ಮಹಾರಾಷ್ಟ್ರ :ಮಹಾಶಿವರಾತ್ರಿ ನಿಮಿತ್ತ ನದಿಯಲ್ಲಿ ಸ್ನಾನ: ಮೂವರು ಸಹೋದರಿಯರು, ಓರ್ವ ಬಾಲಕ ಸೇರಿ ಆರು ಮಂದಿ ಸಾವು!

ಮಹಾರಾಷ್ಟ್ರ :ಮಹಾಶಿವರಾತ್ರಿ ನಿಮಿತ್ತ ನದಿಯಲ್ಲಿ ಸ್ನಾನ: ಮೂವರು ಸಹೋದರಿಯರು, ಓರ್ವ ಬಾಲಕ ಸೇರಿ ಆರು ಮಂದಿ ಸಾವು!

ಚಂದ್ರಾಪುರ : ಮಹಾಶಿವರಾತ್ರಿಯ ಸಂದರ್ಭದಲ್ಲಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಆರು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ. ಚಂದ್ರಾಪುರ ಜಿಲ್ಲೆಯ ರಾಜುರಾ ಮತ್ತು ಸಾವ್ಲಿ ಎಂಬಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಈ ಘಟನೆಗಳು ನಡೆದಿವೆ.

ಸಾವ್ಲಿಯಲ್ಲಿ ನಗರದ ಒಂದೇ ಮನೆಯ ಮೂವರು ಸಹೋದರಿಯರು ಸಾವನ್ನಪ್ಪಿದ್ದಾರೆ. ರಾಜುರಾ ತಾಲೂಕಿನಲ್ಲಿಯೂ ಒಂದೇ ಗ್ರಾಮದ ಮೂವರು ಯುವಕರು ದುರಂತ ಅಂತ್ಯ ಕಂಡಿದ್ದಾರೆ.

ಮಹಾಶಿವರಾತ್ರಿಗೆಂದು ಚಂದ್ರಾಪುರ ಜಿಲ್ಲೆಯ ಬಳಿಯ ಮಾರ್ಕಂಡ ದೇವಸ್ಥಾನಕ್ಕೆ ಸಾವ್ಲಿಯ ಮಂಡಲ್ ಕುಟುಂಬ ದರ್ಶನಕ್ಕಾಗಿ ತೆರಳಿತ್ತು. ದೇವಸ್ಥಾನಕ್ಕೆ ತೆರಳುವ ವೇಲೆ ಹರಣಘಾಟ್ ರಸ್ತೆ ಕೆಟ್ಟಿದ್ದರಿಂದ, ಗಡ್ಚಿರೋಲಿ ಮೂಲಕ ಹಾದು ಹೋಗುತ್ತಿದ್ದರು. ಈ ವೇಳೆ, ವ್ಯಾಹದ್​ ಭುಜ್‌ನಲ್ಲಿ ವೈನ್‌ಗಂಗಾ ನದಿ ನೋಡಿದ ಈ ಕುಟುಂಬ ಸ್ನಾನ ಮಾಡಲು ನಿರ್ಧರಿಸಿ ನದಿಗೆ ಇಳಿದಿದ್ದಾರೆ.

ಅವರಲ್ಲಿ ಮೂವರು ಸಹೋದರಿಯರಾದ ಪ್ರತಿಮಾ ಪ್ರಕಾಶ್ ಮಂಡಲ್ (23), ಕವಿತಾ ಪ್ರಕಾಶ್ ಮಂಡಲ್ (21), ಲಿಪಿಕಾ ಪ್ರಕಾಶ್ ಮಂಡಲ್ (18), ಅವರ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಅವರ ನಾಲ್ಕು ವರ್ಷದ ಮಗ ಇದ್ದರು. ನೀರಿನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಓರ್ವ ತಂಗಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿದ್ದಳು. ಅವಳು ಮುಳುಗುತ್ತಿರುವುದನ್ನು ನೋಡಿ ಇತರ ಇಬ್ಬರು ಸಹೋದರಿಯರು ಅವಳನ್ನು ರಕ್ಷಿಸಲು ಧಾವಿಸಿದ್ದಾರೆ. ದುರದೃಷ್ಟವಶಾತ್​ ಮೂವರು ಕೂಡ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಸಾವ್ಲಿಯ ವಿಪತ್ತು ತಂಡ ಶವಗಳಿಗಾಗಿ ಪತ್ತೆ ಕಾರ್ಯಾಚರಣೆ ನಡೆಸುತ್ತಿದೆ. ಸಹೋದರಿಯರನ್ನು ಕಳೆದುಕೊಂಡ ಕುಟುಂಬ ರೋದಿಸುತ್ತಿದೆ.


ವಾರ್ಧಾ ನದಿಯಲ್ಲಿ ಮೂವರು ಮುಳುಗಿ ಸಾವು: ಮತ್ತೊಂದು ಘಟನೆಯಲ್ಲಿ, ರಾಜೂರ ತಾಲೂಕಿನಲ್ಲಿ ಮಹಾಶಿವರಾತ್ರಿಯ ಹಿನ್ನೆಲೆ ವಾರ್ಧಾ ನದಿಯಲ್ಲಿ ಸ್ನಾನ ಮಾಡಲು ಮೂವರು ಯುವಕರು ತೆರಳಿದ್ದು, ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ತುಷಾರ್ ಶಾಲಿಕ್ ಅತ್ರಮ್ (17), ಮಂಗೇಶ್ ಬಂಡು ಚನಕಪುರೆ (20) ಮತ್ತು ಅನಿಕೇತ್ ಶಂಕರ್ ಕೊಡಪೆ (18) ಮೃತರು.

ಇಲ್ಲಿ ಕೂಡ ಯುವಕರ ಮೃತದೇಹಕ್ಕಾಗಿ ದೋಣಿಯ ಮೂಲಕ ಹುಡುಕಾಟ ನಡೆಯುತ್ತಿದೆ. ಸದ್ಯ ತುಷಾರ್ ಶಾಲಿಕ್ ಅತ್ರಮ್ ಎಂಬ ಬಾಲಕನ ಮೃತ ದೇಹ ದೊರಕಿದೆ. ಇನ್ನುಳಿದವರಿಗಾಗಿ ಹುಡುಕಾಟ ನಡೆದಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article