ಬೆಂಗಳೂರು :ವಿಧಾನಸಭೆಯಲ್ಲಿ ರನ್ಯಾ ಪ್ರಕರಣ ಸದ್ದು ; ರಾಜ್ಯ ಸರ್ಕಾರಕ್ಕೆ ಮಾಹಿತಿ ಇಲ್ಲ ಎಂದ ಪರಮೇಶ್ವರ್, ರನ್ಯಾಗೆ ರಾಜಕಾರಣಿಗಳ ನಂಟು, ತುಮಕೂರಿನಲ್ಲಿ 12 ಎಕ್ರೆ ಭೂಮಿ !
ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡ ನಟಿ ರನ್ಯಾ ರಾವ್ ಪ್ರಭಾವಿ ರಾಜಕಾರಣಿಗಳ ಜೊತೆಗೆ ನಂಟಿರುವ ಆರೋಪ ಕೇಳಿಬಂದಿದೆ. ಇದಲ್ಲದೆ, ರನ್ಯಾ ರಾವ್ ಸಂಬಂಧಿಸಿದ ಮೆಸರ್ಸ್ ಕ್ಸಿರೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಜನವರಿ 2, 2023 ರಂದು ಕೆಐಎಡಿಬಿಯಿಂದ 12 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಿಇಒ ಮಹೇಶ್ ಸ್ಪಷ್ಟಪಡಿಸಿದ್ದಾರೆ. ತುಮಕೂರು ಜಿಲ್ಲೆಯ ಸಿರಾ ಕೈಗಾರಿಕಾ ಪ್ರದೇಶದಲ್ಲಿ ಈ ಭೂಮಿಯನ್ನು ನೀಡಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ 137 ನೇ ರಾಜ್ಯ ಮಟ್ಟದ ಏಕ ವಿಂಡೋ ಕ್ಲಿಯರೆನ್ಸ್ ಸಮಿತಿ (ಎಸ್‌ಎಲ್‌ಎಸ್‌ಡಬ್ಲ್ಯೂಸಿಸಿ) ಸಭೆಯಲ್ಲಿ ಭೂ ಹಂಚಿಕೆಗೆ ಅನುಮೋದಿಸಲಾಗಿತ್ತು ಎಂದು ಮಹೇಶ್ ಹೇಳಿದ್ದಾರೆ.
ಆಕೆಯ ಕಂಪನಿಯು 138 ಕೋಟಿ ರು. ಹೂಡಿಕೆಯೊಂದಿಗೆ ಉಕ್ಕಿನ ಟಿಎಂಟಿ ಬಾರ್‌ಗಳು, ರಾಡ್‌ಗಳು ಮತ್ತು ಸಂಬಂಧಿತ ಉತ್ಪನ್ನಗಳಿಗಾಗಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ಯೋಜನೆಯು ಸುಮಾರು 160 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿತ್ತು. ಆದರೆ ಉತ್ಪಾದನಾ ಘಟಕ ಆರಂಭವಾಗಿಲ್ಲ.

ಇದೇ ವೇಳೆ, ಚಿತ್ರ ನಟಿ ರನ್ಯಾ ರಾವ್ ರಾಜ್ಯದ ಪ್ರಭಾವಿ ರಾಜಕೀಯ ನಾಯಕರ ಜತೆ ನಂಟು ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ರಾಜಕೀಯ ವ್ಯಕ್ತಿಗಳ ಜತೆಗಿನ ನಂಟಿನ ಕಾರಣದಿಂದಲೇ ಜಮೀನು ಮಂಜೂರಾಗಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಸರಕಾರದ ಪ್ರಭಾವಿ ರಾಜಕಾರಣಿಯ ಹೆಸರು ಸಹ ಇದರಲ್ಲಿ ಕೇಳಿಬಂದಿದೆ.
ಬಿಕ್ಕಿ ಬಿಕ್ಕಿ ಅತ್ತ ರನ್ಯಾ- ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಟ್ರಾ ಎಂದ ಜಡ್ಜ್
ಇದೇ ವೇಳೆ, ರನ್ಯಾ ರಾವ್ ಳನ್ನು ಅಧಿಕಾರಿಗಳು ಬೆಂಗಳೂರಿನ ಕೋರ್ಟಿಗೆ ಹಾಜರು ಪಡಿಸಿದ್ದಾರೆ. ವಿಚಾರಣೆ ಆರಂಭಿಸಿದ ನ್ಯಾಯಾಧೀಶರು, ವಿಚಾರಣೆ ವೇಳೆ ಏನಾದ್ರೂ ತೊಂದರೆ ಕೊಟ್ಟಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ, ಮಾನಸಿಕವಾಗಿ ಹಿಂಸೆ ಆಗಿದೆ ಅಂತ ರನ್ಯಾ ಕಣ್ಣೀರು ಹಾಕಿದ್ದಾರೆ. ನನ್ನ ಪ್ರಶ್ನೆಗೆ ಉತ್ತರ ಕೊಡಿ, ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಟ್ರಾ ಎಂದು ಜಡ್ಜ್ ಮತ್ತೆ ಪ್ರಶ್ನೆ ಮಾಡಿದ್ರು. ಹೊಡೆದು ಬಡಿದು ಮಾಡಿಲ್ಲ. ಆದ್ರೆ ಕೆಟ್ಟದಾಗಿ ಬೈದಿದ್ದಾರೆ. ಡಿಆರ್ ಐ ಅಧಿಕಾರಿಗಳಿಂದ ಮಾನಸಿಕ ಹಿಂಸೆ ಆಗಿದೆ ಅಂತ ರನ್ಯಾ ಅಳಲು ತೋಡಿಕೊಂಡಿದ್ದಾರೆ. ರನ್ಯಾಗೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕಾಂಗ್ರೆಸ್ ನಾಯಕರ ಕೈವಾಡ ; ಬಿಜೆಪಿ ಆರೋಪ
ಸೋಮವಾರ ವಿಧಾನಸಭೆಯಲ್ಲು ರನ್ಯಾ ರಾವ್ ಪ್ರಕರಣ ಪ್ರಸ್ತಾಪವಾಗಿದ್ದು ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರು ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದರು. ಆದರೆ ಕಾಂಗ್ರೆಸ್ ನಾಯಕರು ಇದನ್ನು ನಿರಾಕರಿಸಿದ್ದಾರೆ. ರನ್ಯಾ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಈ ಪ್ರಕರಣದಲ್ಲಿ ಯಾವುದೇ ಮಂತ್ರಿಗಳು ಇನ್ವಾಲ್ ಆಗಿಲ್ಲ, ಯಾರ ಇನ್ವಾಲ್ಮೆಂಟ್ ಕೂಡ ಇಲ್ಲ. ಕೇಂದ್ರದ ತನಿಖಾ ಸಂಸ್ಥೆ ತನಿಖೆ ನಡೆಸ್ತಿದೆ. ತನಿಖೆ ನಡೆಯಲಿ ಎನ್ನುವ ಮೂಲಕ ವಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ಸರ್ಕಾರಕ್ಕೆ ಮಾಹಿತಿ ಇಲ್ಲ ; ಸಚಿವ
ಚಿನ್ನದ ಕಳ್ಳಸಾಗಣೆ ದಂಧೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ ವಿಧಾನಸಭೆಗೆ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಸಿಬಿಐನಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಪರಮೇಶ್ವರ್ ಹೇಳಿದರು. ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್, ಚಿನ್ನದ ಕಳ್ಳಸಾಗಣೆ ಪ್ರಕರಣ ಮತ್ತು ಕರ್ನಾಟಕದ ಇಬ್ಬರು ಮಂತ್ರಿಗಳ ಭಾಗಿಯಾಗಿರುವ ಆರೋಪದ ವರದಿ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ಗೃಹ ಸಚಿವರು, ಪ್ರಕರಣವನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವುದಿಲ್ಲ. ವಿಮಾನ ನಿಲ್ದಾಣಗಳ ಆಡಳಿತವೂ ರಾಜ್ಯ ಸರ್ಕಾರದಡಿ ಬರುವುದಿಲ್ಲ. ಆದರೆ, ಯಾವುದೇ ಚಿನ್ನದ ಕಳ್ಳಸಾಗಣೆ ನಡೆದಿಲ್ಲ ಎಂದು ನಾವು ಹೇಳುತ್ತಿಲ್ಲ. ನಮಗೆ ಮಾಹಿತಿ ಇಲ್ಲ ಎಂದು ಪರಮೇಶ್ವರ್ ಹೇಳಿದರು.