ಮಂಗಳೂರು : ಪಾಲಿಕೆಯಲ್ಲಿ ಬಿಜೆಪಿ ಆಡಳಿತ!!ಸಮೀಪದಲ್ಲಿದ್ದ ಅಕ್ರಮ ಕಸಾಯಿಖಾನೆ ಗೊತ್ತಾಗದಿರುವುದು ವಿಪರ್ಯಾಸ!! ನಗರದ ಕುದ್ರೋಳಿಯಲ್ಲಿ ಸಾವಿರಾರು ಜಾನುವಾರು ರುಂಡ ಪತ್ತೆ; ಆಡಳಿತದ ಕೊನೆಯಲ್ಲಿ ಮೇಯರ್ ತಂಡದಿಂದ ದಾಳಿ ನಾಟಕ !
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಐದು ವರ್ಷಗಳಿಂದ ಬಿಜೆಪಿಯವರೇ ಆಡಳಿತ ನಡೆಸುತ್ತಿದ್ದಾರೆ. ಮೊದಲ ಮೂರು ವರ್ಷಗಳಲ್ಲಿ ರಾಜ್ಯದಲ್ಲೂ ಬಿಜೆಪಿಯದ್ದೇ ಆಡಳಿತ ಇತ್ತು. ಈ ನಡುವೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ್ದೂ ಆಗಿತ್ತು. ಹಿಂದು ಸಂಘಟನೆಗಳು, ಬಿಜೆಪಿಯವರು ಅಕ್ರಮ ಕಸಾಯಿಖಾನೆ ವಿರುದ್ಧ ಹೋರಾಟ ನಡೆಸಿದ್ದೂ ಆಗಿತ್ತು. ಇದೇ ವೇಳೆ, ಮಂಗಳೂರಿನ ಕೇಂದ್ರ ಸ್ಥಾನ ಕುದ್ರೋಳಿಯಲ್ಲಿದ್ದ ಕಸಾಯಿಖಾನೆಗೆ ಹಸಿರು ಪೀಠದ ನಿಷೇಧದಿಂದಾಗಿ ಬೀಗಿ ಬಿದ್ದಿತ್ತು. ವಿಚಿತ್ರ ಎಂದರೆ, ಈ ಕಸಾಯಿಖಾನೆಗೆ ನಾಲ್ಕು ವರ್ಷಗಳಿಂದ ಬೀಗ ಬಿದ್ದಿದ್ದರೂ, ಅಲ್ಲಿಯೇ ಪಕ್ಕದಲ್ಲಿ ಅಕ್ರಮವಾಗಿ ಕುರಿ, ಆಡು, ಗೋವುಗಳನ್ನು ಕಡಿಯುತ್ತ ಬರಲಾಗಿತ್ತು!
ಶುಕ್ರವಾರ ಮಂಗಳೂರು ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಜನಸಾಮಾನ್ಯರು ಬೆಚ್ಚಿ ಬೀಳುವ ಸ್ಥಿತಿ ಎದುರಾಗಿತ್ತು. ಯಾಕಂದ್ರೆ, ಅಲ್ಲಿ ಸಾವಿರಾರು ಜಾನುವಾರುಗಳನ್ನು ಕಡಿದು ಅವುಗಳ ಎಲುಬು, ರುಂಡಗಳನ್ನು ರಾಶಿ ಹಾಕಲಾಗಿತ್ತು. ಪಾಲಿಕೆಯ ಅವಧಿ ಇದೇ ಫೆಬ್ರವರಿಗೆ ಕೊನೆಯಾಗಲಿದ್ದು, ಮುಂದಿನ ಎರಡು ತಿಂಗಳಲ್ಲಿ ಹೊಸ ಆಡಳಿತಕ್ಕಾಗಿ ಚುನಾವಣೆ ನಡೆಯುತ್ತದೆ. ಈವರೆಗೂ ಬಿಜೆಪಿಯದ್ದೇ ಆಡಳಿತ ಇದ್ದರೂ, ಪಾಲಿಕೆಯ ಕಟ್ಟಡ ಇರುವ ಲಾಲ್ ಬಾಗ್ ನಿಂದ ಕೂಗಳತೆ ದೂರದಲ್ಲಿರುವ ಕುದ್ರೋಳಿಯಲ್ಲಿ ಅಕ್ರಮ ಕಸಾಯಿಖಾನೆ ಆಗುತ್ತಿರುವುದು ಆಡಳಿತದ ಗಮನಕ್ಕೇ ಬಂದಿಲ್ಲ ದಿರುವುದು ವಿಶೇಷ.
ಈಗ ಸಾರ್ವಜನಿಕರ ದೂರಿನಂತೆ, ದಿಢೀರ್ ದಾಳಿಯ ನಾಟಕ ಮಾಡಿರುವ ಬಿಜೆಪಿ ಆಡಳಿತದವರು ಅಕ್ರಮ ಕಸಾಯಿಖಾನೆಯನ್ನು ಪತ್ತೆ ಮಾಡಿರುವಂತೆ ಪೋಸು ನೀಡಿದ್ದಾರೆ. ಆರಂಭದಲ್ಲಿ ಕಸಾಯಿಖಾನೆ ಎದುರು ಭಾಗದಲ್ಲಿ ನೋಡಿದಾಗ, ಅಲ್ಲಿ ಜಾನುವಾರು ವಧೆ ಮಾಡುವ ರೀತಿ ಕಾಣುತ್ತಿರಲಿಲ್ಲ. ಅಲ್ಲಿಯೇ ಪಕ್ಕದ ಖಾಸಗಿ ಜಾಗದ ಕಟ್ಟಡವನ್ನು ಪರಿಶೀಲಿಸಿದಾಗ, ಎದುರಿನಲ್ಲಿ ಬೀಗ ಜಡಿದಿತ್ತು. ಮೇಯರ್ ಮತ್ತು ಕಾರ್ಪೊರೇಟರುಗಳು ಆ ಬೀಗವನ್ನು ಕಲ್ಲಿನಿಂದ ಒಡೆದು ಒಳನುಗ್ಗಿದ್ದಾರೆ. ಕಟ್ಟಡದ ಒಳಗಡೆ ಕಸಾಯಿಖಾನೆ ಮಾತ್ರವಲ್ಲ, ಕಡಿದು ಹಾಕಿದ ಜಾನುವಾರುಗಳ ರುಂಡಗಳು, ಚರ್ಮ, ಎಲುಬಿನ ರಾಶಿಯೇ ಇತ್ತು. ಜಾನುವಾರು ವಧೆ ಮಾಡುವ ಸ್ಥಳ, ತೂಕಮಾಪನ, ಮಾಂಸ ಜೋತು ಹಾಕುವ ಹುಕ್ ಗಳೂ ಇದ್ದವು. ಸುಮಾರು ಸಾವಿರಕ್ಕೂ ಹೆಚ್ಚು ಕುರಿ, ಗೋವುಗಳ ರುಂಡಗಳಿದ್ದು, ಅಲ್ಲಿನ ದುರಂತ ಸ್ಥಿತಿಗೆ ಸಾಕ್ಷಿಯಾಗಿತ್ತು. ಪರಿಸರವಿಡೀ ದುರ್ವಾಸನೆ ಬೀರುತ್ತಿದ್ದರೆ, ಮತ್ತೊಂದೆಡೆ ನೊಣಗಳು ಮುತ್ತಿಕ್ಕುತ್ತಿದ್ದವು. ಇಡೀ ಕಟ್ಟಡದಲ್ಲಿ ಪ್ರಾಣಿಗಳ ದೇಹದ ಭಾಗಗಳು ಬಿದ್ದುಕೊಂಡಿದ್ದವು.
ಅಲ್ಲಿನ ಸ್ಥಿತಿಯನ್ನು ನೋಡಿದ ಮೇಯರ್ ಮನೋಜ್ ಕುಮಾರ್ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಆರೋಗ್ಯ ಅಧಿಕಾರಿಗಳೇ ಏನು ಮಾಡುತ್ತಿದ್ದೀರಿ, ನಗರದ ಕೇಂದ್ರ ಭಾಗದಲ್ಲೇ ಇಂತಹ ಚಟುವಟಿಕೆ ನಡೆಯುತ್ತಿರುವಾಗ ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ ಎಂದು ಪ್ರಶ್ನೆ ಮಾಡಿದರು. ಅಲ್ಲಿಯೇ ಇದ್ದ ಕಸಾಯಿಖಾನೆಯ ಉಸ್ತುವಾರಿ ವಹಿಸಿಕೊಂಡ ಮೊಹಮ್ಮದ್ ಅವರಲ್ಲಿ ಆಡು, ಕುರಿ ವಧೆ ಮಾಡುವುದಕ್ಕೆಲ್ಲ ಪರವಾನಗಿ ಇದೆಯೇ ಮೇಯರ್ ಪ್ರಶ್ನಿಸಿದಾಗ, ಬಿಸಿ ರೋಡ್ ಲ್ಲಿ ವಧೆ ಮಾಡಿ ಕಾರಿನಲ್ಲಿ ತರುತ್ತೇವೆ ಸಾರ್ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಮೋನಾಕ್ಕ ಎನನ್ ಕುರಿ ಮಲ್ತರಾಂದ್ (ನನ್ನನ್ನು ಕುರಿ ಮಾಡಿದ್ರಾಂತ) ಎಂದು ಚಟಾಕಿ ಹಾರಿಸಿದರು. ಸ್ಥಳದಲ್ಲೇ ಜಾನುವಾರುಗಳನ್ನು ವಧೆ ಮಾಡುವುದು ಕಣ್ಣಿಗೆ ಕಟ್ಟುವಂತಿದ್ದರೂ, ಅಲ್ಲಿದ್ದವರ ಮೇಲೆ ಕ್ರಮಕ್ಕೆ ಮೇಯರ್ ಸೂಚನೆ ನೀಡಲಿಲ್ಲ.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಾಗಲೇ ಕುದ್ರೋಳಿ ಕಸಾಯಿಖಾನೆಗೂ ಬೀಗ ಬಿದ್ದಿತ್ತು. ಅಲ್ಲಿ ಸ್ವಚ್ಛತೆ ಇಲ್ಲ, ಎನ್ ಜಿಟಿ ನಿಮಯ ಪಾಲನೆ ಮಾಡಿಲ್ಲ ಎಂದು ಮಹಾನಗರ ಪಾಲಿಕೆಯಿಂದಲೇ ನಡೆಯುತ್ತಿದ್ದ ಕಸಾಯಿಖಾನೆಯನ್ನು ಬಂದ್ ಮಾಡಲಾಗಿತ್ತು. ಅದಕ್ಕೂ ಹಿಂದೆಯೂ ಅಲ್ಲಿ ಅಕ್ರಮವಾಗಿ ಗೋವುಗಳನ್ನು ಕಡಿಯುತ್ತಿದ್ದರೂ, ಹಿಂದು ಸಂಘಟನೆಗಳ ಆಕ್ಷೇಪ ಇದ್ದರೂ ಕಡಿವಾಣ ಬಿದ್ದಿರಲಿಲ್ಲ. ವಿಶೇಷ ಅಂದ್ರೆ, ನಾಲ್ಕು ವರ್ಷಗಳಿಂದ ಕಸಾಯಿಖಾನೆ ಬಂದ್ ಆಗಿದ್ದರೂ, ಅಲ್ಲಿಯೇ ಖಾಸಗಿ ಕಟ್ಟಡದಲ್ಲಿ ರಾಜಾರೋಷ ಎನ್ನುವಂತೆ ಜಾನುವಾರು ಕಡಿಯಲಾಗುತ್ತಿತ್ತು ಎನ್ನುವುದಕ್ಕೆ ಸಾಕ್ಷ್ಯ ಲಭ್ಯವಾಗಿದೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತವೇ ಇದ್ದರೂ, ಇವರ ಮೂಗಿನಡಿಯೇ ಅಕ್ರಮ ನಡೆಯುತ್ತಿದ್ದರೂ, ಈಗ ತಮಗೇನೂ ಗೊತ್ತೇ ಇಲ್ಲ ಎಂಬಂತೆ ನಾಟಕ ಮಾಡುತ್ತಿದ್ದಾರೆ. ಪಾಲಿಕೆಯ ಚುನಾವಣೆಗೆ ದಿನ ಸಮೀಪಿಸುತ್ತಿದೆ ಎಂದು ಇವರು ಕಸಾಯಿಖಾನೆಯತ್ತ ಕಣ್ಣು ಹಾಕಿದ್ದಾರೋ ಗೊತ್ತಿಲ್ಲ.