ಮಂಗಳೂರು : ಮಂಗಳೂರು ಪೊಲೀಸ್ ಇತಿಹಾಸದಲ್ಲೇ ಸಿಸಿಬಿ ತಂಡಕ್ಕೆ ದೊಡ್ಡ ಕ್ರೆಡಿಟ್ ; ಒಂದೇ ಬಾರಿಗೆ 13 ಸಿಬಂದಿಗೆ ಮುಖ್ಯಮಂತ್ರಿ ಪದಕ, ಅತಿದೊಡ್ಡ ಡ್ರಗ್ಸ್ ಬೇಟೆಗೆ ರಾಜ್ಯ ಸರ್ಕಾರದ ಗಿಫ್ಟ್ !

ಮಂಗಳೂರು : ಮಂಗಳೂರು ಪೊಲೀಸ್ ಇತಿಹಾಸದಲ್ಲೇ ಸಿಸಿಬಿ ತಂಡಕ್ಕೆ ದೊಡ್ಡ ಕ್ರೆಡಿಟ್ ; ಒಂದೇ ಬಾರಿಗೆ 13 ಸಿಬಂದಿಗೆ ಮುಖ್ಯಮಂತ್ರಿ ಪದಕ, ಅತಿದೊಡ್ಡ ಡ್ರಗ್ಸ್ ಬೇಟೆಗೆ ರಾಜ್ಯ ಸರ್ಕಾರದ ಗಿಫ್ಟ್ !


ಮಂಗಳೂರು : ಪೊಲೀಸ್ ಇಲಾಖೆಯಲ್ಲಿ ದಕ್ಷತೆ ತೋರಿಸಿದ್ದಕ್ಕಾಗಿ ಪ್ರತಿ ವರ್ಷ ಮುಖ್ಯಮಂತ್ರಿ ಪದಕ ನೀಡಲಾಗುತ್ತದೆ. 2022 ಮತ್ತು 2023ರಲ್ಲಿ ಸಿಎಂ ಪದಕ ಘೋಷಣೆ ಆಗಿದ್ದರೂ, ಚುನಾವಣೆ ಕಾರಣಕ್ಕೆ ಪ್ರದಾನ ಆಗಿರಲಿಲ್ಲ. ಈ ಬಾರಿ ಹಿಂದಿನ ಎರಡು ವರ್ಷದ ಸಾಲಿನ ಪದಕ ವಿಜೇತರು ಮತ್ತು 2024ನೇ ಸಾಲಿನಲ್ಲಿ ಪದಕ ಪಡೆದವರು ಎಪ್ರಿಲ್ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬೆಂಗಳೂರಿನಲ್ಲಿ ಗೌರವ ಸ್ವೀಕರಿಸಲಿದ್ದಾರೆ.ಅಂದಹಾಗೆ, ಈ ಬಾರಿ ಮಂಗಳೂರಿನ ಸಿಸಿಬಿ ತಂಡಕ್ಕೆ ವಿಶೇಷ ಗೌರವ ಸಿಕ್ಕಂತಾಗಿದೆ.

ಮಂಗಳೂರಿನ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಟಿ ಕ್ರೈಮ್ ಬ್ರಾಂಚ್ ತಂಡದ 13 ಮಂದಿಯನ್ನು ಸಿಎಂ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಇಡೀ ದೇಶದ ಗಮನ ಸೆಳೆದಿದ್ದ 75 ಕೋಟಿ ಮೌಲ್ಯದ ಡ್ರಗ್ಸ್ ಹಿಡಿದಿದ್ದು ಮತ್ತು ಕೋಟೆಕಾರು ದರೋಡೆ ಪ್ರಕರಣದಲ್ಲಿ ಶೀಘ್ರ ಪತ್ತೆ ಕಾರ್ಯ ಮಾಡಿದ್ದಕ್ಕಾಗಿ ತಂಡದಲ್ಲಿ ಈ ಹಿಂದೆಯೇ ಸಿಎಂ ಪದಕ ಪಡೆದವರನ್ನು ಬಿಟ್ಟು ಪ್ರಮುಖ ಸದಸ್ಯರನ್ನು ಈ ಬಾರಿ ಸಿಎಂ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಒಂದು ವಿಭಾಗದ ಇಷ್ಟೊಂದು ಮಂದಿಯನ್ನು ಒಂದೇ ಬಾರಿಗೆ ಸಿಎಂ ಪದಕಕ್ಕೆ ಆಯ್ಕೆ ಮಾಡಿರುವುದು ಮಂಗಳೂರು ಸಿಸಿಬಿ ತಂಡಕ್ಕೆ ದೊಡ್ಡ ಕೋಡು ಸಿಕ್ಕಂತಾಗಿದೆ.

ಈ ಬಾರಿಯ ಪದಕ ವಿಜೇತ ತಂಡದಲ್ಲಿ ಸಿಸಿಬಿ ವಿಭಾಗದ ಎಎಸ್ಐ ರಿತೇಶ್, ಶೀನಪ್ಪ, ಹೆಡ್ ಕಾನ್ಸ್ ಟೇಬಲ್ ಗಳಾದ ಆಂಜನಪ್ಪ, ಭೀಮಪ್ಪ ಉಪ್ಪಾರ, ಪುರುಷೋತ್ತಮ, ಸುಧೀರ್ ಕುಮಾರ್, ದಾವೋದರ ಕೆ, ಸಂತೋಷ್ ಕುಮಾರ್, ವಿಜಯ ಶೆಟ್ಟಿ, ಶ್ರೀಧರ ವಿ, ಪ್ರಕಾಶ್ ಸಪ್ತಗಿಹಳ್ಳಿ, ಅಭಿಷೇಕ್ ಎ.ಆರ್ ಅವರನ್ನು ಸಿಎಂ ಪದಕಕ್ಕೆ ಆಯ್ಕೆ ಮಾಡಲಾಗಿದೆ. 2022ರಲ್ಲಿ ಸಿಸಿಬಿ ಘಟಕದ ಎಸ್ಐ ಸುದೀಪ್, 2023ರಲ್ಲಿ ಶರಣಪ್ಪ ಭಂಡಾರಿ, ಹೆಡ್ ಕಾನ್ಸ್ ಟೇಬಲ್ ನಾಗರಾಜ್ ಮತ್ತು ಎಎಸ್ಐ ಮೋಹನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದರೊಂದಿಗೆ, ಮಂಗಳೂರು ಸಿಸಿಬಿ ಘಟಕದಿಂದ ಇಬ್ಬರು ಪಿಎಸ್ಐ ಸೇರಿ ಒಟ್ಟು 17 ಮುಖ್ಯಮಂತ್ರಿ ಪದಕ ಪಡೆಯಲಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಕೂಡ ಇರಲಿದ್ದು, ಒಟ್ಟು ತಂಡಕ್ಕೆ ನೇತೃತ್ವ ನೀಡಲಿದ್ದಾರೆ.

ಇತ್ತೀಚೆಗೆ ಡ್ರಗ್ಸ್ ರಾಜಧಾನಿ ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿಯೇ ಡ್ರಗ್ಸ್ ತಂದು ವಿವಿಧ ಕಡೆಗಳಿಗೆ ಪೂರೈಸುತ್ತಿದ್ದ ದಕ್ಷಿಣ ಆಫ್ರಿಕಾ ಮೂಲದ ಇಬ್ಬರು ಪ್ರಜೆಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಮೂರು ತಿಂಗಳ ಹಿಂದೆ ಮಂಗಳೂರಿನಲ್ಲಿ ಸಿಕ್ಕಿಬಿದ್ದ ನೈಜೀರಿಯನ್ ಪ್ರಜೆಯೊಬ್ಬನಿಂದ ಸಿಕ್ಕಿದ್ದ ಸುಳಿವು ಆಧರಿಸಿ ಮಂಗಳೂರು ಪೊಲೀಸರು ದೆಹಲಿ ಮತ್ತು ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ಡ್ರಗ್ಸ್ ರೂವಾರಿಗಳನ್ನು ಪತ್ತೆಹಚ್ಚಿದ್ದರು. ರಾಜ್ಯದ ಮಟ್ಟಿಗೆ ಅತಿ ದೊಡ್ಡ ಡ್ರಗ್ಸ್ ಬೇಟೆಯಾಗಿದ್ದರಿಂದ ಮಂಗಳೂರಿನ ಪೊಲೀಸರಿಗೆ ಹೊಸ ಗರಿ ಸಿಕ್ಕಂತಾಗಿತ್ತು.

ಇದರ ನಡುವಲ್ಲೇ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಕೋಟೆಕಾರು ದರೋಡೆ ಪ್ರಕರಣವನ್ನೂ ಮಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೆಲವೇ ದಿನಗಳಲ್ಲಿ ಭೇದಿಸಿದ್ದರು. ಬೀದರ್ ಮತ್ತು ಮಂಗಳೂರಿನಲ್ಲಿ ಒಂದೇ ದಿನ ಅಂತರಕ್ಕೆ ದರೋಡೆ ಪ್ರಕರಣ ನಡೆದಿದ್ದರೂ, ಮಂಗಳೂರಿನ ದರೋಡೆ ಕೇಸನ್ನು ಅಷ್ಟೇ ವೇಗದಲ್ಲಿ ಭೇದಿಸಿದ್ದರಿಂದ ಇಲ್ಲಿನ ಪೊಲೀಸರಿಗೆ ಕ್ರೆಡಿಟ್ ಸಿಕ್ಕಿತ್ತು. ಎರಡು ಪ್ರಕರಣಗಳಲ್ಲಿಯೂ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮತ್ತು ಸಿಸಿಬಿ ಘಟಕದ ಎಸಿಪಿ ಮನೋಜ್ ನಾಯ್ಕ್, ಎಸಿಪಿ ಧನ್ಯಾ ನಾಯಕ್ ಮಾರ್ಗದರ್ಶನದಿಂದ ಪ್ರಕರಣ ಭೇದಿಸಲು ಸಾಧ್ಯವಾಗಿತ್ತು ಎಂದು ಸಿಬಂದಿ ನೆನೆಯುತ್ತಾರೆ.

2-3 ವರ್ಷಗಳ ಹಿಂದೆ ಮಂಗಳೂರು ಸಿಸಿಬಿ ಅಂದ್ರೆ ಗುಂಪುಗಾರಿಕೆ, ಕಾರು ಡೀಲಿಂಗ್ ವಿಚಾರಕ್ಕೆ ಸುದ್ದಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪೊಲೀಸರ ಗೌರವ ಹೆಚ್ಚಿಸುವ ಕೆಲಸವನ್ನು ಸಿಸಿಬಿ ತಂಡ ಮಾಡಿರುವುದು ಹೊಸ ಬೆಳವಣಿಗೆ. ಸಿಸಿಬಿ ಅಂದ್ರೆ ಡೀಲಿಂಗ್ ಮಾತ್ರಕ್ಕೆ ಎನ್ನುವ ಅಪವಾದ ನಿವಾಳಿಸುವ ಯತ್ನ ಮಾಡಿದ್ದಾರೆ. ನಿದ್ದೆ, ಕುಟುಂಬದ ಸಖ್ಯ ಬಿಟ್ಟು ಕೇಸಿನ ಹಿಂದೆ ಬಿದ್ದು ಮಾಡಿರುವ ಕೆಲಸಕ್ಕಾಗಿ ರಾಜ್ಯ ಸರ್ಕಾರವೂ ಬೆನ್ನು ತಟ್ಟುವ ಕೆಲಸ ಮಾಡಿದೆ. ಪೊಲೀಸ್ ಕಮಿಷನರ್ ಅವರ ನೇರ ಹಿಡಿತದಲ್ಲಿರುವ ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್ ಪೊಲೀಸರು ಸೂಕ್ತ ಮಾರ್ಗದರ್ಶನ ಸಿಕ್ಕಿದರೆ ಸಾಧ್ಯವಾಗದ್ದನ್ನೂ ಸಾಧಿಸಬಹುದು ಎನ್ನುವುದನ್ನು ಮಾಡಿ ತೋರಿಸಿದ್ದಾರೆ.

ಸಿಸಿಬಿ ತಂಡದಲ್ಲಿ ತುಂಬ ವರ್ಷಗಳಿಂದ ಝಂಡಾ ಹೂಡಿದವರಿದ್ದರು. ಆದರೆ ಕಳೆದ ಎರಡು ವರ್ಷದಲ್ಲಿ ಈ ತಂಡದಲ್ಲೂ ಹೊಸತನ ಬಂದಿದೆ. ಹೊಸ ಯುವಕರಿಗೂ ಸಿಸಿಬಿ ಎಂಟ್ರಿ ಸಿಕ್ಕಿದೆ. ಹೀಗಾಗಿ ಹೊಸ ಹುರುಪಿನೊಂದಿಗೆ ಕೆಲಸ ಮಾಡುತ್ತಿದ್ದಾರೆ. ಹಿಂದಿಗಿಂತ ಹೆಚ್ಚು ಸಿಬಂದಿಯನ್ನೂ ಕೊಟ್ಟಿದ್ದಲ್ಲದೆ ಹಳೆ ಬೇರು ಹೊಸ ಚಿಗುರು ಅನ್ನೋ ಹಾಗೆ ಹಳಬರು, ಹೊಸಬರು ತಂಡದಲ್ಲಿ ಜೊತೆಗೂಡಿದ್ದಾರೆ. ಎರಡು ವರ್ಷಗಳಿಂದ ಸಿಸಿಬಿ ತಂಡಕ್ಕೆ ಪ್ರತ್ಯೇಕ ಎಸಿಪಿಯನ್ನೂ ಸೇರಿಸಲಾಗಿದೆ. ಇದರಿಂದ ಇವರ ಮೇಲಿನ ಹೊಣೆಗಾರಿಕೆಯೂ ಹೆಚ್ಚಿದೆ. ಈ ಬಾರಿ ತಂಡದ ಸಾಧನೆಯನ್ನು ರಾಜ್ಯ ಸರ್ಕಾರವೂ ಗುರುತಿಸಿದ್ದು ವಿಶೇಷ.

Ads on article

Advertise in articles 1

advertising articles 2

Advertise under the article