ಸುರತ್ಕಲ್: ಕುಳಾಯಿಯಲ್ಲಿ ಪಿಕಪ್ ವಾಹನದ ಧಾವಂತಕ್ಕೆ ನಿಯಂತ್ರಣ ತಪ್ಪಿದ ಕಾರು; ರಸ್ತೆ ಬದಿ ನಡೆದು ಹೋಗುತ್ತಿದ್ದ ಮೂವರು ಪಾದಚಾರಿಗಳ ಮೇಲೆ ಹರಿದ ಕಾರು, ರಾಯಚೂರಿನ ವ್ಯಕ್ತಿ ಸಾವು.

ಮಂಗಳೂರು: ಪಿಕಪ್ ವಾಹನದ ಧಾವಂತಕ್ಕೆ ಹಿಂಬದಿಗೆ ಡಿಕ್ಕಿಯಾಗಿದ್ದರಿಂದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮೂವರು ಪಾದಚಾರಿಗಳ ಮೇಲೆ ಹರಿದಿದ್ದು ಓರ್ವ ಯುವಕ ಸಾವನ್ನಪ್ಪಿದ ಘಟನೆ ಸುರತ್ಕಲ್ ಬಳಿಯ ಕುಳಾಯಿಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರಿನ ದೀಪು ಗೌಡ(45) ಸಾವನ್ನಪ್ಪಿದ ವ್ಯಕ್ತಿ. ಘಟನೆಯಲ್ಲಿ ಕೊಪ್ಪಳ ಜಿಲ್ಲೆಯ ಕರಟಗಿಯ ಪ್ರದೀಪ್ ಕೊಲ್ಕಾರ್(35), ಮಂಗಳೂರಿನ ಕೋಡಿಕೆರೆ ನಿವಾಸಿ ನಾಗರಾಜ್(37) ಗಂಭೀರ ಗಾಯಗೊಂಡಿದ್ದಾರೆ. ಕುಳಾಯಿ ಹೆದ್ದಾರಿ ಬದಿಯ ಶಂಕರ ಭವನ ಹೋಟೆಲ್ ನಲ್ಲಿ ಮೂವರು ಊಟ ಮುಗಿಸಿಕೊಂಡು ರಾಹೆ 66 ದಾಟುತ್ತಿದ್ದಾಗ ಕಾರು ಜವರಾಯನಂತೆ ಬಂದೆರಗಿದೆ.

ಉಡುಪಿ ಕಡೆಯಿಂದ ಬಂದ KA-19-AA-0746 ನಂಬರ್‌ನ ಪಿಕಪ್ ವಾಹನ ಮುಂದಿನಿಂದ ಸಾಗುತ್ತಿದ್ದ ಕಾರಿನ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ರಸ್ತೆಯ ಎಡ ಬದಿಗೆ ತಳ್ಳಲ್ಪಟ್ಟು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ದೀಪು ಗೌಡ, ಪ್ರದೀಪ್ ಮತ್ತು ನಾಗರಾಜ್ ಎಂಬವರಿಗೆ ಡಿಕ್ಕಿಯಾಗಿದೆ. ಈ ವೇಳೆ, ಪ್ರದೀಪ್ ಮತ್ತು ನಾಗರಾಜ್ ರಸ್ತೆಗೆ ಎಸೆಯಲ್ಪಟ್ಟರೆ, ದೀಪು ಗೌಡ ಅವರನ್ನು ಕಾರು ತಳ್ಳಿಕೊಂಡು ಸಾಗಿದೆ. ದೀಪು ಗೌಡ ತಲೆಗೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಪ್ರದೀಪ್ ಮತ್ತು ನಾಗರಾಜ್ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.