Kerala: ಆರು ವರ್ಷಗಳಿಂದ ಸಂಬಳ ಇಲ್ಲದೆ ಪರದಾಟ ; ಅನುದಾನಿತ ಶಾಲೆಯ ಹುದ್ದೆಗಾಗಿ 13 ಲಕ್ಷ ಕೊಟ್ಟರೂ ಸಿಗದ ನೇಮಕಾತಿ, ಕೆಥೋಲಿಕ್ ಮ್ಯಾನೇಜ್ಮೆಂಟ್ ಸತಾಯಿಸಿದ್ದಕ್ಕೆ ಸಾವಿಗೆ ಶರಣಾದ ಕ್ರಿಸ್ತಿಯನ್ ಶಿಕ್ಷಕಿ

ಕೋಜಿಕ್ಕೋಡ್: ಕೆಥೋಲಿಕ್ ಡಯಾಸಿಸ್ ವತಿಯಿಂದ ನಡೆಸಲ್ಪಡುವ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಯುವತಿಯೊಬ್ಬರು ಶಾಲೆಯ ಮ್ಯಾನೇಜ್ಮೆಂಟ್ ಆರು ವರ್ಷಗಳಿಂದ ಸಂಬಳ ನೀಡದೆ ಸತಾಯಿಸಿದ್ದರಿಂದ ಬೇಸತ್ತು ತನ್ನ ಮನೆಯಲ್ಲೇ ಸಾವಿಗೆ ಶರಣಾದ ಘಟನೆ ಕೇರಳದ ಕೋಜಿಕ್ಕೋಡ್ ನಲ್ಲಿ ನಡೆದಿದ್ದು, ರಾಜ್ಯದ ಗಮನ ಸೆಳೆದಿದೆ.
ಕೋಜಿಕ್ಕೋಡ್ ಜಿಲ್ಲೆಯ ಕೊಡಂಚೇರಿಯ ಸೈಂಟ್ ಜೋಸೆಫ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅಲೀನಾ ಬೆನ್ನಿ (29) ಸಾವಿಗೆ ಶರಣಾದ ಯುವತಿ. ದಿ ಕೆಥೋಲಿಕ್ ಡಯಾಸಿಸ್ ಆಫ್ ತಾಮರಶ್ಶೇರಿಯವರು ಸರಕಾರದ ಅನುದಾನಿತ ಶಾಲೆಯನ್ನು ನಡೆಸುತ್ತಿದ್ದು, ಅವರದೇ ಶಾಲೆಯಲ್ಲಿ ಅಲೀನಾ ಶಿಕ್ಷಕಿಯಾಗಿದ್ದರು. ಅಲೀನಾ ಅವರು ಈ ಹಿಂದೆ 5 ವರ್ಷಗಳ ಕಾಲ ಇದೇ ಡಯಾಸಿಸ್ ನಿಂದ ನಡೆಸಲ್ಪಡುವ ಮತ್ತೊಂದು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಆನಂತರ, ಕಳೆದ ಜೂನ್ ತಿಂಗಳಲ್ಲಿ ಈ ಶಾಲೆಗೆ ಬಂದು ಶಿಕ್ಷಕಿಯಾಗಿ ಸೇರಿದ್ದರು.

ಅಲೀನಾ ಅವರ ತಂದೆ ಬೆನ್ನಿ, ಮಗಳ ಸಾವಿಗೆ ಶಾಲೆಯ ಆಡಳಿತವೇ ಕಾರಣ ಎಂದು ಆರೋಪ ಮಾಡಿದ್ದಾರೆ. ಮೊದಲಿಗೆ, ಇದೇ ಆಡಳಿತಕ್ಕೊಳಪಟ್ಟ ಕಟ್ಟಿಪ್ಪಾರ ಎಂಬಲ್ಲಿನ ನಝರೆತ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಕೆಯನ್ನು ಶಿಕ್ಷಕಿಯಾಗಿ ನೇಮಿಸಲಾಗಿತ್ತು. ಅದು ಕೂಡ ತಾಮರಶ್ಶೇರಿ ಡಯಾಸಿಸ್ ನಿಂದಲೇ ನಡೆಸಲ್ಪಡುವ ಶಾಲೆ. ಆದರೆ, ಅಲ್ಲಿ ಶಿಕ್ಷಕಿಯೊಬ್ಬರನ್ನು ಅಮಾನತು ಮಾಡಿದ ಜಾಗಕ್ಕೆ ಅಲೀನಾಳನ್ನು ನೇಮಕ ಮಾಡಲಾಗಿತ್ತು. ಆನಂತರ, ಅಮಾನತಿಗೊಳಗಾದ ಶಿಕ್ಷಕಿ ಮರಳಿ ಕೆಲಸಕ್ಕೆ ಹಾಜರಾಗಿದ್ದರಿಂದ ಈಕೆಗೆ ಕೆಲಸ ಇಲ್ಲದಾಗಿತ್ತು.
ಆದರೆ ಈ ನಡುವೆ, ಮ್ಯಾನೇಜ್ಮೆಂಟ್ ದೊಡ್ಡ ಪಡೆದಿದ್ದು, ಕೆಲಸದ ಖಾಯಮಾತಿ ಬಗ್ಗೆ ಆಶ್ವಾಸನೆಯನ್ನೂ ನೀಡಿತ್ತು. 2024ರ ಜೂನ್ ತಿಂಗಳಲ್ಲಿ ಈಗಿನ ಕೊಡಂಚೇರಿ ಶಾಲೆಗೆ ನೇಮಿಸಿದ್ದು, ಅಲ್ಲಿ ಪರ್ಮನೆಂಟ್ ಹುದ್ದೆ ಕೊಡಿಸುವುದಾಗಿ ಹೇಳಿದ್ದರು. ಇದೇ ಸಂದರ್ಭದಲ್ಲಿ ಈ ಹಿಂದೆ ಐದು ವರ್ಷಗಳ ಕಾಲ ಕೆಲಸ ಮಾಡಿದ್ದಕ್ಕೆ ಯಾವುದೇ ವೇತನ ಪಡೆಯಲು ಬಯಸುವುದಿಲ್ಲ ಎಂದು ಬರೆದು ಕೊಡಬೇಕೆಂದು ಷರತ್ತು ವಿಧಿಸಿದ್ದರು. ಇದಕ್ಕೆ ಅಲೀನಾ ಒಪ್ಪಿದ್ದು, ಇಲ್ಲಿ ನೇಮಕಾತಿ ಮಾಡಿದರೆ ಹಳೆಯ ಸಂಬಳವನ್ನು ಬಿಟ್ಟು ಬಿಡುತ್ತೇನೆ ಎಂದಿದ್ದರು. ಸ್ಕೂಲ್ ಪಿಟಿಎ ಅಸೋಸಿಯೇಶನ್ ಕಡೆಯಿಂದ, ಅಲೀನಾ ಅವರ ದಿನದ ಬಸ್ ಖರ್ಚಿಗೆಂದು ತಿಂಗಳಿಗೆ ಮೂರು ಸಾವಿರ ಮಾತ್ರ ನೀಡುತ್ತಿದ್ದರು. ಚರ್ಚ್ ಮ್ಯಾನೇಜ್ಮೆಂಟ್ ಕಡೆಯಿಂದ ಚಿಕ್ಕಾಸನ್ನೂ ನೀಡಿಲ್ಲ. ನಾವು ಹುದ್ದೆ ಗಿಟ್ಟಿಸುವುದಕ್ಕಾಗಿ ದೊಡ್ಡ ಮೊತ್ತ ನೀಡಿದ್ದೆವು ಎಂದು ಅಲೀನಾ ತಂದೆ ಬೆನ್ನಿ ತಿಳಿಸಿದ್ದಾರೆ.

ಶಾಲೆಗಳನ್ನು ನೋಡಿಕೊಳ್ಳುವ ತಾಮರಶ್ಶೇರಿ ಡಯಾಸಿಸ್ ಮ್ಯಾನೇಜರ್ ಫಾ.ಜೋಸೆಫ್ ವರ್ಗೀಸ್ ಪ್ರತಿಕ್ರಿಯಿಸಿ, ಪರ್ಮನೆಂಟ್ ಹುದ್ದೆ ನೇಮಕಾತಿಗಾಗಿ ಆಕೆಯ ಅರ್ಜಿಯನ್ನು ಸರ್ಕಾರದ ಶಿಕ್ಷಣ ಇಲಾಖೆಗೆ ಕಳಿಸಿಕೊಡಲಾಗಿದೆ. ತಾಂತ್ರಿಕ ಕಾರಣದಿಂದ ನೇಮಕಾತಿ ಆಗಿರಲಿಲ್ಲ ಎಂದಿದ್ದಾರೆ. ಇವರ ಮಾತಿಗೆ ಬೆನ್ನಿ ಕೌಂಟರ್ ನೀಡಿದ್ದು, ನಾನು ಹಲವು ಬಾರಿ ಫಾದರ್ ಅವರನ್ನು ಭೇಟಿಯಾಗಿದ್ದೇನೆ. ಈ ವೇಳೆ, ಹಲವು ಶಿಕ್ಷಕಿಯರು 9 ವರ್ಷಗಳಿಂದಲೂ ಸಂಬಳ ಇಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದ್ದರು. ಇವರು ಈ ರೀತಿ ಮಾಡಿದ್ದರಿಂದಲೇ ನನ್ನ ಮಗಳು ಸಾವಿನ ದಾರಿ ಹಿಡಿದಿದ್ದಾಳೆ ಎಂದು ಅಲವತ್ತುಕೊಂಡಿದ್ದಾರೆ. ಇದೇ ವೇಳೆ, ಕೆಲವು ಮಾಧ್ಯಮಗಳಲ್ಲಿ ಅಲೀನಾ ಕುಟುಂಬದಿಂದ ಹುದ್ದೆ ನೇಮಕಾತಿಗಾಗಿ 13 ಲಕ್ಷ ಮೊತ್ತವನ್ನು ಶಾಲೆಯ ಆಡಳಿತ ಪಡೆದುಕೊಂಡಿತ್ತು ಎಂದೂ ಆರೋಪ ಕೇಳಿಬಂದಿದೆ.