಟಿಗೆ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಅವರು ತಮ್ಮ ವಕೀಲರೊಂದಿಗೆ ಪೊಲೀಸರೆದುರು ಹಾಜರಾಗಿದ್ದು, ವಿಚಾರಣೆ ಎದುರಿಸಿದ್ದಾರೆ.
ಬೆಟ್ಟಿಂಗ್ ಏಪ್ಗಳು ಪೂರ್ತಿಯಾಗಿ ಕಾನೂನು ಉಲ್ಲಂಘಿಸಿ ನಡೆಯುತ್ತಿದ್ದು ಸೆಲೆಬ್ರಿಟಿಗಳು ಪ್ರಚಾರದಲ್ಲಿ ತೊಡಗುವ ಮೂಲಕ ಲಕ್ಷಾಂತರ ಜನರಿಗೆ ಪ್ರೇರಣೆಯಾಗುತ್ತಿದ್ದಾರೆ. ಇವರ ಹಿಂದೆ ಬಹಳಷ್ಟು ಜನರು ಇದರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸುಲಭದಲ್ಲಿ ಹಣ ಮಾಡುವ ದಂಧೆಯೆಂದು ಮಧ್ಯಮ ವರ್ಗದ ಸಾವಿರಾರು ಜನರು ಹಣ ಹೂಡಿಕೆ ಮಾಡಿ ಕಳಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಯಾರು ಇದರ ಹಿಂದಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಈ ಕುರಿತ ದೂರಿನಲ್ಲಿ ಉಲ್ಲೇಖಿಸಲಾಗಿದೆ.