ನವದೆಹಲಿ: ಪಾಕ್ ತಂಡವನ್ನು ಚಾಂಪಿಯನ್ಸ್ ಟೂರ್ನಿಯಿಂದಲೇ ಹೊರಕ್ಕಟ್ಟಿದ ಭಾರತ ; ಕೊಹ್ಲಿ ಶತಕದ ಅಬ್ಬರಕ್ಕೆ ಸುಲಭ ತುತ್ತಾದ ಗೆಲುವು

ನವದೆಹಲಿ: ಪಾಕ್ ತಂಡವನ್ನು ಚಾಂಪಿಯನ್ಸ್ ಟೂರ್ನಿಯಿಂದಲೇ ಹೊರಕ್ಕಟ್ಟಿದ ಭಾರತ ; ಕೊಹ್ಲಿ ಶತಕದ ಅಬ್ಬರಕ್ಕೆ ಸುಲಭ ತುತ್ತಾದ ಗೆಲುವು


ನವದೆಹಲಿ : ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾಟದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿದ್ದು ಪಾಕ್ ಪಡೆಯನ್ನು ಚಾಂಪಿಯನ್ಸ್ ಟೂರ್ನಿಯಿಂದಲೇ ಹೊರದಬ್ಬಿದೆ. 45 ಎಸೆತಗಳು ಬಾಕಿ ಇರುವಂತೆಯೇ ವಿರಾಟ್ ಕೊಹ್ಲಿಯ ಭರ್ಜರಿ ಶತಕದ ನೆರವಿನಿಂದ ಭಾರತವು 4 ವಿಕೆಟ್ ನಷ್ಟಕ್ಕೆ 244 ರನ್ ಪೇರಿಸಿ ಗೆಲುವಿನ ನಗೆ ಬೀರಿದೆ. 

ದುಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಬಾಬರ್ ಆಜಂ (23 ರನ್) ಮತ್ತು ಇಮಾಮ್ ಉಲ್ ಹಕ್ (10 ರನ್) ಇಬ್ಬರೂ ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದು ದುಬಾರಿಯಾಗಿತ್ತು. ಬಾಬರ್ ಆಜಂ ಹಾರ್ದಿಕ್ ಪಾಂಡ್ಯಾ ಎಸೆತಕ್ಕೆ ಔಟ್ ಆದರೆ, ಇಮಾಮ್ ಉಲ್ ಹಕ್ ರನ್ನು ಅಕ್ಸರ್ ಪಟೇಲ್ ಅದ್ಭುತವಾಗಿ ರನೌಟ್ ಮಾಡಿದರು. ಬಳಿಕ ಆಡಲಿಳಿದ ಸೌದ್ ಶಕೀಲ್ (62 ರನ್) ಮತ್ತು ನಾಯಕ ಮಹಮದ್ ರಿಜ್ವಾನ್ (46 ರನ್) ಉತ್ತಮ ಜೊತೆಯಾಟ ನೀಡಿ 3ನೇ ವಿಕೆಟ್ ಗೆ 104 ರನ್ ಸೇರಿಸಿದರು. ಈ ಪೈಕಿ ಸೌದ್ ಶಕೀಲ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಧಾರವಾದರು‌. 

ಇವರು ಔಟಾದ ಬಳಿಕ ಪಾಕಿಸ್ತಾನ ತಂಡಕ್ಕೆ ಆಸರೆ ಸಿಗಲಿಲ್ಲ. ಕುಶ್ದಿಲ್ ಶಾ 38 ರನ್ ಗಳಿಸಿ ಪಾಕ್ ಇನ್ನಿಂಗ್ಸ್ ಗೆ ಜೀವ ತುಂಬಲೆತ್ನಿಸಿದರೂ ಇತರ ಆಟಗಾರರಿಂದ ಸಾಥ್ ಸಿಗಲಿಲ್ಲ. ಕೊನೆಗೆ, 49.4 ಓವರ್ ನಲ್ಲಿ ಪಾಕಿಸ್ತಾನ 241 ರನ್ ಗಳಿಗೆ ಆಲೌಟಾಯಿತು. ಭಾರತದ ಪರ ಕುಲದೀಪ್ ಯಾದವ್ 3, ಹಾರ್ದಿಕ್ ಪಾಂಡ್ಯಾ 2, ಹರ್ಷಿತ್ ರಾಣಾ, ಅಕ್ಸರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು. 

ಇದನ್ನು ಬೆನ್ನತ್ತಿದ ಭಾರತವು ಕೊಹ್ಲಿ ಅವರ ಅಮೋಘ ಶತಕದ ನೆರವಿನಿಂದ ಸುಲಭವಾಗಿ ಗುರಿ ಮುಟ್ಟಿತು. ಆಮೂಲಕ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಪಾಕಿಸ್ತಾನವನ್ನು ಭಾರತ ಲೀಗ್ ಹಂತದಲ್ಲೇ ಹೊರದಬ್ಬುವ ಮೂಲಕ ಹಳೆ ಬಾಕಿಯನ್ನು ತೀರಿಸಿದೆ. ಕೊಹ್ಲಿ ಮತ್ತು ಅಯ್ಯರ್ 3ನೇ ವಿಕೆಟ್‌ಗೆ 114 ರನ್ ಕಲೆಹಾಕುವ ಮೂಲಕ ಭಾರತದ ಗೆಲುವು ಬಹುತೇಕ ಖಚಿತವಾಗಿಸಿದರು. ವಿರಾಟ್ ಕೊಹ್ಲಿ ತಮ್ಮ 51ನೇ ಅಂತಾರಾಷ್ಟ್ರೀಯ ಏಕದಿನ ಶತಕವನ್ನು ಕೊನೆಯ ಎಸೆತದಲ್ಲಿ ಪೂರೈಸುವ ಜೊತೆಗೆ ಭಾರತಕ್ಕೆ ಗೆಲುವು ತಂದುಕೊಟ್ಟರು.

Ads on article

Advertise in articles 1

advertising articles 2

Advertise under the article