ಮಡಿಕೇರಿ : ಮಡಿಕೇರಿಯಲ್ಲಿ ಲಘು ಭೂಕಂಪನ ; ಮದೆನಾಡು ಬಳಿ ಕಂಪನದ ಕೇಂದ್ರ ಬಿಂದು ; ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆ ದಾಖಲು.
Thursday, March 13, 2025

ಮಡಿಕೇರಿ : ಕೊಡಗು ಜಿಲ್ಲೆಯ ಮಡಿಕೇರಿ ಭಾಗದಲ್ಲಿ ಬುಧವಾರ ಭೂಕಂಪ ಸಂಭವಿಸಿದೆ. ಮಡಿಕೇರಿ ತಾಲೂಕಿನ ಎರಡು ಮೂರು ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆ ದಾಖಲಾಗಿದೆ.
ಮದೆನಾಡು ಗ್ರಾಮ ವ್ಯಾಪ್ತಿಯ ವಾಯುವ್ಯಕ್ಕೆ 2.4 ಕಿಮೀ ದೂರದಲ್ಲಿ ಭೂಮಿ ಕಂಪಿಸಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಡಿಕೇರಿ ತಾಲೂಕಿನ ಮದೆನಾಡು, 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ 10.49ಕ್ಕೆ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಮಡಿಕೇರಿ ನಗರದಿಂದ ಈಶಾನ್ಯಕ್ಕೆ 4 ಕಿ.ಮೀ. ದೂರದಲ್ಲಿ ಭೂಕಂಪನ ಸಂಭವಿಸಿದೆ.
ಕಡಿಮೆ ತೀವ್ರತೆಯ ಭೂಕಂಪನ ಇದಾಗಿದ್ದರೂ ಜನರು ಭಯಪಟ್ಟಿದ್ದಾರೆ. ಕೇಂದ್ರ ಬಿಂದುವಿನಿಂದ ಸುಮಾರು 15-20 ಕಿ.ಮೀ. ಆಸುಪಾಸಿನ ವರೆಗೆ ಭೂಕಂಪನ ಅನುಭವ ಜನರಿಗಾಗಿದೆ. ಘಟನೆಯಿಂದ ಯಾವುದೇ ಹಾನಿ, ತೊಂದರೆ ಆಗಿಲ್ಲ.
ಭೂಕಂಪನದ ತೀವ್ರತೆ ಪ್ರಮಾಣ 1.6 ರಷ್ಟು ದಾಖಲಾಗಿದ್ದರಿಂದ ಹಾನಿ ಸಾಧ್ಯತೆ ಕಡಿಮೆ. ಯಾರು ಭಯಪಡುವ ಅಗತ್ಯ ಇಲ್ಲ ಎಂದು KSNDMC ಮಾಹಿತಿ ನೀಡಿದೆ.