ಬೆತ್ತಲೆ ನಿಲ್ಲಿಸಿ ಮರ್ಮಾಂಗಕ್ಕೆ ಡಂಬಲ್ಸ್ ಕಟ್ಟಿ ಚಿತ್ರಹಿಂಸೆ ; ಕೇರಳದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಅತಿ ಕ್ರೂರ ರ್ಯಾಗಿಂಗ್, ಐವರು ಆರೋಪಿಗಳ ಬಂಧನ
Friday, February 14, 2025
ಕೇರಳದಲ್ಲಿ ಅತಿ ಕ್ರೂರ ರೀತಿಯ ರ್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಕಿರಿಯ ವಿದ್ಯಾರ್ಥಿಗಳನ್ನು ಬೆತ್ತಲೆಯಾಗಿ ನಿಲ್ಲಿಸಿ ಅವರ ಶಿಶ್ನಕ್ಕೆ ಜಿಮ್ ನಲ್ಲಿ ಬಳಸುವ ಭಾರದ ಡಂಬೆಲ್ಸ್ ಕಟ್ಟಿ ತೂಗು ಹಾಕಿದ್ದಲ್ಲದೆ, ಕಂಪಾಸ್ ಬಾಕ್ಸ್ ನಲ್ಲಿರುವ ಜಾಮೆಟ್ರಿ ಉಪಕರಣಗಳಿಂದ ದೇಹಕ್ಕೆ ಚುಚ್ಚಿ ಚಿತ್ರಹಿಂಸೆ ನೀಡಿರುವ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಐವರು ನರ್ಸಿಂಗ್ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಕೊಟ್ಟಾಯಂ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಮೂವರು ಮೊದಲ ವರ್ಷದ ವಿದ್ಯಾರ್ಥಿಗಳು ತಮಗಾದ ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. 2024ರ ನವೆಂಬರ್ ತಿಂಗಳಿನಿಂದ ಕಿರುಕುಳ ಶುರುವಾಗಿದ್ದು, ಮೂರು ತಿಂಗಳ ವರೆಗೂ ನಿರಂತರವಾಗಿ ಚಿತ್ರಹಿಂಸೆ ಕೊಟ್ಟಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಹಿರಿಯ ವಿದ್ಯಾರ್ಥಿಗಳ ಮುಂದುಗಡೆ ಉದ್ದಕ್ಕೆ ಬೆತ್ತಲೆಯಾಗಿ ನಿಲ್ಲಿಸಿದ್ದಲ್ಲದೆ, ಶಿಶ್ನಕ್ಕೆ ಡಂಬಲ್ಸ್ ಅನ್ನು ಕಟ್ಟಿ ತೂಗು ಹಾಕಲಾಗಿತ್ತು. ಇದಲ್ಲದೆ, ಕಂಪಾಸ್ ಬಾಕ್ಸ್ ನಲ್ಲಿರುವ ಜಾಮೆಟ್ರಿ ಉಪಕರಣಗಳಿಂದ ದೇಹಕ್ಕೆ ಅಲ್ಲಲ್ಲಿ ಚುಚ್ಚಿ ಗಾಯಗೊಳಿಸಿದ್ದಾರೆ. ಆನಂತರ, ಗಾಯಕ್ಕೆ ಉರಿ ಬರುವ ರೀತಿಯ ಮುಲಾಮು ಹಚ್ಚಿ ನೋವಾಗುವಂತೆ ಮಾಡಿದ್ದಾರೆ. ನೋವಿನಿಂದ ಚೀರಾಡಿದಾಗ ಅದನ್ನು ತಮ್ಮದೇ ಬಾಯಿಯಲ್ಲಿ ನೆಕ್ಕಿಸುವ ಮೂಲಕ ಮುಲಾಮನ್ನು ತೆಗೆಸಿದ್ದಾರೆ. ಇದೆಲ್ಲವನ್ನೂ ಹಿರಿಯ ವಿದ್ಯಾರ್ಥಿಗಳು ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಈ ಬಗ್ಗೆ ಯಾರಿಗಾದರೂ ದೂರು ಕೊಟ್ಟರೆ ಭವಿಷ್ಯ ಹಾಳು ಮಾಡುತ್ತೇವೆ, ವಿಡಿಯೋ ಹೊರಗಡೆ ಬಿಡುತ್ತೇವೆ ಎಂದು ಬೆದರಿಸಿದ್ದಾರೆ.
ಇದಲ್ಲದೆ, ಪ್ರತಿ ಭಾನುವಾರವೂ ಮದ್ಯ ಖರೀದಿಗೆಂದು ಹಣ ಕೇಳುತ್ತಿದ್ದರು. ಹಣ ಕೊಡದೇ ಇದ್ದರೆ ಹಲ್ಲೆ ಮಾಡುತ್ತಿದ್ದರು. ಇದರಿಂದ ರೋಸಿಹೋದ ಒಬ್ಬಾತ ತನ್ನ ಮನೆಯಲ್ಲಿ ತಂದೆಗೆ ಹೇಳಿದ್ದು ಅವರು ಧೈರ್ಯ ಮಾಡಿಸಿ ಪೊಲೀಸರಿಗೆ ದೂರು ನೀಡುವಂತೆ ಮಾಡಿದ್ದಾರೆ. ಇದರಿಂದಾಗಿ ತಡವಾಗಿಯಾದರೂ ಪ್ರಕರಣ ಬೆಳಕಿಗೆ ಬರುವಂತಾಗಿದೆ. ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ. ಕಳೆದ ಜನವರಿ ತಿಂಗಳಲ್ಲಿ ಕೊಚ್ಚಿಯಲ್ಲಿ 15 ವರ್ಷದ ಬಾಲಕನೊಬ್ಬ ಇದೇ ರೀತಿ ತೀವ್ರ ರ್ಯಾಗಿಂಗ್ ಒಳಗಾಗಿ ಅಪಾರ್ಟ್ಮೆಂಟ್ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದರ ಬೆನ್ನಲ್ಲೇ ಕೊಟ್ಟಾಯಂನಲ್ಲಿ ಚಿತ್ರಹಿಂಸೆ ಕೃತ್ಯ ಬೆಳಕಿಗೆ ಬಂದಿದೆ.