ಪ್ರಯಾಗ್ ರಾಜ್ : ಕುಂಭಮೇಳ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ, ಕಲುಷಿತ ನೀರಿನಲ್ಲಿ ಮೀಯುವಂತೆ ಮಾಡಿದ್ದೀರಿ ; ಕೇಂದ್ರ ಮಾಲಿನ್ಯ ಮಂಡಳಿ ವರದಿ ಬಗ್ಗೆ ಎನ್ ಜಿಟಿ ತರಾಟೆ
ನವದೆಹಲಿ: ಪ್ರಯಾಗರಾಜ್ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಗೈದ ಭಕ್ತರ ಸಂಖ್ಯೆ 55 ಕೋಟಿ ದಾಟಿದೆ. ಆದರೆ, ಇದೇ ವೇಳೆ, ತ್ರಿವೇಣಿ ಸಂಗಮದಲ್ಲಿ ಗಂಗಾ ನದಿಯ ನೀರು ಕಲುಷಿತವಾಗಿದ್ದು, ಸ್ನಾನಕ್ಕೂ ಯೋಗ್ಯವಾಗಿಲ್ಲ ಎಂಬ ಆಘಾತಕಾರಿ ವರದಿಯನ್ನು ಕೇಂದ್ರ ಮಾಲಿನ್ಯ ಮಂಡಳಿ ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಕೆ ಮಾಡಿದೆ.
ಕುಂಭಮೇಳದಲ್ಲಿ ಕೋಟ್ಯಂತರ ಜನರು ಸ್ನಾನ ಮಾಡುತ್ತಿರುವ ತ್ರಿವೇಣಿ ಸಂಗಮದ ನೀರಿನಲ್ಲಿ ಸಾಮಾನ್ಯವಾಗಿ ಮಲದಲ್ಲಿ ಕಂಡುಬರುವಂತಹ ರೋಗವಾಹಕ ಬ್ಯಾಕ್ಟೀರಿಯಾಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿರುವುದು ಕಂಡುಬಂದಿದೆ. ತ್ರಿವೇಣಿ ಸಂಗಮ ಸೇರಿದಂತೆ ಪ್ರಯಾಗರಾಜ್‌ನ ಗಂಗಾ ಮತ್ತು ಯಮುನಾ ನದಿಗಳ ವಿವಿಧ ಪ್ರದೇಶಗಳಿಂದ ಸಂಗ್ರಹಿಸಿದ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಈ ವಿಷಯವನ್ನು ದೃಢಪಡಿಸಿದೆಮ
ನುಷ್ಯ ಮತ್ತು ಪ್ರಾಣಿಗಳ ಮಲದಲ್ಲಿರುವಂತಹ ಫೇಶಿಯಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಪರೀಕ್ಷೆಯಲ್ಲಿ ನೂರು ಎಂಎಲ್ ನೀರಿನಲ್ಲಿ ಕೊಳಚೆ ಪದಾರ್ಥ 2500 ಅಂಶಗಳಿಂದ ಹೆಚ್ಚುವರಿ ತೋರಿಸಬಾರದು ಎಂಬುದು ನಿಯಮ. ಆದರೆ, ಫೆ.3ರಂದು ತ್ರಿವೇಣಿ ಸಂಗಮದಲ್ಲಿ ಸಂಗ್ರಹಿಸಲ್ಪಟ್ಟ ನೀರಿನಲ್ಲಿ ಮಲಿನ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ. ಹೀಗಾಗಿ ಗಂಗಾ ಮತ್ತು ಯಮುನಾ ನದಿಗೆ ಕೊಳಚೆ ನೀರು ಸೇರಿದಂತೆ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆಯೂ ಎನ್ ಜಿಟಿ ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ.
ನೀರು ಮಲಿನಗೊಂಡಿರುವ ಬಗ್ಗೆ ನ್ಯಾಯಧಿಕರಣ ತೀವ್ರ ಕಳವಳ ವ್ಯಕ್ತಪಡಿಸಿದ್ದು ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. 50 ಕೋಟಿ ಜನರನ್ನು ಮಲಿನ ನೀರಿನಲ್ಲಿ ಸ್ನಾನ ಮಾಡುವಂತೆ ಮಾಡಿದ್ದೀರಿ. ಸ್ನಾನಕ್ಕೂ ಯೋಗ್ಯವಲ್ಲದ ನೀರನ್ನು ಜನರು ಕುಡಿಯಲು ಬಳಸಬೇಕೆ? ಎಂದು ಪ್ರಶ್ನಿಸಿರುವ ನ್ಯಾಯಾಲಯ, ನೀರಿನ ಗುಣಮಟ್ಟದ ಬಗ್ಗೆ ಮೊದಲೇ ಪರಿಶೀಲನೆ ಮಾಡದಿರುವ ಬಗ್ಗೆ ಕಿಡಿಕಾರಿದೆ. ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಏನೋ ಒತ್ತಡದಲ್ಲಿದ್ದು ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ