ಮಂಗಳೂರು ಹೈವೇ : ಅಧಿಕಾರಿಗಳ ಅಸಡ್ಡೆಗೆ ಹೆದ್ದಾರಿ ಮಧ್ಯದ ಗಿಡಗಳೇ ಕರಟಿ ಹೋದವು!!!ಕರ್ಣಾಟಕ ಬ್ಯಾಂಕ್ ಕೊಟ್ಟ ಅನುದಾನ ಸರಿಯಾಗಿ ಬಳಸಿಕೊಳ್ಳದ ಆಡಳಿತ ವರ್ಗ, ಇದೆಂತ ಪರಿಸರ ಕಾಳಜಿ ?

ಮಂಗಳೂರು : ನಗರದ ಕೆಪಿಟಿ- ನಂತೂರು- ಪಂಪ್ವೆಲ್ ಹೆದ್ದಾರಿ ಮಧ್ಯದ ಹೂದೋಟದಲ್ಲಿ ಬರೀ ಒಣಗಿದ ಗಿಡಗಳು ಮಾತ್ರ ಉಳಿದುಕೊಂಡಿವೆ. ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯಕ್ಕೆ ಹೆದ್ದಾರಿ ಮಧ್ಯದ ವಿಭಜಕದಲ್ಲಿ ಬೆಳೆಸಲಾಗಿದ್ದ ಹೂವಿನ ಗಿಡಗಳು ಕರಟಿ ಹೋಗಿವೆ. ಕರ್ಣಾಟಕ ಬ್ಯಾಂಕ್ ಸಿಎಸ್ ಆರ್ ನಿಧಿಯನ್ನು ಬಳಸಿ ಹೂದೋಟ ಮಾಡಿದ್ದರೂ, ಅದನ್ನು ಉಳಿಸಿಕೊಳ್ಳುವ ಯೋಗ್ಯತೆ ಹೆದ್ದಾರಿ ಪ್ರಾಧಿಕಾರಕ್ಕೂ ಇಲ್ಲ. ಮಹಾನಗರ ಪಾಲಿಕೆಗೂ ಇಲ್ಲವಾಗಿದೆ.
ಕರ್ಣಾಟಕ ಬ್ಯಾಂಕಿನ ಸಿಎಸ್‍ಆರ್ ನಿಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 1.10 ಕೋಟಿ ರೂ. ವೆಚ್ಚದಲ್ಲಿ ಕೆಪಿಟಿಯಿಂದ ಪಂಪ್‍ವೆಲ್ ಫ್ಲೈಓವರ್ ತನಕ ರಾಷ್ಟ್ರೀಯ ಹೆದ್ದಾರಿ ವಿಭಜಕದಲ್ಲಿ ಹೂದೋಟ ಮತ್ತು ತಡೆಬೇಲಿಯನ್ನು 2021 ಫೆ.18ರಂದು ಉದ್ಘಾಟನೆ ಮಾಡಲಾಗಿತ್ತು. ಆದರೆ ಆಬಳಿಕ ವರ್ಷದಿಂದ ವರ್ಷಕ್ಕೆ ಹೆದ್ದಾರಿ ಪ್ರಾಧಿಕಾರದ ಪರಿಸರ ಕಾಳಜಿ ಕುಗ್ಗುತ್ತಾ ಸಾಗಿದೆ. ಈ ಬಾರಿಯಂತೂ, ಹೂದೋಟಕ್ಕೆ ಮಳೆಗಾಲದ ಬಳಿಕ ನೀರನ್ನೇ ಹಾಕಿಲ್ಲ. ಇದರಿಂದಾಗಿ ಹೆದ್ದಾರಿ ಮಧ್ಯೆ ನಳನಳಿಸಬೇಕಿದ್ದ ಹೂವಿನ ಗಿಡಗಳು ಒಣ ಹುಲ್ಲಿನಂತೆ ಒಣಗಿ ನಿಂತಿವೆ. ಬೆಂಕಿ ಬಿದ್ದರೆ ಭರ್ರನೆ ಹೊತ್ತಿಕೊಂಡು ಹೆದ್ದಾರಿಯ ವಾಹನಗಳನ್ನೂ ಆವರಿಸಿಕೊಳ್ಳಬಹುದು.




ಹೆದ್ದಾರಿಯನ್ನು ಜನರು ಎಲ್ಲೆಂದರಲ್ಲಿ ಅತ್ತಿತ್ತ ದಾಟಬಾರದು, ನಡುವೆ ಹೂದೋಟ ಇರಬೇಕೆಂದು ನಗರದ ಸೌಂದರ್ಯ ಮತ್ತು ಆಕರ್ಷಣೆ ದೃಷ್ಟಿಯಿಂದ ಕೆಪಿಟಿಯಿಂದ ಪಂಪ್ವೆಲ್ ವರೆಗೆ ಮೂರು ಕಿ.ಮೀ. ಉದ್ದಕ್ಕೆ ಹೂದೋಟ ಮತ್ತು ತಡೆಬೇಲಿ ನಿರ್ಮಿಸಲಾಗಿತ್ತು. ಉದ್ಯಾನದಲ್ಲಿ ಆಕರ್ಷಕ ಫಾಕ್ಸ್ ಟೈಲ್ ಪಾಮ್, ಕ್ರಿಸ್ಟಿನಾ ಮರ ಹಾಗೂ ವರ್ಷದುದ್ದಕ್ಕೂ ಹೂ ಬಿಡುವಂತಹ ನಾನಾ ಜಾತಿಯ ಗಿಡಗಳನ್ನು ನೆಡಲಾಗಿತ್ತು. ಆದರೆ ಇವೆಲ್ಲವೂ ನಾಲ್ಕೇ ತಿಂಗಳಲ್ಲಿ ಒಣಗಿ ನಿಂತಿದ್ದು, ಕರ್ಣಾಟಕ ಬ್ಯಾಂಕಿನ ಕೋಟಿ ನಿಧಿಯನ್ನೇ ಬೆಂಕಿ ಕೊಟ್ಟು ಸುಟ್ಟಂತಾಗಿದೆ.
ಮೂಲಗಳ ಪ್ರಕಾರ, ಬ್ಯಾಂಕಿನ ಸಿಎಸ್‍ಆರ್ ನಿಧಿಯನ್ನು ಬಳಸಿಕೊಂಡು ಪ್ರತಿ ವರ್ಷವೂ ನೀರು ಹಾಕಲು ಟೆಂಡರ್ ಮಾಡಲಾಗುತ್ತಿತ್ತು. ಕಳೆದ ಬಾರಿ ಟೆಂಡರ್ ಪಡೆದವರು ಈ ಸಲ ನೀರು ಹಾಕಿರಲಿಲ್ಲ. ಬ್ಯಾಂಕಿನ ಕಡೆಯಿಂದ ಮರು ಟೆಂಡರ್ ಆಗಿರಲಿಲ್ಲ. ಇದರಿಂದಾಗಿ ನೀರು ಬೀಳದೆ ಗಿಡಗಳು ಒಣಗಿ ಸತ್ತು ಹೋಗಿವೆ. ಪಾಲಿಕೆಯಾಗಲೀ, ಹೆದ್ದಾರಿ ಪ್ರಾಧಿಕಾರವಾಗಲೀ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಗಮನಕ್ಕೂ ತಂದಿರಲಿಲ್ಲ. ಈಗ ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಗಿಡಗಳಿಗೆ ನೀರು ಹಾಕುವ ಟೆಂಡರ್ ಮಾಡಲಾಗಿದೆ ಎನ್ನುತ್ತಿದ್ದಾರೆ. ಅದರಂತೆ, ಸತ್ತ ಗಿಡಗಳಿಗೆ ಈಗ ನೀರು ಹಾಕುವುದಕ್ಕೆ ಟೆಂಡರ್ ಆಗಿದೆಯಂತೆ.
ಈ ಬಗ್ಗೆ ಕರ್ಣಾಟಕ ಬ್ಯಾಂಕಿನ ಪಿಆರ್ ಓ ಬಳಿ ಕೇಳಿದಾಗ, ಈಗ ನೀರು ಹಾಕಲು ಶುರು ಮಾಡಿದ್ದಾರೆ. ಟೆಂಡರ್ ಕೊಟ್ಟಿದ್ದೇವೆ. ಕೆಪಿಟಿ, ನಂತೂರಿನಲ್ಲಿ ಹೆದ್ದಾರಿ ಕಾಮಗಾರಿಯೆಂದು ಅಗೆಯಲು ಶುರು ಮಾಡಿದ್ದರು. ಹಾಗಾಗಿ, ನೀರು ಹಾಕಲು ಹೋಗಿರಲಿಲ್ಲ ಎಂದು ಹೇಳಿದ್ದಾರೆ. ಕರಾವಳಿಯಲ್ಲಿ ಈ ಬಾರಿ ಫೆಬ್ರವರಿ ತಿಂಗಳಲ್ಲೇ ರಣ ಬಿಸಿಲು ಜೋರಾಗಿದೆ. ನೀರಿಲ್ಲದಿದ್ದರೆ, ಗಿಡಗಳಲ್ಲ, ಮರಗಳೂ ಒಣಗಿ ಹೋಗುವಂತಹ ಸ್ಥಿತಿ ಬಂದಿದೆ. ಇದರ ನಡುವೆ ಹೆದ್ದಾರಿಯ ಬಿಸಿಗೆ ನಡುವೆ ಇರುವ ಗಿಡಗಳು ಉಳಿದಾವೇ..
ಉದ್ಘಾಟನೆ ಸಂದರ್ಭದಲ್ಲಿ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಕರ್ಣಾಟಕ ಬ್ಯಾಂಕ್ ನಿರ್ಮಿಸಿಕೊಟ್ಟಿರುವ ತಡೆಬೇಲಿ ಮತ್ತು ಉದ್ಯಾನದ ನಿರ್ವಹಣೆಯನ್ನು ಮಹಾನಗರ ಪಾಲಿಕೆಯಿಂದಲೇ ಮಾಡಲಾಗುವುದು. ನೀರಿನ ಸಂಪರ್ಕ ನೀಡಲು ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಬ್ಯಾಂಕ್ ನೀಡಿರುವ ಕೊಡುಗೆಯ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಹೇಳಿದ್ದರು. ಆದರೆ ಶಾಸಕರು ಹೇಳಿದ್ದರೂ ಬಿಜೆಪಿಯದ್ದೇ ಆಡಳಿತದ ಮಹಾನಗರ ಪಾಲಿಕೆಗೆ ಒಣಗಿ ಹೋಗುತ್ತಿರುವ ಗಿಡಗಳು ಕಾಣಲೇ ಇಲ್ಲ.