ದೆಹಲಿ :ಜಗತ್ತಿನ ಎರಡನೇ ಅತಿದೊಡ್ಡ ಸರ್ಕಾರಿ ಬಂಗಲೆ ರಾಷ್ಟ್ರಪತಿ ಭವನದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಮದುವೆ ಸಮಾರಂಭಕ್ಕೆ ಅಸ್ತು ! ರಾಷ್ಟ್ರಪತಿ ದ್ರೌಪದಿ ಮುರ್ಮುರವರ ಖಾಸಗಿ ಭದ್ರತಾ ಸಿಬ್ಬಂದಿ ಸಿ ಆರ್ ಫಿ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಪೂನಂ ಗುಪ್ತ ಅವರ ಮದುವೆ ಸಮಾರಂಭದ ಸಿದ್ಧತೆ.
ನವದೆಹಲಿ, ಫೆ.4: ಜಗತ್ತಿನ ಅತಿದೊಡ್ಡ ಸರ್ಕಾರಿ ಬಂಗಲೆ ಎನಿಸಿರುವ ಭಾರತದ ರಾಷ್ಟ್ರಪತಿ ಭವನ ಇತಿಹಾಸದಲ್ಲೇ ಮೊದಲ ಬಾರಿಗೆ ಮದುವೆ ಸಮಾರಂಭಕ್ಕೆ ಸಿದ್ಧಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಖಾಸಗಿ ಭದ್ರತಾ ಸಿಬಂದಿ ಆಗಿರುವ ಸಿಆರ್ ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಪೂನಮ್ ಗುಪ್ತಾ ಮದುವೆಯನ್ನು ವೈಭವೋಪೇತ ಬಂಗಲೆಯಲ್ಲಿ ನಡೆಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಪೂನಮ್ ಗುಪ್ತಾ ಅವರನ್ನು ಸಿಆರ್ ಪಿಎಫ್ ನಲ್ಲೇ ಅಸಿಸ್ಟೆಂಟ್ ಕಮಾಂಡೆಂಟ್ ಆಗಿರುವ ಅವನೀಶ್ ಕುಮಾರ್ ಫೆ.12ರಂದು ವರಿಸಲಿದ್ದಾರೆ. 300 ಎಕ್ರೆ ವ್ಯಾಪ್ತಿಯ ರಾಷ್ಟ್ರಪತಿ ಭವನ ಸಂಕೀರ್ಣದ ಒಳಗಿನ ಮದರ್ ತೆರೆಸಾ ಕ್ರೌನ್ ಕಾಂಪ್ಲೆಕ್ಸ್ ನಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಕೇವಲ ಹತ್ತಿರದ ಸಂಬಂಧಿಕರಿಗೆ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ರಾಷ್ಟ್ರಪತಿ ಭವನ ದೇಶದ ಪರಮೋಚ್ಛ ಗೌರವದ ಹುದ್ದೆಯೆನಿಸಿರುವ ರಾಷ್ಟ್ರಾಧ್ಯಕ್ಷರ ಸರ್ಕಾರಿ ನಿವಾಸವಾಗಿದ್ದು, ಸುಂದರ ಕೆತ್ತನೆಗಳಿಂದಾಗಿ ಜಗತ್ತಿನಲ್ಲೇ ಅತ್ಯಂತ ಆಕರ್ಷಕ ಮತ್ತು ಹಳೆಯ ಬಂಗಲೆಗಳಲ್ಲಿ ಒಂದೆನಿಸಿದೆ.


ಬ್ರಿಟಿಷ್ ಅಧಿಕಾರಿ ಸರ್ ಎಡ್ವಿನ್ ಲ್ಯೂಟನ್ಸ್ ಕಲ್ಪನೆಯಲ್ಲಿ 300 ಎಕ್ರೆ ವ್ಯಾಪ್ತಿಯಲ್ಲಿ ಪಾರ್ಕ್, ಭದ್ರತಾ ಕೊಠಡಿ ಒಳಗೊಂಡು ರಾಷ್ಟ್ರಾಧ್ಯಕ್ಷರ ನಿವಾಸವನ್ನು ನಿರ್ಮಿಸಲಾಗಿದೆ. 340 ಕೊಠಡಿಗಳನ್ನು ಒಳಗೊಂಡ ನಾಲ್ಕು ಅಂತಸ್ತಿನ ಬಂಗಲೆಯ ಕಟ್ಟಡ ಎರಡು ಲಕ್ಷ ಚದರಡಿಯಲ್ಲಿ ಹರಡಿಕೊಂಡಿದೆ. ದೇಶದ ಪರಮೋಚ್ಚ ನಾಯಕ ಸ್ಥಾನದ ವ್ಯಕ್ತಿ ನೆಲೆಸುವ ಜಗತ್ತಿನ ಎರಡನೇ ಅತಿ ದೊಡ್ಡ ಅಧಿಕೃತ ಸರ್ಕಾರಿ ನಿವಾಸವೂ ಇದಾಗಿದೆ. ಇಟಲಿಯ ಕ್ವಿರಿನಲ್ ಪ್ಯಾಲೇಸ್ ಜಗತ್ತಿನಲ್ಲಿ ಅತಿ ದೊಡ್ಡ ಸರ್ಕಾರಿ ನಿವಾಸ ಎಂದೆನಿಸಿದೆ. ಇಂಥ ಪ್ರತಿಷ್ಠಿತ ಬಂಗಲೆಯನ್ನು ವಿದೇಶಿ ಗಣ್ಯರಿಗೆ ಆತಿಥ್ಯ ನೀಡುವುದಕ್ಕೆ ಮಾತ್ರ ಬಳಸಲಾಗಿತ್ತು. ಈವರೆಗೂ ಖಾಸಗಿಯಾಗಿ ಯಾವುದೇ ಸಮಾರಂಭಕ್ಕೆ ಇಲ್ಲಿ ಅವಕಾಶ ನೀಡಿರಲಿಲ್ಲ.
ಹೀಗಾಗಿ ರಾಷ್ಟ್ರಪತಿ ಭವನದಲ್ಲಿ ಮದುವೆ ಸಮಾರಂಭ ಏರ್ಪಡಿಸಲಾಗಿದೆ ಎನ್ನುವ ಸುದ್ದಿಯನ್ನು ಆರಂಭದಲ್ಲಿ ಯಾರೂ ನಂಬಿರಲಿಲ್ಲ. ಆದರೆ ದ್ರೌಪದಿ ಮುರ್ಮು ಅವರು ಪೂನಂ ಗುಪ್ತಾ ಅವರ ಬದ್ಧತೆ ಮತ್ತು ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಮದುವೆ ಸಮಾರಂಭಕ್ಕೆ ವಿಶೇಷ ಅನುಮತಿ ನೀಡಿದ್ದಾರೆ ಅನ್ನುವುದು ಈಗ ಮೂಲಗಳಿಂದ ದೃಢಪಟ್ಟಿದೆ. 74ನೇ ಗಣರಾಜ್ಯೋತ್ಸವ ಪರೇಡ್ ಸಂದರ್ಭದಲ್ಲಿ ಸಿಆರ್ ಪಿಎಫ್ ಮಹಿಳೆಯರ ವಿಭಾಗವನ್ನು ಪೂನಂ ಗುಪ್ತಾ ಮುನ್ನಡೆಸಿದ್ದು ದೇಶದ ಗಮನಸೆಳೆದಿತ್ತು. ರಾಷ್ಟ್ರಪತಿ ಭವನಕ್ಕೆ ಪೋಸ್ಟಿಂಗ್ ಆಗುವುದಕ್ಕೂ ಮುನ್ನ ಪೂನಮ್ ಗುಪ್ತಾ ಅವರು ಬಿಹಾರದಲ್ಲಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕೆಲಸ ಮಾಡಿದ್ದರು.
ಪೂನಂ ಗುಪ್ತಾ ಅವರು ಭದ್ರತಾ ಸೇವೆಗೆ ಸೇರುವುದಕ್ಕೂ ಮೊದಲು ಮ್ಯಾಥೆಮೆಟಿಕ್ಸ್ ನಲ್ಲಿ ಪದವಿ, ಇಂಗ್ಲಿಷ್ ಸಾಹಿತ್ಯದಲ್ಲಿ ಮಾಸ್ಟರ್ ಪದವಿ, ಗ್ವಾಲಿಯರ್ ಯುನಿವರ್ಸಿಟಿಯಲ್ಲಿ ಬಿಎಡ್ ಪದವಿಯನ್ನೂ ಪಡೆದಿದ್ದರು. ಯುಪಿಎಸ್ಸಿ –ಸಿಎ ಪಿಎಫ್ ಪರೀಕ್ಷೆಯಲ್ಲಿ 81ನೇ ರ್ಯಾಂಕ್ ಪಡೆದು 2018ರಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗೆ ಸೇರಿದ್ದರು. ಇವರನ್ನು ವರಿಸಲಿರುವ ಅವನೀಶ್ ಕುಮಾರ್ ಸಿಆರ್ ಪಿಎಫ್ ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದು, ಜಮ್ಮು ಕಾಶ್ಮೀರ್ ಮೂಲದವರು. ಪೂನಮ್ ಗುಪ್ತಾ ಅವರ ಕೋರಿಕೆಯನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಒಪ್ಪಿಕೊಂಡಿದ್ದು, ರಾಷ್ಟ್ರಾಧ್ಯಕ್ಷರ ಬಂಗಲೆಯೊಳಗೆ ಮದುವೆಗೆ ಸಿದ್ಧತೆ ನಡೆಸಿದ್ದಾರೆ.