ಕುದುರೆಮುಖ: ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರದ್ದೇ ಕೃತ್ಯ, 15 ಹೆಕ್ಟೇರ್ ಅರಣ್ಯ ಭಸ್ಮ, ಮಾನವ ನಿರ್ಮಿತ ಕಾಡ್ಗಿಚ್ಚಿಗೆ ಕಟ್ಟು ನಿಟ್ಟಾದ ಕಾನೂನು ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ!!

ಚಿಕ್ಕಮಗಳೂರು : ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿ ಉಂಟಾಗಿ ಸುಮಾರು 15 ಹೆಕ್ಟೇರ್ ಅರಣ್ಯ ಸುಟ್ಟು ಭಸ್ಮವಾಗಿದೆ. ಕಾಡ್ಗಿಚ್ಚು ಉಂಟಾಗಲು ಸ್ಥಳೀಯರು ಬೆಂಕಿ ಕೊಟ್ಟಿದ್ದೇ ಕಾರಣ ಎನ್ನುವುದು ತಿಳಿದುಬಂದಿದೆ. ಈ ಬಗ್ಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ಇತ್ತೀಚಿನ ದಿನಗಳಲ್ಲಿ ಇದೇ ಅರಣ್ಯ ಭಾಗದಲ್ಲಿ ಸಂಭವಿಸಿದ ಎರಡನೇ ಕಾಡ್ಗಿಚ್ಚು ಇದಾಗಿದೆ. ಅರಣ್ಯದ ಆಸುಪಾಸಿನಲ್ಲಿ ವಾಸಿಸುವ ಸ್ಥಳೀಯರೇ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.
ಕುದುರೆಮುಖ ವ್ಯಾಪ್ತಿಯ ಬಂಗಾರು ಬೆಳ್ಳಿಗೆಯಲ್ಲಿ ಬೆಂಕಿ ಸಂಭವಿಸಿತ್ತು. ಕಾಡಿನೊಳಗೆ ಬುಡಕಟ್ಟು ಜನರ ವಾಸಗಳಿವೆ. ಯಾವುದೇ ಕಾಡ್ಗಿಚ್ಚು ನೈಸರ್ಗಿಕವಲ್ಲ ; ಅವೆಲ್ಲವೂ ಮಾನವ ನಿರ್ಮಿತ. ರಾಷ್ಟ್ರೀಯ ಉದ್ಯಾನವನದಲ್ಲಿ ಹಿಂದೆ ಅನೇಕ ಬಾರಿ ಬೆಂಕಿ ಅನಾಹುತ ಸಂಭವಿಸಿದ್ದವು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಅರಣ್ಯ ಪ್ರದೇಶದಲ್ಲಿ 1,300 ಕುಟುಂಬಗಳು ವಾಸಿಸುತ್ತಿದ್ದು, ಅದರಲ್ಲಿ 650 ಕುಟುಂಬಗಳು ಸ್ಥಳಾಂತರಗೊಳ್ಳಲು ಒಪ್ಪಿಕೊಂಡಿವೆ. ಇಲಾಖೆಯು 350 ಕುಟುಂಬಗಳನ್ನು ಸ್ಥಳಾಂತರಿಸಿದೆ. ಉಳಿದ 200 ಕುಟುಂಬಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಇದೇ ವಿರೋಧಕ್ಕಾಗಿ ಅರಣ್ಯಕ್ಕೆ ಬೆಂಕಿ ಹಾಕಿದ್ದಾರೆಯೇ ಎಂಬ ಶಂಕೆ ಅಧಿಕಾರಿಗಳಲ್ಲಿದೆ.
ಅರಣ್ಯದ ಗಡಿಯ ಹೊರಗಿನ ಕಳಸ ಶ್ರೇಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿಂದ ಬೆಂಕಿ ಕುದುರೆಮುಖ ಅರಣ್ಯ ಪ್ರದೇಶಕ್ಕೆ ಹರಡಿದೆ. ಜನರು ಕಾಡಿನೊಳಗೆ ಬೆಂಕಿ ಹಚ್ಚುತ್ತಿದ್ದಾರೆ. ನಾವು ನಿಯಮಿತವಾಗಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದರೂ, ಬೆಂಕಿ ಬೀಳುತ್ತಿದೆ ಎಂದು ಬೇಸರ ಹೇಳುತ್ತಾರೆ ಅಧಿಕಾರಿಗಳು. ಕಾಡಿಗೆ ಬೆಂಕಿ ಹಚ್ಚುವುದರಿಂದ ಮೊದಲ ಮಳೆಯ ನಂತರ ಹುಟ್ಟಿಕೊಳ್ಳುವ ಹುಲ್ಲು ಜಾನುವಾರುಗಳಿಗೆ ಆಹಾರಕ್ಕೆ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಇದಲ್ಲದೆ, ಬೆಂಕಿ ಬಿದ್ದ ಪ್ರದೇಶದಲ್ಲಿ ಅತಿಕ್ರಮಣವೂ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅತಿಕ್ರಮಣ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದೆ.