ರಾಯಚೂರು :ಸಿಂಧನೂರಲ್ಲಿ ಮಂಗಳಮುಖಿ ಮಂಗಳಕರ ಸೇವೆ; ಪ್ರತಿ ವರ್ಷ ಭಿಕ್ಷೆ ಬೇಡಿ ಬಡ ಜೋಡಿಗಳ ಮದುವೆ;ಸಮಾಜಮುಖಿ ಕಾರ್ಯದಲ್ಲಿ ತೊಡಗುತ್ತಿರುವ ಮಂಗಳಮುಖಿ
Saturday, February 8, 2025
ರಾಯಚೂರು: ಈಗೀಗ ಮಂಗಳಮುಖಿಯರು ಸಮಾಜಮುಖಿ ಕೆಲಸಗಳಲ್ಲಿ ಕಂಡು ಬರುತ್ತಿದ್ದಾರೆ. ಸಮಾಜದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲರಂತೆ ಮಂಗಳಮುಖಿಯರು ಜೀವನ ನಡೆಸಲು ಬಯಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಂಗಳಮುಖಿ ಒಬ್ಬರು ಉಚಿತವಾಗಿ ಮದುವೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಜಿಲ್ಲೆಯ ಸಿಂಧನೂರು ನಗರದ ಜಮುನಮ್ಮ ಜೋಗುತಿ ಎನ್ನುವರು ಇತ್ತೀಚಿನ ವರ್ಷಗಳಲ್ಲಿ ಸಾಮಾಜ ಮುಖಿ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಇವರು ಜೀವನಕ್ಕಾಗಿ ಭಿಕ್ಷಾಟನೆ ಮಾಡುತ್ತಾರೆ. ಇದರಲ್ಲಿ ತಮಗೆ ಖರ್ಚಿಗೆ ಎಷ್ಟು ಬೇಕೋ ಅಷ್ಟು ಹಣವನ್ನು ತೆಗೆದುಕೊಂಡು ಉಳಿದಿದ್ದನ್ನು ತೆಗೆದು ಇಡುತ್ತಾರೆ. ಈ ತೆಗೆದಿಟ್ಟ ಹಣದಲ್ಲಿಯೇ ಬಡ ಜೋಡಿಗಳನ್ನ ಹುಡುಕಿ ಜೋಗುತಿ ಮದುವೆ ಮಾಡಿಕೊಡುತ್ತಾರೆ.
ಜಮುನಮ್ಮ ಜೋಗುತಿ ಆರಂಭದಲ್ಲಿ ಒಂದು ಜೋಡಿಯ ಮದುವೆ ಮಾಡಿದ್ದರು. ಇದಾದ ಮೇಲೆ ಮುಂದಿನ ವರ್ಷ ನಾಲ್ಕು ಜೋಡಿಗಳಿಗೆ ವಿವಾಹ ಮಾಡಿದ್ದರು. ಈ ರೀತಿ ಮದುವೆ ಮಾಡಬೇಕು ಎಂದರೆ ದಾನದ ರೀತಿಯಲ್ಲಿ ಯಾರಿಂದಲೂ 1 ರೂಪಾಯಿಯನ್ನು ಕೂಡ ಪಡೆಯುವುದಿಲ್ಲ. ತನ್ನ ಕೆಲಸದಿಂದ ಬರುವ ಹಣದಿಂದಲೇ ಎಲ್ಲವನ್ನು ಸರಿದೂಗಿಸುತ್ತಾರೆ.
ನವ ಜೋಡಿಗಳಿಗೆ ಕೊಡಬೇಕಾದ ಮಾಂಗಲ್ಯ, ಕಾಲುಂಗುರ, ಹೊಸ ಬಟ್ಟೆಗಳನ್ನು ನೀಡುತ್ತಾರೆ. ಇದರ ಜೊತೆಗೆ ಊಟದ ವ್ಯವಸ್ಥೆ ಸೇರಿದಂತೆ ಇತರೆ ಎಲ್ಲ ವ್ಯವಸ್ಥೆ ಮಾಡಿರುತ್ತಾರೆ. ಕಳೆದ ಐದು ವರ್ಷಗಳಿಂದ ಜಮುನಮ್ಮ ಜೋಗತಿ ಈ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ಸ್ಥಳೀಯರು ಇವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.