ಬೆಂಗಳೂರು : ಶೀಲ ಶಂಕಿಸಿ ನಡುರಸ್ತೆಯಲ್ಲೇ ಚಾಕು ಇರಿದು ಪತ್ನಿಯನ್ನು ಅಮಾನುಷವಾಗಿ ಹತ್ಯೆ ಪತಿ ; ಸ್ನೇಹಿತನ ಜೊತೆಗೆ ಅಕ್ರಮ ಸಂಬಂಧ ಶಂಕೆ!
ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಚಾಕು ಇರಿದು ಪತಿಯೇ ಅಮಾನುಷವಾಗಿ ಕೊಲೆಗೈದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ.
ಮಗುವನ್ನ ಶಾಲೆಗೆ ಬಿಡಲು ಬಂದಿದ್ದ ಪತ್ನಿಯ ಮೇಲೆ ಪತಿ ಅಟ್ಯಾಕ್ ಮಾಡಿದ್ದು ಏಳೆಂಟು ಬಾರಿ ಚಾಕು ಇರಿದಿದ್ದಾನೆ. ತೀವ್ರ ಗಾಯಗೊಂಡು ನೆಲದಲ್ಲಿ ಕುಸಿದು ಬಿದ್ದ ಮಹಿಳೆ ಶ್ರೀಗಂಗಾ(29) ಸಾವನ್ನಪ್ಪಿದ್ದಾಳೆ. ಮೋಹನ್ ರಾಜು(32) ಪತ್ನಿಯನ್ನ ಕೊಲೆಗೈದ ದುರುಳ ವ್ಯಕ್ತಿ.
ಇವರು ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿಗಳಾಗಿದ್ದು ಮದುವೆಯಾಗಿ ಏಳು ವರ್ಷಗಳಾಗಿದ್ದವು. ಇವರಿಗೆ ಆರು ವರ್ಷದ ಮಗನಿದ್ದು ಘಟನೆ ಸಂದರ್ಭದಲ್ಲಿ ಶಾಲೆಗೆ ಹೋಗಿದ್ದ. ಪತಿ ಮೋಹನ್ ರಾಜ್ ತನ್ನ ಸ್ನೇಹಿತನ ಜೊತೆಗೆ ಪತ್ನಿ ಗಂಗಾ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆಂದು ಶಂಕೆಯಲ್ಲಿ ಎರಡು- ಮೂರು ವರ್ಷದಿಂದ ಗಲಾಟೆ ಮಾಡುತ್ತಿದ್ದ. ಗಲಾಟೆಯಿಂದಾಗಿ ಕಳೆದ ಎಂಟು ತಿಂಗಳಿನಿಂದ ಪತಿ, ಪತ್ನಿ ದೂರವಾಗಿಯೇ ನೆಲೆಸಿದ್ದರು.
ನಿನ್ನೆ ರಾತ್ರಿ ಮಗುವನ್ನ ನೋಡಲು ಪತಿ ಮೋಹನ್ ರಾಜ್ ಪತ್ನಿಯಿದ್ದ ಮನೆಗೆ ಬಂದಿದ್ದ. ಆದರೆ ಆಗಲೂ ಮತ್ತೆ ಪತಿ - ಪತ್ನಿ ನಡುವೆ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಾಗಿದ್ದ ಮೋಹನ್ ಬೆಳಗ್ಗೆ ಮಗುವನ್ನ ಶಾಲೆಗೆ ಬಿಡಲು ಸ್ಕೂಟರ್ ನಲ್ಲಿ ಬಂದಿದ್ದ ಶ್ರೀಗಂಗಾಳನ್ನು ಕೊಲ್ಲಲೆಂದೇ ಕಾದು ಕುಳಿತಿದ್ದು ಚೂರಿಯಿಂದ ದಾಳಿ ನಡೆಸಿದ್ದಾನೆ. ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದ ಮಹಿಳೆಯನ್ನ ಆಸ್ಪತ್ರೆಗೆ ಒಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಶ್ರೀಗಂಗಾ ಕೆಲ ಹೊತ್ತಿನಲ್ಲಿಯೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಆರೋಪಿ ಮೋಹನ್ ರಾಜ್ ನನ್ನು ಬಂಧಿಸಿದ್ದಾರೆ.