ಪ್ರಯಾಗರಾಜ್ :ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತರ ಜನರು ಸ್ನಾನ ಮಾಡಿದರೂ, ಗಂಗಾ ಮಲಿನವಾಗಲ್ಲ, ನದಿಯಲ್ಲಿದೆ ಬ್ಯಾಕ್ಟೀರಿಯಾ ಕೊಲ್ಲುವ ಸಾಮರ್ಥ್ಯ ! ಖ್ಯಾತ ವಿಜ್ಞಾನಿ ಡಾ.ಅಜಯ್ ಸೋಂಕರ್ ಮಾಹಿತಿ
ನವದೆಹಲಿ: ತ್ರಿವೇಣಿ ಸಂಗಮದಲ್ಲಿ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಿಲ್ಲ ಎಂದು ಕೇಂದ್ರ ಮಾಲಿನ್ಯ ಮಂಡಳಿ ಉಲ್ಲೇಖಿತ ವರದಿಯ ಬೆನ್ನಲ್ಲೇ ಪದ್ಮಶ್ರೀ ಪುರಸ್ಕೃತ ವಿಜ್ಞಾನಿಯೊಬ್ಬರು ಗಂಗಾ ನದಿಯ ನೀರಿನ ಬಗ್ಗೆ ಹೊಸ ಶೋಧನೆಯ ಮಾಹಿತಿ ನೀಡಿದ್ದಾರೆ. ಗಂಗಾ ನದಿಯಲ್ಲಿ ಬೇರಾವುದೇ ನದಿಗಳಲ್ಲಿ ಇರದಷ್ಟು ಸ್ವಯಂ ಶುದ್ಧೀಕರಣದ ಸಾಮರ್ಥ್ಯವಿದ್ದು, ಮನುಷ್ಯನ ಆರೋಗ್ಯಕ್ಕೆ ಹಾನಿಯಾಗಿಸುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.ಪದ್ಮಶ್ರೀ ಪುರಸ್ಕಾರ ಪಡೆದ ಡಾ.ಅಜಯ್ ಸೋಂಕರ್ ಗಂಗಾ ನದಿಯ ಶುದ್ಧೀಕರಣದ ಬಗ್ಗೆ ಹೊಸ ಶೋಧನೆ ಮಾಡಿದ್ದು, ಗಂಗಾ ನದಿಯ ನೀರಿನಲ್ಲಿ 1100 ಮಾದರಿಯ ಬ್ಯಾಕ್ಟೀರಿಯೋಫೇಜಸ್- ಮೈಕ್ರೋ ವೈರಸ್ ಗಳಿದ್ದು, ಇವು ಬ್ಯಾಕ್ಟೀರಿಯಾಗಳನ್ನು ಟಾರ್ಗೆಟ್ ಮಾಡಿ ಕೊಲ್ಲುತ್ತದೆ. ಆಮೂಲಕ ಗಂಗಾ ನದಿಯ ನೀರು ಸ್ವಯಂ ಆಗಿಯೇ ಶುದ್ಧೀಕರಣಗೊಳ್ಳುತ್ತದೆ ಎಂದು ಹೇಳಿದ್ದಾರೆ. ಗಂಗಾ ನದಿಯಲ್ಲಿ ಕೋಟ್ಯಂತರ ಜನರು ಸ್ನಾನ ಮಾಡಿದರೂ, ನದಿಯ ನೀರು ಮಲಿನಗೊಳ್ಳುವುದಿಲ್ಲ. ತ್ರಿವೇಣಿ ಸಂಗಮದಲ್ಲಿ ಕೋಟಿ ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದರೂ ಅದರಿಂದಾಗಿ ಜನರಲ್ಲಿ ಚರ್ಮ ರೋಗದ ತೊಂದರೆ ಉಂಟಾಗಲ್ಲ ಎಂಬುದನ್ನು ತಿಳಿಸಿದ್ದಾರೆ.
ಡಾ.ಅಜಯ್ ಸೋಂಕರ್ ಅವರು ಜಾಗತಿಕ ಮಟ್ಟದ ಸಂಶೋಧಕರಾಗಿದ್ದು, ಕ್ಯಾನ್ಸರ್, ಜೆನೆಟಿಕ್ ಕೋಡ್ ಮತ್ತು ಸೆಲ್ ಬಯೋಲಜಿ ಬಗ್ಗೆ ಸಂಶೋಧನೆ ನಡೆಸಿದ ಖ್ಯಾತಿ ಪಡೆದಿದ್ದಾರೆ. ಗಂಗಾ ನದಿಯಲ್ಲಿರುವ ಬ್ಯಾಕ್ಟಿರಿಯೋಫೇಜ್ ಗಳನ್ನು ಅವರು ‘ಸೆಕ್ಯುರಿಟಿ ಗಾರ್ಡ್’ ಎಂದು ಬಣ್ಣಿಸಿದ್ದು ಕೋಟ್ಯಂತರ ಜನರು ಸ್ನಾನ ಮಾಡಿದ ಬಳಿಕ ನದಿಯ ಮಲಿನಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಸ್ವಯಂ ಆಗಿಯೇ ಹುಡುಕಿ ಕೊಲ್ಲುತ್ತದೆ. ಬ್ಯಾಕ್ಟೀರಿಯಾಗಳ ಆರ್ ಎನ್ ಎಗಳನ್ನೇ ಮುತ್ತಿಕೊಂಡು ಅದನ್ನು ನಾಶ ಮಾಡುತ್ತದೆ. ನದಿ ನೀರಿನಲ್ಲಿ ಇರುವಂತಹ ಹಾನಿಮಾಡಬಲ್ಲ ಬ್ಯಾಕ್ಟೀರಿಯಾ, ಇನ್ನಿತರ ಜೆರ್ಮ್ ಗಳನ್ನು ಕೊಂದು ಬಿಡುವ ತನಕವೂ ಈ ಮೈಕ್ರೋ ವೈರಸ್ ಹೋರಾಡುತ್ತ ಇರುತ್ತದೆ. ಈ ರೀತಿಯ ಶಕ್ತಿ ಇತರೇ ನದಿಗಳಿಗಿಂತ 50 ಪಟ್ಟು ಹೆಚ್ಚಾಗಿ ಗಂಗಾ ನದಿಯಲ್ಲಿ ಇದೆ ಎಂದು ಹೇಳಿದ್ದಾರೆ.
ಪ್ರತಿ ಬ್ಯಾಕ್ಟೀರಿಯೋಫೇಜ್ ಗಳು 100ರಿಂದ 300 ರಷ್ಟು ಪ್ರತಿಗಾಮಿಗಳನ್ನು ಸೃಷ್ಟಿಸುತ್ತಿದ್ದು, ಆಮೂಲಕ ಸ್ವಯಂ ಶುದ್ಧೀಕರಣ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ನೀರನ್ನು ಮಲಿನ ಮಾಡಬಲ್ಲ ಬ್ಯಾಕ್ಟೀರಿಯಾಗಳನ್ನು ಮಾತ್ರ ಕೊಲ್ಲಿಸುವ ವಿಶೇಷ ಶಕ್ತಿ ಹರಿಯುವ ನದಿಗಿರುತ್ತದೆ. ಇದರಲ್ಲಿ ಗಂಗಾ ನದಿಯ ನೀರು ಅತ್ಯಂತ ವಿಶೇಷ ಶಕ್ತಿಯುಳ್ಳದ್ದಾಗಿದ್ದು, ಇತರ ನದಿಗಳಿಗಿಂತ 50 ಪಟ್ಟು ಹೆಚ್ಚು ಶಕ್ತಿ ಇದಕ್ಕಿದೆ ಎಂದು ವಿಜ್ಞಾನಿ ಡಾ.ಅಜಯ್ ಸೋಂಕರ್ ತಿಳಿಸಿದ್ದಾರೆ. ಇತ್ತೀಚೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಫೆ.3ರಂದು ನೀಡಿದ್ದ ವರದಿಯನ್ನು ಆಧರಿಸಿ ಹಸಿರು ನ್ಯಾಯಮಂಡಳಿ, ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿತ್ತು. ತ್ರಿವೇಣಿ ಸಂಗಮದಲ್ಲಿ ಕೋಲಿಫೋರ್ಮ್ ಬ್ಯಾಕ್ಟೀರಿಯಾ ಲೆವೆಲ್ ಹೆಚ್ಚಿರುವುದರಿಂದ ಆ ನೀರಿನಲ್ಲಿ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಿದ್ದರೂ ನೀವು ಕೋಟ್ಯಂತರ ಜನರನ್ನು ಸ್ನಾನ ಮಾಡುವಂತೆ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿತ್ತು.
ಎನ್ ಜಿಟಿ ತರಾಟೆ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಹಿನ್ನೆಲೆಯಲ್ಲಿ ದೇಶಾದ್ಯಂತ ತ್ರಿವೇಣಿ ಸಂಗಮದ ಪವಿತ್ರ ಸ್ನಾನ ಮತ್ತು ಅಲ್ಲಿನ ನೀರಿನ ಪಾವಿತ್ರ್ಯತೆ ಬಗ್ಗೆ ಶಂಕೆ ಉಂಟಾಗಿತ್ತು. 50 ಕೋಟಿಗೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿರುವುದರಿಂದ ಆರೋಗ್ಯ ತೊಂದರೆ ಉಂಟಾಗಿಲ್ಲವಾದರೂ, ಅಲ್ಲಿನ ನೀರು ಪವಿತ್ರವಾಗಿದೆಯೇ, ಇಲ್ಲವೇ ಎನ್ನುವ ಪ್ರಶ್ನೆ ಎದುರಾಗಿತ್ತು. ಆದರೆ ಹೆಸರಾಂತ ವಿಜ್ಞಾನಿಯೊಬ್ಬರು ಗಂಗಾ ನದಿಯಲ್ಲಿ ಸ್ವಯಂ ಆಗಿಯೇ ಮಲಿನ ನೀರನ್ನು ಶುದ್ಧೀಕರಿಸುವ ಶಕ್ತಿ ಹೊಂದಿದ್ದು, ಅಲ್ಲಿ ಸ್ನಾನ ಮಾಡಿದರೆ ತೊಂದರೆ ಉಂಟಾಗಲ್ಲ ಎಂದು ಹೇಳಿರುವುದು ಜನಸಾಮಾನ್ಯರಲ್ಲಿ ಆವರಿಸಿದ್ದ ಮಾಲಿನ್ಯದ ಪ್ರಶ್ನೆಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಎನ್ ಜಿಟಿ ತರಾಟೆ ಮಧ್ಯೆಯೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಆ ವರದಿಯನ್ನು ನಿರಾಕರಿಸಿದ್ದು ತ್ರಿವೇಣಿ ಸಂಗಮದ ನೀರು ಪವಿತ್ರವಾಗಿದ್ದು, ಯಾವುದೇ ರೀತಿಯ ಮಾಲಿನ್ಯ ಇಲ್ಲ. ಕೋಲಿಫೋರ್ಮ್ ಸೆಲ್ (100 ಎಂಎಲ್ ನಲ್ಲಿ 2500 ಎಂಪಿಎನ್ ಗಿಂತ ಹೆಚ್ಚಿರಬಾರದು) ಗರಿಷ್ಠಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ, ಮಹಾ ಕುಂಭಮೇಳದ ಬಗ್ಗೆ ಆಕರ್ಷಣೆ ತಗ್ಗಿಸಲು ವಿರೋಧಿಗಳು ಮಾಡುತ್ತಿರುವ ಕುತಂತ್ರ ಇದು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.