ಬೆಂಗಳೂರು :ವಿಶ್ವ ಕ್ಯಾನ್ಸರ್ ದಿನ ;ಒಂದು ದಿನಕ್ಕೆ ಪೊಲೀಸ್ ಕಮಿಷನರ್ ಆದ ನಾಲ್ವರು ಕ್ಯಾನ್ಸರ್ ಪೀಡಿತ ಮಕ್ಕಳು ;ಒಂದು ದಿನದ ಮಟ್ಟಿಗೆ ಪೊಲೀಸ್ ಕಮಿಷನರ್ ಆಗುವ ಮೂಲಕ ಗಮನ ಸೆಳೆದರು.
Tuesday, February 4, 2025
ಬೆಂಗಳೂರು : ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಇಂದು ನಾಲ್ವರು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಒಂದು ದಿನದ ಪೊಲೀಸ್ ಕಮಿಷನರ್ ಆಗುವ ಅವಕಾಶವನ್ನ ಬೆಂಗಳೂರು ಪೊಲೀಸ್ ಇಲಾಖೆಯ ವತಿಯಿಂದ ಕಲ್ಪಿಸಲಾಗಿತ್ತು.
ಕಿದ್ವಾಯಿ ಆಸ್ಪತ್ರೆ ಹಾಗೂ ಪರಿಹಾರ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ಕೂ ಮಕ್ಕಳಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಹೂಗುಚ್ಛ ನೀಡಿ, ಸ್ವಾಗತಿಸಿದರು. ಬಳಿಕ ಬೆಂಗಳೂರಿನ ಸಂಚಾರ ಪೊಲೀಸ್ ನಿರ್ವಹಣಾ ಕೇಂದ್ರದಲ್ಲಿನ ಕಾರ್ಯಚಟುವಟಿಕೆಗಳ ಕುರಿತು ಮಕ್ಕಳಿಗೆ ವಿವರಿಸಲಾಯಿತು.
ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, "ಅಪರಾಧ ಕೃತ್ಯಗಳು ಸಮಾಜಕ್ಕೆ ಕ್ಯಾನ್ಸರ್ ರೋಗವಿದ್ದಂತೆ. ರೋಗಿಗಳನ್ನು ಕಾಪಾಡಲು ವೈದ್ಯರು ಶ್ರಮಿಸುವಂತೆಯೇ ಅಪರಾಧಗಳ ವಿರುದ್ಧ ಪೊಲೀಸರು ಹೋರಾಟ ನಡೆಸುತ್ತಿರುತ್ತಾರೆ" ಎಂದು ತಿಳಿಸಿದರು.
ಅದೇ ರೀತಿ ಜೀವನ ಸಹ ಬಹಳ ಅಮೂಲ್ಯವಾದದ್ದು, ಅದನ್ನು ರಸ್ತೆ ಅಪಘಾತಗಳಿಂದ ಕಳೆದುಕೊಳ್ಳಬಾರದು. ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತವಾಗಿರಬೇಕು'' ಎಂದು ಕೆಲವು ಸಲಹೆಗಳನ್ನು ನೀಡಿದರು.
ಎಕ್ಸ್ ಖಾತೆಯಲ್ಲಿ ಪೋಸ್ಟ್ : ''ಕನಸುಗಳನ್ನು ನಿಜವಾಗಿಸಲು ಒಂದು ಹೆಜ್ಜೆ! ವಿಶ್ವ ಕ್ಯಾನ್ಸರ್ ದಿನದಂದು, ಬೆಂಗಳೂರು ನಗರ ಪೊಲೀಸ್ ಇಲಾಖೆಯು ಪರಿಹಾರ್ ಮತ್ತು ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕೋಲೊಜಿ ಸಹಯೋಗದಲ್ಲಿ ಕಿಡ್ಸ್ ವಾರಿಯರ್ಸ್ (ಪೀಡಿಯಾಟ್ರಿಕ್ ಕ್ಯಾನ್ಸರ್ ಮಕ್ಕಳ) ಕನಸುಗಳ ಪೂರ್ಣಗೊಳಿಸಲು ಗೌರವಾನುಭವಿಗಳಾಗಿದ್ದೇವೆ. 12 ರಿಂದ 14 ವರ್ಷದ ನಾಲ್ವರು ಮಕ್ಕಳು ಇಂದು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ "ಒಂದು ದಿನದ ಪೊಲೀಸ್ ಅಧಿಕಾರಿ" ಆಗಿ ಸೇವೆ ಸಲ್ಲಿಸುವ ಅಪರೂಪದ ಅನುಭವ. ಈ ಹೃದಯಸ್ಪರ್ಶಿ ಕಾರ್ಯಕ್ರಮವು ಈ ಧೈರ್ಯಶಾಲಿ ಮಕ್ಕಳಿಗೆ ಸ್ಫೂರ್ತಿ ನೀಡಲು ಮತ್ತು ಸಂತೋಷ ತರಲು ಉದ್ದೇಶಿತವಾಗಿದೆ. ಇದರೊಂದಿಗೆ ಟ್ರಾಫಿಕ್ ಪೊಲೀಸ್ ಮ್ಯೂಸಿಯಂ ಭೇಟಿಯ ಮೂಲಕ ರಸ್ತೆ ಸುರಕ್ಷತೆ ಮತ್ತು ಜನರ ಪ್ರಾಣ ಉಳಿಸಲು ಬೆಂಗಳೂರು ಪೊಲೀಸರು ಹೇಗೆ ಕೆಲಸ ನಿರ್ವಹಿಸುತ್ತಾರೆ ಎಂಬುದನ್ನು ಅರ್ಥೈಸುವುದು ಈ ಕಾರ್ಯದ ಉದ್ದೇಶ'' ಎಂದು ನಗರ ಪೊಲೀಸ್ ಇಲಾಖೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದೆ.
ಕಾರ್ಯಕ್ರಮದಲ್ಲಿ ಪರಿಹಾರ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಣಿಶೆಟ್ಟಿ, ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ. ಎನ್. ಅನುಚೇತ್, ಕಿದ್ವಾಯಿ ಆಸ್ಪತ್ರೆಯ ವೈದ್ಯರಾದ ಅರುಣ್, ಲೋಕೇಶ್, ರಾಜಣ್ಣ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.