ಬೆಂಗಳೂರು: ನಕಲಿ ಅಂಕಪಟ್ಟಿ ಮಾರಾಟ ಜಾಲ; ಮೂವರನ್ನು ಸೆರೆಹಿಡಿದ ಪೊಲೀಸರು;10ರಿಂದ 15 ಸಾವಿರಕ್ಕೆ ಎಸ್ಸೆಸ್ಸೆಲ್ಸಿ-ಪಿಯುಸಿ ಅಂಕಪಟ್ಟಿ; ಮರ್ಕ್ಯುರಿ ಅಕಾಡೆಮಿ ಹೆಸರಲ್ಲಿ ಸರ್ಕಾರಕ್ಕೇ ದೋಖಾ,; ಎರಡು ಲಕ್ಷಕ್ಕೆ ಪದವಿ ಸರ್ಟಿಫಿಕೇಟ್.. ¡¡

ಬೆಂಗಳೂರು : ರಾಜ್ಯಾದ್ಯಂತ ವಿಸ್ತರಿಸಿಕೊಂಡಿದ್ದ ನಕಲಿ ಅಂಕಪಟ್ಟಿ ಜಾಲ ಭೇದಿಸಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಮೂವರು ದಂಧೆಕೋರರನ್ನು ಬಂಧಿಸಿದ್ದಾರೆ. ಧಾರವಾಡ ಚೈತನ್ಯ ನಗರದ ಪ್ರಶಾಂತ್ ಗುಂಡುಮಿ(41), ಗದಗ ಮೂಲದ ರಾಜಶೇಖರ್ (41), ಬೆಂಗಳೂರಿನ ಶ್ರೀನಿವಾಸ ನಗರದ ಕೆ.ಜೆ.ಮೋನಿಷ್ (36) ಬಂಧಿತರು.
ಆರೋಪಿಗಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ರಾಜ್ಯಾದ್ಯಂತ ಮಾರಾಟ ಮಾಡಿದ್ದಾರೆ. ಇದುವರೆಗೆ ಸುಮಾರು 350 ಮಂದಿ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡಿದ್ದಾರೆ. ಪ್ರತಿ ನಕಲಿ ಅಂಕಪಟ್ಟಿಗೆ 10ರಿಂದ 15 ಸಾವಿರ ರೂ. ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಸೃಷ್ಟಿಸಿಕೊಟ್ಟ ನಕಲಿ ಅಂಕಪಟ್ಟಿಗಳನ್ನು ಬಳಸಿದ ನೂರಾರು ಮಂದಿ ಸಾರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಳ ಹಂತದ ಹುದ್ದೆಗಳನ್ನು ಗಿಟ್ಟಿಸಿಕೊಂಡಿರುವ ಶಂಕೆಯಿದೆ. ಕೆಲವರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಿಕ್ಷಕಿಯರ ಹುದ್ದೆ ಪಡೆದುಕೊಂಡಿರುವ ಮಾಹಿತಿ ಇದೆ. ಇದಲ್ಲದೆ, ನಕಲಿ ಅಂಕಪಟ್ಟಿ ಬಳಸಿ ಪಾಸ್ ಪೋರ್ಟ್ ಮಾಡಿಕೊಂಡಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ.
ಎಂಬಿಎ ಪದವೀಧರ ಮಾಸ್ಟರ್ ಮೈಂಡ್
ಆರೋಪಿ ಪ್ರಶಾಂತ್ ಗುಂಡುಮಿ ಎಂಬಿಎ ಪದವೀಧರನಾಗಿದ್ದು, ನಕಲಿ ಅಂಕಪಟ್ಟಿ ಜಾಲದ ಸೂತ್ರಧಾರಿಯಾಗಿದ್ದ. ಈತನಿಗೆ ಸಹಾಯಕನಾಗಿ ರಾಜಶೇಖರ್ ಕೆಲಸ ಮಾಡುತ್ತಿದ್ದ. ಆರೋಪಿ ಮನೀಶ್ ಕತ್ರಿಗುಪ್ಪೆಯಲ್ಲಿ ಮರ್ಕ್ಯುರಿ ಅಕಾಡೆಮಿ ಡಿಸ್ಟೆನ್ಸ್ ಎಜುಕೇಶನ್ ಹೆಸರಿನಲ್ಲಿ ಸಂಸ್ಥೆ ನಡೆಸುತ್ತಿದ್ದ. ಮೂವರು ಆರೋಪಿಗಳು ಎಸ್ಸೆಸ್ಸೆಲ್ಸಿ ಹಾಗೂ ಪಿಯು ಅಂಕಪಟ್ಟಿ ಅಗತ್ಯ ಇರುವವರನ್ನು ಪರಿಚಯಿಸಿಕೊಳ್ಳುತ್ತಿದ್ದರು. ಬಳಿಕ ಅವರಿಂದ ಹಣ ಪಡೆದು ಪ್ರಿಂಟರ್ ಮೂಲಕ ನಕಲಿ ಅಂಕಪಟ್ಟಿ ತಯಾರಿಸಿ ಕೊಡುತ್ತಿದ್ದರು.
ಆರೋಪಿಗಳು ಅಂಕಪಟ್ಟಿ ಕೇಳಿಕೊಂಡು ಬಂದವರಿಗೆ ಮರ್ಕ್ಯುರಿ ಅಕಾಡೆಮಿ ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯೆಂದು ನಂಬಿಸುತ್ತಿದ್ದರು. ದೂರ ಶಿಕ್ಷಣದ ಮೂಲಕ ಎಸ್ಸೆಸ್ಸೆಲ್ಸಿ, ಪಿಯು ಶಿಕ್ಷಣ ನೀಡುತ್ತಿರುವುದಾಗಿ ಹೇಳುತ್ತಿದ್ದರು. ಆದರೆ ಸಂಸ್ಥೆಗೆ ದಾಖಲಾತಿ ನೆಪದಲ್ಲಿ ಹಣ ನೀಡಿದ ಕೆಲವೇ ದಿನಗಳಲ್ಲಿ ಅಂಕಪಟ್ಟಿಗಳನ್ನ ನೀಡುತ್ತಿದ್ದರು. ನಕಲಿ ಜಾಲದ ಬಗ್ಗೆ ಅಭ್ಯರ್ಥಿಗಳಿಗೆ ತಿಳಿದಿದ್ದರೂ ದೂರು ನೀಡದೇ ಇದ್ದುದರಿಂದ ಎರಡು ವರ್ಷದಲ್ಲಿ ರಾಜ್ಯಾದ್ಯಂತ ವಿಸ್ತರಿಸಿತ್ತು.
ಎರಡು ಲಕ್ಷ ಕೊಟ್ಟರೆ, ಪದವಿ ಅಂಕಪಟ್ಟಿ
ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿಯ ಮಿರ್ಜಾ ಇನಾಮುಲ್ ಹಕ್ ಎಂಬವರು ತಮ್ಮ ಸಹೋದರನ ಮಗನಿಗೆ ದೂರ ಶಿಕ್ಷಣದ ಮೂಲಕ ಎಸ್ಸೆಸ್ಸೆಲ್ಸಿ ಸೇರಿಸಲು ಮರ್ಕ್ಯುರಿ ಅಕಾಡೆಮಿಗೆ ಬಂದಿದ್ದರು. ದಾಖಲಾದ ಕೆಲವೇ ದಿನಗಳಲ್ಲಿ ಮರ್ಕ್ಯುರಿ ಅಕಾಡೆಮಿಯ ಸಿಬಂದಿ ಎಂದು ಹೇಳಿಕೊಂಡಿದ್ದ ಮೋನಿಷ್ ಎಂಬಾತ ಎರಡು ಲಕ್ಷ ರೂ. ನೀಡಿ, ಕೂಡಲೇ ನಿಮಗೆ ಅಂಕಪಟ್ಟಿ ನೀಡುತ್ತೇವೆ ಎಂದು ಹೇಳಿದ್ದ. ಜೊತೆಗೆ, ಪದವಿ, ಸ್ನಾತಕೋತ್ತರ ಪದವಿಗಳನ್ನೂ ನೀಡುವುದಾಗಿ ಹೇಳಿದ್ದ. ಅಷ್ಟೇ ಅಲ್ಲದೆ, ಹತ್ತು ಸಾವಿರ ಪಡೆದು ನಕಲಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ನೀಡಿದ್ದ. ಅದರ ನೈಜತೆ ಪರಿಶೀಲಿಸಿದಾಗ ನಕಲಿ ಎಂದು ಗೊತ್ತಾಗಿತ್ತು. ಹೀಗಾಗಿ ಮಿರ್ಜಾ ಅವರು ಪೊಲೀಸರಿಗೆ ದೂರು ನೀಡಿದ್ದು, ಸಿಸಿಬಿಯವರು ತನಿಖೆ ಕೈಗೆತ್ತಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.