ಬೆಂಗಳೂರು :ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ; ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಯಶಪಾಲ್, ಮುನಿರತ್ನ ಸೇರಿ 18 ಬಿಜೆಪಿ ಶಾಸಕರ ಅಮಾನತು....!!
ಬೆಂಗಳೂರು : ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ 18 ಮಂದಿ ಬಿಜೆಪಿ ಶಾಸಕರನ್ನು ಸ್ಪೀಕರ್ ಯುಟಿ ಖಾದರ್ ಮುಂದಿನ 6 ತಿಂಗಳ ಅವಧಿಗೆ ಕಲಾಪದಿಂದ ಅಮಾನತು ಮಾಡಿದ್ದಾರೆ. ಬಿಜೆಪಿ ಶಾಸಕರಾದ ಭೈರತಿ ಬಸವರಾಜ, ಡಾ. ಶೈಲೇಂದ್ರ ಬೆಲ್ದಾಳೆ, ಮುನಿರತ್ನ, ಧೀರಜ್ ಮುನಿರತ್ನ, ಬಿಪಿ ಹರೀಶ್, ಡಾ. ಭರತ್ ಶೆಟ್ಟಿ, ಚಂದ್ರು ಲಮಾಣಿ, ಉಮಾನಾಥ ಕೋಟ್ಯಾನ್, ರಾಮಮೂರ್ತಿ, ದೊಡ್ಡನಗೌಡ ಪಾಟೀಲ್, ಡಾ. ಅಶ್ವತ್ಥ್ ನಾರಾಯಣ, ಯಶಪಾಲ್ ಸುವರ್ಣ, ಬಿ. ಸುರೇಶ್ ಗೌಡ, ಶರಣು ಸಲಗರ, ಚನ್ನಬಸಪ್ಪ, ಬಸವರಾಜ ಮತ್ತಿಮೂಡ, ಎಸ್.ಆರ್ ವಿಶ್ವನಾಥ್ ಅವರನ್ನು ಪತ್ತೆಹಚ್ಚಿ ಆರು ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಸ್ಪೀಕರ್ ಯುಟಿ ಖಾದರ್ ವಿಧಾನಸಭೆ ನಡವಳಿಕೆ ನಿಯಮಾವಳಿ ಪ್ರಕಾರ ಆದೇಶ ಮಾಡಿದ್ದಾರೆ.




48 ಮಂದಿ ಜನಪ್ರತಿನಿಧಿಗಳ ಹನಿಟ್ರ್ಯಾಪ್ ಆಗಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಪೀಕರ್ ಪೀಠದ ಮೇಲೆ ಏರಿ ಗದ್ದಲ ಉಂಟು ಮಾಡಿದ್ದರು. ಬಜೆಟ್ ಪ್ರತಿಗಳನ್ನು ಹರಿದು ಸ್ಪೀಕರ್ ಪೀಠಕ್ಕೆ ಎಸೆದಿದ್ದರು. ಬಳಿಕ ಸದನವನ್ನು ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಖಾದರ್ ಮತ್ತು ಹಿರಿಯ ಸಚಿವರು ಕುಳಿತು ಸಭೆ ನಡೆಸಿದ್ದು ಅಮಾನತು ನಿರ್ಧಾರ ಕೈಗೊಂಡಿದ್ದಾರೆ. ಭೋಜನ ವಿರಾಮ ಬೆನ್ನಲ್ಲೇ ಸ್ಪೀಕರ್, ಬಿಜೆಪಿ ಶಾಸಕರ ಅಮಾನತು ನಿರ್ಣಯ ಪ್ರಕಟಿಸಿದ್ದಾರೆ.
ಅಮಾನತು ಅವಧಿಯಲ್ಲಿ ವಿಧಾನಸಭೆ ಸಭಾಂಗಣ, ಗ್ಯಾಲರಿ ಪ್ರವೇಶಿಸುವಂತಿಲ್ಲ. ಸ್ಥಾಯಿ ಸಮಿತಿ ಸಭೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಅಮಾನತು ಸಂದರ್ಭದಲ್ಲಿ ಯಾವುದೇ ಸಮಿತಿಯ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ. ಯಾವುದೇ ದಿನ ಭತ್ಯೆಯನ್ನು ಪಡೆಯಲು ಅರ್ಹರಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.