ರಾಯ್ಪುರ್: ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಚಕಮಕಿ : 16 ನಕ್ಸಲರ ಹತ್ಯೆ.
Saturday, March 29, 2025

ರಾಯ್ಪುರ್: ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 16 ನಕ್ಸಲರು ಹತ್ಯೆಯಾಗಿರುವ ಘಟನೆ ಛತ್ತೀಸ್‌ಗಢದ ಸುಕ್ಮಾ-ದಂತೇವಾಡ ಗಡಿಯಲ್ಲಿ ನಡೆದಿದೆ.
ಗುಂಡಿನ ಚಕಮಕಿಯಲ್ಲಿ ಇಬ್ಬರು ಜವಾನರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಈ ಪ್ರದೇಶದಲ್ಲಿ ಮಾವೋವಾದಿಗಳ ಇರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಕೂಡಲೇ ಎಚ್ಚೆತ್ತ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಇಂದು (ಮಾ.29) ಬೆಳಗ್ಗೆ ಕೇರ್ಲಪಾಲ್ ಪೊಲೀಸ್ ಠಾಣೆ ಬಳಿಯ ಕಾಡಿನಲ್ಲಿ ನಕ್ಸಲರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಇಲ್ಲಿಯವರೆಗೆ 16 ನಕ್ಸಲರ ಶವಗಳು ಪತ್ತೆಯಾಗಿವೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ಎಕೆ 47, ಎಸ್‌ಎಲ್‌ಆರ್, ಐಎನ್‌ಎಸ್‌ಎಎಸ್ ರೈಫಲ್, 303 ರೈಫಲ್, ರಾಕೆಟ್ ಲಾಂಚರ್, ಬಿಜಿಎಲ್ ಲಾಂಚರ್ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.