ಮಡಿಕೇರಿ:ಮಡಿಕೇರಿಯಲ್ಲೂ ದುಬಾರಿ ಗಿಫ್ಟ್ ಹೆಸರಲ್ಲಿ ನಕಲಿ ಸ್ಕೀಮ್ ; ಮಂಗಳೂರಿನ ಪ್ರಮುಖ ಆರೋಪಿ ಸೇರಿ ಐವರ ಬಂಧನ, ಆಕರ್ಷಕ ಗಿಫ್ಟ್ ತೋರಿಸಿ ಸಾವಿರಾರು ಜನರಿಗೆ ಟೋಪಿ, ಸುಮೊಟೋ ಕೇಸು ದಾಖಲಿಸಿದ ಪೊಲೀಸರು.

ಮಡಿಕೇರಿ, ಫೆ.18: ದುಬಾರಿ ಗಿಫ್ಟ್ ಆಮಿಷ ತೋರಿಸಿ ನಕಲಿ ಸ್ಕೀಮ್ ನಡೆಸುತ್ತಿದ್ದ ಮಂಗಳೂರು ಮೂಲದ ಪ್ರಮುಖ ಆರೋಪಿ ಸೇರಿದಂತೆ ಐವರನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಇವರು ಎಸ್.ವಿ. ಸ್ಮಾರ್ಟ್ ವಿಶನ್ ಎಂಬ ಸ್ಕೀಮ್ ಹೆಸರಲ್ಲಿ ಥಾರ್ ಜೀಪು ಗೆಲ್ಲಬಹುದೆಂದು ಜನರನ್ನು ಯಾಮಾರಿಸಿ ಸಾವಿರಾರು ಮಂದಿಗೆ ವಂಚನೆ ಎಸಗಿರುವುದು ಪತ್ತೆಯಾಗಿದೆ.

ಸ್ಕೀಮ್ ನಡೆಸುತ್ತಿದ್ದ ಪ್ರಮುಖ ಆರೋಪಿ ಮಂಗಳೂರಿನ ಸುರತ್ಕಲ್ ನಿವಾಸಿ ಮೊಹಮ್ಮದ್ ಅಶ್ರಫ್ (37), ಮಡಿಕೇರಿಯ ಮಲ್ಲಿಕಾರ್ಜುನ ನಗರದ ನಿವಾಸಿ ಎಂ.ವೈ ಸುಲೇಮಾನ್(37), ತ್ಯಾಗರಾಜ ಕಾಲನಿಯ ಅಬ್ದುಲ್ ಗಫೂರ್ (34), ಮೊಹಮ್ಮದ್ ಅಕ್ರಮ್ (34) ಹಾಗೂ ಕುಂಬಳಕೇರಿ ನಿವಾಸಿ ಎಚ್.ಎನ್ ಕಿಶೋರ್ ಬಂಧಿತರು. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಎಸ್ಪಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.
ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಿಪೇಟೆಯಲ್ಲಿ ಜನವರಿ 30ರಿಂದ ಎಸ್.ವಿ ಸ್ಮಾರ್ಟ್ ವಿಶನ್ ಸ್ಕೀಂ ಹೆಸರಿನಲ್ಲಿ ಸಾರ್ವಜನಿಕರಿಂದ ತಿಂಗಳಿಗೆ ಒಂದು ಸಾವಿರದಂತೆ ಹಣ ಸಂಗ್ರಹಿಸುತ್ತಿದ್ದರು. ಈಗಾಗಲೇ 1100ಕ್ಕೂ ಹೆಚ್ಚು ಮಂದಿ ಸ್ಕೀಮಿಗೆ ಸೇರಿಕೊಂಡಿದ್ದು ಪ್ರತಿ ತಿಂಗಳು 1 ಸಾವಿರದಂತೆ 24 ಕಂತುಗಳನ್ನು ಗ್ರಾಹಕರು ಕಟ್ಟಬೇಕಾಗುತ್ತದೆ. ಪ್ರತಿ ತಿಂಗಳ 30ನೇ ದಿನಾಂಕದಂತೆ ಸಂಜೆ 5 ಗಂಟೆಗೆ ಲಕ್ಕಿ ಡ್ರಾ ಮಾಡಿ ಫಲಿತಾಂಶವನ್ನು ವಾಟ್ಸಪ್ ಗ್ರೂಪಿಗೆ ತಿಳಿಸುವುದಾಗಿ ಹೇಳುತ್ತಿದ್ದರು. ಬಹುಮಾನವನ್ನು 50-60 ದಿನಗಳಲ್ಲಿ ತಲುಪಿಸುವುದಾಗಿ ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದರು. 20 ತಿಂಗಳ ಲಕ್ಕಿ ಡ್ರಾನಲ್ಲಿ ಒಟ್ಟು 96 ಜನರಿಗೆ ದುಬಾರಿ ವಾಹನ, ಫ್ಲಾಟ್ ಗಿಫ್ಟ್ ನೀಡುವುದಾಗಿ ತಿಳಿಸಿ, ಜನರನ್ನು ಆಕರ್ಷಿಸುತ್ತಿದ್ದರು.
ಇಂತಹ ಸ್ಕೀಮ್ ಗಳನ್ನು ನಡೆಸುವವರು ಬ್ಯಾಂಕಿಂಗ್ ಸಹಿತ ವಿವಿಧ ಇಲಾಖೆಗಳ ಅನುಮತಿ ಮತ್ತು ಲೈಸನ್ಸ್ ಪಡೆದಿರಬೇಕು. ಆದಾಯ ತೆರಿಗೆ, ಜಿಎಸ್ಟಿ ಸಂಬಂಧಿಸಿ ದಾಖಲಾತಿ ಹೊಂದಿರಬೇಕು. ಆದರೆ ಆರೋಪಿಗಳು ಯಾವುದೇ ದಾಖಲೆ, ಪರವಾನಿಗೆ ಇಲ್ಲದೆ ಎಸ್.ವಿ ಸ್ಮಾರ್ಟ್ ವಿಶನ್ ಹೆಸರಲ್ಲಿ ಸ್ಕೀಮ್ ನಡೆಸುತ್ತಿದ್ದರು. ಮೊದಲನೇ ತಿಂಗಳ ಬಹುಮಾನವಾಗಿ ಒಬ್ಬರಿಗೆ ಥಾರ್ ಜೀಪು ಮತ್ತು ಎಂಟು ಜನರಿಗೆ ಬೈಕ್ ನೀಡಬೇಕಾಗಿತ್ತು. ಆದರೆ ಇವರು ಥಾರ್ ಜೀಪು ಬದಲಾಗಿ 7.60 ಲಕ್ಷ ರೂ. ಮತ್ತು 7 ಮಂದಿಗೆ 43 ಸಾವಿರ ರೂ. ಮೊತ್ತದ ಚೆಕ್ ನೀಡಿದ್ದರು. ನಕಲಿ ಸ್ಕೀಮ್ ಬಗ್ಗೆ ಪೊಲೀಸ್ ಗುಪ್ತದಳ ನೀಡಿದ ಮಾಹಿತಿ ಆಧರಿಸಿ ನಗರ ಠಾಣೆಯಲ್ಲಿ ಸುಮೊಟೋ ಕೇಸು ದಾಖಲಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸ್ಕೀಮ್ ನಡೆಸುತ್ತಿದ್ದ ಕಚೇರಿಯಲ್ಲಿದ್ದ ಕಂಪ್ಯೂಟರ್ ಇನ್ನಿತರ ಉಪಕರಣಗಳನ್ನು ಜಪ್ತಿ ಮಾಡಿದ್ದಾರೆ.