ಮಂಗಳೂರು : ಕೋಟೆಕಾರು ದರೋಡೆ ಪ್ರಕರಣ ; ಕಡೆಗೂ ಸ್ಥಳೀಯರಿಬ್ಬರನ್ನು ಎತ್ತಾಕಿದ ಪೊಲೀಸರು, ಶಶಿ ತೇವರ್ ಹೆಸರಲ್ಲಿ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದ ವ್ಯಕ್ತಿ ಸೆರೆ, ದರೋಡೆ ಕೃತ್ಯಕ್ಕೆ ಸಂಚು ಹೆಣೆದಿದ್ದು ಇವರೇ !

ಮಂಗಳೂರು: ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ದರೋಡೆ ಪ್ರಕರಣದಲ್ಲಿ ಪೊಲೀಸರು ಮತ್ತಿಬ್ಬರು ಸ್ಥಳೀಯ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಶಶಿ ತೇವರ್ ಎನ್ನುವ ಹೆಸರಿನಲ್ಲಿ ಮುಂಬೈನಲ್ಲಿ ಗುರುತಿಸಿಕೊಂಡು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದ ಭಾಸ್ಕರ್ ಬೆಳ್ಚಪಾಡ (69) ಮತ್ತು ಕೆ.ಸಿ.ರೋಡ್ ನಿವಾಸಿ ಮಹಮ್ಮದ್ ನಜೀರ್ ಎಂಬವರನ್ನು ಬಂಧಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಮುರುಗನ್ ಡಿ ದೇವರ್ ಮತ್ತು ಇತರ ಮೂವರನ್ನು ಕೃತ್ಯ ನಡೆದ ಒಂದೇ ವಾರದಲ್ಲಿ ತಮಿಳುನಾಡಿನಲ್ಲಿ ಬಂಧಿಸಿದ್ದರೂ, ಈ ಕೃತ್ಯ ಸ್ಥಳೀಯರ ಕೈವಾಡ ಇಲ್ಲದೇ ನಡೆದಿರಲು ಸಾಧ್ಯವೇ ಇಲ್ಲ ಎನ್ನುವ ಮಾತು ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಪೊಲೀಸ್ ಅಧಿಕಾರಿಗಳು ಕೂಡ ಪ್ರಕರಣದಲ್ಲಿ ಸ್ಥಳೀಯ ವ್ಯಕ್ತಿಯ ಕೈವಾಡ ಇದೆ, ಅವರನ್ನು ಬಂಧನ ಮಾಡುತ್ತೇವೆ ಎಂದಿದ್ದರು. ಇದೇ ಕಾರಣಕ್ಕೆ ಎನ್ನುವಂತೆ, ಮುರುಗನ್ ಮತ್ತು ಮಣಿ ಕಣ್ಣನ್ ಅವರ ಮೇಲೆ ಗುಂಡು ಹಾರಿಸಿ ನೆರವು ನೀಡಿದ್ದ ಸ್ಥಳೀಯ ವ್ಯಕ್ತಿ ಯಾರು ಎನ್ನುವ ಬಗ್ಗೆ ಬಾಯಿ ಬಿಡುವಂತೆ ಮಾಡಿದ್ದರು ಎನ್ನಲಾಗಿದೆ.
ಆನಂತರ, ಶಶಿ ತೇವರ್ ಎನ್ನುವ ವ್ಯಕ್ತಿಯೇ ಧಾರಾವಿ ಮೂಲದ ನಟೋರಿಯಸ್ ಗ್ಯಾಂಗ್ ಸದಸ್ಯರಿಗೆ ಕೋಟೆಕಾರು ಬ್ಯಾಂಕ್ ಬಗ್ಗೆ ಮಾಹಿತಿ ನೀಡಿದ್ದ ಎನ್ನಲಾಗಿತ್ತು. ಆದರೆ ಈ ಶಶಿ ತೇವರ್ ಎನ್ನುವ ಹೆಸರು ಸ್ಥಳೀಯ ಆಗಿರಲಿಕ್ಕಿಲ್ಲ. ಆದರೆ ಅಪರಾಧ ಹಿನ್ನೆಲೆಯುಳ್ಳ ಸ್ಥಳೀಯರೇ ಯಾರಾದರೂ ಇಂತಹ ಹೆಸರಿನಲ್ಲಿ ಮುಂಬೈನಲ್ಲಿ ಇದ್ದಿರಬಹುದು ಎನ್ನುವ ಶಂಕೆ ಮೂಡಿತ್ತು. ಇದೇ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಶಶಿ ತೇವರ್ ಎನ್ನುವ ಹೆಸರಲ್ಲಿ ಗುರುತಿಸಿಕೊಂಡಿದ್ದ ಭಾಸ್ಕರ ಬೆಳ್ಚಪ್ಪಾಡ ಎಂಬಾತನನ್ನು ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಭಾಸ್ಕರ್ ನನ್ನು ವಿಚಾರಣೆ ನಡೆಸಿದಾಗ, ಕಳೆದ ಏಳು ವರ್ಷಗಳಿಂದ ಕೆಸಿ ರೋಡ್ ನಿವಾಸಿ ಮಹಮ್ಮದ್ ನಜೀರ್ ಜೊತೆಗೆ ಸಂಪರ್ಕದಲ್ಲಿರುವುದು ಮತ್ತು ಕೋಟೆಕಾರು ಬ್ಯಾಂಕನ್ನು ದರೋಡೆ ಮಾಡಲು ಇತರ ಆರೋಪಿಗಳೊಂದಿಗೆ ಸೇರಿ ಸಂಚು ನಡೆಸಿರುವುದನ್ನೂ ತಿಳಿಸಿದ್ದ.
ಇದರಂತೆ, ಬ್ಯಾಂಕ್ ದರೋಡೆಗೆ ಮಾಹಿತಿ ಕೊಟ್ಟು, ಡಕಾಯಿತಿ ನಡೆಸಬೇಕಾದ ದಿನ ಮತ್ತು ಸಮಯದ ಬಗ್ಗೆಯೂ ತಿಳಿಸಿದ್ದಲ್ಲದೆ, ಸೊಸೈಟಿಯಲ್ಲಿರುವ ಸಿಬಂದಿಗಳ ಬಗ್ಗೆ ಮತ್ತು ಕೃತ್ಯದ ನಂತರ ತಪ್ಪಿಸಿಕೊಂಡು ಹೋಗುವ ಮಾರ್ಗ ಮುಂತಾದ ಮಾಹಿತಿಯನ್ನು ನೀಡಿದ್ದ ಮಹಮ್ಮದ್ ನಜೀರ್ ನನ್ನು ಬಂಧಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ ಮಹಮ್ಮದ್ ನಜೀರ್ ಸ್ಥಳೀಯವಾಗಿ ಆರೋಪಿಗಳಿಗೆ ಸಹಕಾರ ಕೊಟ್ಟಿರುವುದು ಪತ್ತೆಯಾಗಿದೆ.
ಭಾಸ್ಕರ ಬೆಳ್ಚಪ್ಪಾಡ ಮೂಲತಃ ವಿಟ್ಲ ಸಮೀಪದ ಕನ್ಯಾನ ನಿವಾಸಿಯಾಗಿದ್ದರೂ 25 ವರ್ಷಗಳಿಂದ ಊರು ಬಿಟ್ಟು ಮುಂಬೈ, ದೆಹಲಿ, ಬೆಂಗಳೂರಿನಲ್ಲಿ ನೆಲೆಸಿದ್ದ. ಮುಂಬೈ, ದೆಹಲಿಯಲ್ಲಿ ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. 2011ರಲ್ಲಿ ದೆಹಲಿಯಲ್ಲಿ ದರೋಡೆ ಯತ್ನ, 2021ರಲ್ಲಿ ಮುಂಬೈ ಕ್ರೈಂ ಬ್ರಾಂಚ್ ಸಿಐಡಿ ಠಾಣೆ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ, 20222ರಲ್ಲಿ ಕೋಣಾಜೆ ಠಾಣೆಯಲ್ಲಿ ಸುಲಿಗೆ ಪ್ರಕರಣ, 2022ರಲ್ಲಿ ಉಳ್ಳಾಲದಲ್ಲಿ ದರೋಡೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ತಿಳಿದುಬಂದಿದೆ.