ಮಂಗಳೂರು : ಮಡಿಕೇರಿಯಲ್ಲಿ ಮರದಿಂದ ಬಿದ್ದ ಬಾಲಕನ ಎದೆಗೆ ಹೊಕ್ಕ ತೆಂಗಿನ ದಂಟು ; ನಡುರಾತ್ರಿಯಲ್ಲೇ ವೆನ್ಲಾಕ್ ಆಸ್ಪತ್ರೆ ವೈದ್ಯರಿಂದ ಶಸ್ತ್ರಚಿಕಿತ್ಸೆ ಪ್ರಾಣ ಉಳಿಸಿದ ಸರ್ಕಾರಿ ವೈದ್ಯರ ಬಗ್ಗೆ ಪ್ರಶಂಸೆ
ಮಂಗಳೂರು: 12 ವರ್ಷದ ಬಾಲಕನ ಭುಜದ ಮೂಲಕ ಎದೆಗೆ ಹೊಕ್ಕಿದ್ದ ತೆಂಗಿನ ದಂಟನ್ನು ವೆನ್ಲಾಕ್ ವೈದ್ಯರು ಸಕಾಲಿಕವಾಗಿ ನಡೆಸಿದ ಶಸ್ತ್ರಚಿಕಿತ್ಸೆಯಿಂದ ಹೊರ ತೆಗೆದಿದ್ದು, ಬಾಲಕನ ಜೀವ ಉಳಿಸಿದ್ದಾರೆ. ಆಮೂಲಕ ಸರಕಾರಿ ಆಸ್ಪತ್ರೆಯಲ್ಲಿಯೂ ಶಸ್ತ್ರಚಿಕಿತ್ಸೆಯಿಂದ ಜನಸಾಮಾನ್ಯರ ಜೀವ ಉಳಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮಡಿಕೇರಿಯ ಕಾಫಿ ಎಸ್ಟೇಟ್ ಒಂದರಲ್ಲಿ ಅಸ್ಸಾಮ್ ಮೂಲದ ಕಾರ್ಮಿಕ ದಂಪತಿಯ ಪುತ್ರ ಕಮಲ್ ಹುಸೇನ್ (12) ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕ. ಶುಕ್ರವಾರ ಸಂಜೆ ಇವರು ಉಳಿದುಕೊಂಡಿದ್ದ ಮನೆಯ ಬಳಿ ನೇರಳೆ ಹಣ್ಣಿನ ಮರಕ್ಕೆ ಬಾಲಕ ಹತ್ತಿದ್ದು ಅಕಸ್ಮಾತ್ ಮರದಿಂದ ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ, ತೆಂಗಿನ ಗರಿಯ ದಂಟು ಭುಜದ ಮೂಲಕ ಬಾಲಕನ ಎದೆಯ ಭಾಗಕ್ಕೆ ಹೊಕ್ಕಿತ್ತು. ಜೊತೆಗೆ, ಆತನ ಕುತ್ತಿಗೆಯಲ್ಲಿದ್ದ ಸ್ಟೀಲ್ ಚೈನ್ ಕೂಡ ಗಾಯದ ಮೂಲಕ ಒಳಸೇರಿತ್ತು. ಮೂರು ಇಂಚಿನಷ್ಟು ಎದೆಗೆ ಒಳ ಹೋಗಿರುವುದು ಎಕ್ಸ್ ರೇಯಲ್ಲಿ ಕಂಡುಬಂದಿತ್ತು.
ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಶನಿವಾರ ಸಂಜೆ ವೆನ್ಲಾಕ್ ತಲುಪಿದ್ದ ಬಾಲಕನಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ವೆನ್ಲಾಕ್ ಆಸ್ಪತ್ರೆಯ ಎದೆ ಮತ್ತು ರಕ್ತನಾಳಗಳ ವೈದ್ಯರಾದ ಡಾ.ಸುರೇಶ್ ಪೈ ನೇತೃತ್ವದ ತಂಡವು ಭಾನುವಾರ ನಸುಕಿನ 1.30ರಿಂದ 3.30ರ ವರೆಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಯಶಸ್ವಿಯಾಗಿ ತೆಂಗಿನ ಗರಿಯನ್ನು ಮತ್ತು ಸ್ಟೀಲ್ ಚೈನ್ ಅನ್ನು ಹೊರತೆಗೆದಿದೆ. ಸಕಾಲಿಕವಾಗಿ ಸ್ಪಂದಿಸಿರುವ ವೈದ್ಯರ ತಂಡಕ್ಕೆ ವೆನ್ಲಾಕ್ ಆಸ್ಪತ್ರೆಯ ಸುಪರಿಡೆಂಟ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಬಾಲಕ ಉಷಾರಾಗಿದ್ದಾನೆ ಎಂದು ಆತನ ಕುಟುಂಬಸ್ಥರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಅಸ್ಸಾಮ್ ಮೂಲದ ಏಳು ಮಂದಿ ಎರಡು ವರ್ಷಗಳ ಹಿಂದೆ ಮಡಿಕೇರಿ ಬಂದು ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಬಾಲಕ ಊರಿನಲ್ಲೇ ಇದ್ದು ಶಾಲೆಗೆ ಹೋಗುತ್ತಿದ್ದ. ಈ ಬಾರಿ ಶಾಲೆಗೆ ಹೋಗದೆ ಹೆತ್ತವರ ಜೊತೆಗೆ ಊರಿಗೆ ಬಂದಿದ್ದ ಎಂದು ಆತನ ಸಂಬಂಧಿಕ ತಸ್ಸಾರ್ ಆಲಿ ಮಾಹಿತಿ ನೀಡಿದ್ದಾರೆ.