ಮಂಗಳೂರು : ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ನಾಟಕ ; ಪೋಸ್ಟ್ ಮಾರ್ಟಂ ವರದಿಯಲ್ಲಿ ಕೊಲೆ ಕೃತ್ಯ ಬಯಲು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
2022ರ ಸೆ.4ರಂದು ಆರೋಪಿ ರಾಜಾ ಮತ್ತು ಪತ್ನಿ ಕಮಲಾ ರಬ್ಬರ್ ಟ್ಯಾಪಿಂಗ್ ಮಾಡುವುದಾಗಿ ಹೇಳಿ ಬೆಳ್ತಂಗಡಿ ಕೊಯ್ಯೂರು ಗ್ರಾಮದ ಧರ್ಣಪ್ಪ ಗೌಡರ ಮನೆಗೆ ಕೆಲಸ ಕೇಳಿಕೊಂಡು ಬಂದಿದ್ದರು. ದಂಪತಿಗೆ ರಬ್ಬರ್ ತೋಟದ ಶೆಡ್ ನಲ್ಲೇ ಉಳಿಯಲು ಅವಕಾಶ ಕೊಟ್ಟು ಕೆಲಸ ನೀಡಲಾಗಿತ್ತು. ಆದರೆ ಎರಡು ದಿನ ಕಳೆಯುವಷ್ಟರಲ್ಲಿ ದಂಪತಿ ಕುಡಿದು ಬಂದು ಗಲಾಟೆ ನಡೆಸಿದ್ದಾರೆ. ಸೆ.6ರಂದು ರಾತ್ರಿ 8 ಗಂಟೆ ಸುಮಾರಿಗೆ ಜಗಳಗೈದು ಆರೋಪಿ ರಾಜಾ ಸಿಟ್ಟಿನಲ್ಲಿ ಪತ್ನಿಯ ಕುತ್ತಿಗೆ ಹಿಸುಕಿದ್ದು ನೆಲದಲ್ಲಿ ಬೀಳಿಸಿ ಅಮುಕಿ ಹಿಡಿದಿದ್ದಾನೆ. ಇದರಿಂದ ಉಸಿರು ಕಟ್ಟಿ ಬಿದ್ದ ಮಹಿಳೆಯನ್ನು ಆತ್ಮಹತ್ಯೆಯೆಂದು ಬಿಂಬಿಸಲು ಲುಂಗಿಯನ್ನು ಹರಿದು ಹಗ್ಗದ ರೀತಿ ಮಾಡಿ ಕುತ್ತಿಗೆ ಬಿಗಿದಿದ್ದರಿಂದ ಕಮಲಾ ಸತ್ತಿದ್ದರು.
ಆರೋಪಿ ರಾಜಾ ಬಳಿಕ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಾಕ್ಷ್ಯ ಸೃಷ್ಟಿಸಲು ಮನೆಯ ಪಕ್ಕಾಸಿಗೆ ಬಟ್ಟೆ ನೇತು ಹಾಕಿ ಅದನ್ನು ತಾನೇ ಹರಿದು ಉಳಿಸಿಕೊಂಡಿದ್ದರು. ಪತಿ ರಾಜಾನ ಹೇಳಿಕೆಯಂತೆ, ಆರಂಭದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವೆಂದು ಪ್ರಕರಣ ದಾಖಲಾಗಿತ್ತು. ಆದರೆ ಶವದ ಪೋಸ್ಟ್ ಮಾರ್ಟಂ ಮಾಡಿದ್ದ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯರು ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿರುವುದಾಗಿ ವರದಿ ನೀಡಿದ್ದರು. ಇದರಂತೆ, ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲುಗೊಂಡು ಪೊಲೀಸರು ಅರೆಸ್ಟ್ ಮಾಡಿದ್ದರು. ವೈದ್ಯರ ವರದಿಯನ್ನು ಪರಿಗಣಿಸಿ ವೈದ್ಯಾಧಿಕಾರಿ ಕೂಡ ಆರೋಪಿ ವಿರುದ್ಧ ಕೋರ್ಟಿನಲ್ಲಿ ಸಾಕ್ಷಿ ನುಡಿದಿದ್ದರು.
ಪ್ರಕರಣ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್. ಸಮಗ್ರ ವಿಚಾರಣೆ ನಡೆಸಿ ಆರೋಪ ಸಾಬೀತು ಮಾಡಿದ್ದು, ಜೀವಾವಧಿ ಶಿಕ್ಷೆಯ ತೀರ್ಪು ನೀಡಿದ್ದಾರೆ. ಕೊಲೆ ಆರೋಪದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಲಾಗಿದೆ. ಮೃತ ಮಹಿಳೆಯ ಮೂವರು ಮಕ್ಕಳಾದ ಸವಿತಾ, ರಸ್ಯಾ ಮತ್ತು ಮನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಬಹುದೆಂದು ಕೋರ್ಟ್ ಆದೇಶ ಮಾಡಿದೆ. ಬೆಳ್ತಂಗಡಿ ಠಾಣೆಯ ಅಂದಿನ ಉಪ ನಿರೀಕ್ಷಕ ನಂದ ಕುಮಾರ್ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದು, ಆನಂತರ ಇನ್ಸ್ ಪೆಕ್ಟರ್ ಶಿವಕುಮಾರ್ ತನಿಖೆ ಪೂರ್ತಿಗೊಳಿಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರಕಾರದ ಪರವಾಗಿ ಮೋಹನ್ ಕುಮಾರ್ ವಾದ ಮಂಡಿಸಿದ್ದರು.