Delhi Railway station stampede, 18 Dead: ದೆಹಲಿಯಲ್ಲಿ ಘೋರ ದುರಂತ ; ರೈಲ್ವೇ ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ, ಮಹಾಕುಂಭಕ್ಕೆ ಹೊರಟಿದ್ದ 18 ಜನ ಬಲಿ, ಸಾವಿರಾರು ಜನರು ನೂಕುನುಗ್ಗಲು ದುರಂತಕ್ಕೆ ಕಾರಣ!
Sunday, February 16, 2025
ಶನಿವಾರ ಸಂಜೆ ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಪ್ರಾಣ ಕಳೆದುಕೊಂಡಿದ್ದಾರೆ. 15-20 ನಿಮಿಷಗಳ ಅವಧಿಯಲ್ಲಿ ನೂರಾರು ಪ್ರಯಾಣಿಕರು 13 ಮತ್ತು 14 ನೇ ಪ್ಲಾಟ್‌ಫಾರ್ಮ್‌ಗಳಲ್ಲಿ ಹಠಾತ್ ಜಮಾಯಿಸಿದ ನಂತರ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.
ನವದೆಹಲಿ, ಫೆ 16: ಶನಿವಾರ ಸಂಜೆ ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಪ್ರಾಣ ಕಳೆದುಕೊಂಡಿದ್ದಾರೆ. 15-20 ನಿಮಿಷಗಳ ಅವಧಿಯಲ್ಲಿ ನೂರಾರು ಪ್ರಯಾಣಿಕರು 13 ಮತ್ತು 14 ನೇ ಪ್ಲಾಟ್‌ಫಾರ್ಮ್‌ಗಳಲ್ಲಿ ಹಠಾತ್ ಜಮಾಯಿಸಿದ ನಂತರ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟವರಲ್ಲಿ 10 ಮಹಿಳೆಯರು, ಮೂವರು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ರೈಲ್ವೇ ಇಲಾಖೆ ತನಿಖೆಗೆ ಆದೇಶಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ನವದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ನನಗೆ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಸಂತಾಪಗಳು. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ
ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಲು ತೆರಳುವ ಪ್ರಯಾಣಿಕರು ಭಾರೀ ಪ್ರಮಾಣದಲ್ಲಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಘಟನೆ ಬಗ್ಗೆ ರೈಲ್ವೆ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಕೆಪಿಎಸ್ ಮಲ್ಹೋತ್ರಾ, ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ಪ್ಲಾಟ್‌ಫಾರ್ಮ್ ಸಂಖ್ಯೆ 14 ರಲ್ಲಿ ನಿಂತಿದ್ದಾಗ ಅಪಾರ ಸಂಖ್ಯೆಯ ಜನರು ಸೇರಿದ್ದರು. ಅದೇ ಸಮಯದಲ್ಲಿ ಎರಡು ರೈಲುಗಳು - ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಮತ್ತು ಭುವನೇಶ್ವರ ರಾಜಧಾನಿ ರೈಲು ವಿಳಂಬಗೊಂಡ ಕಾರಣ ಅವುಗಳ ಪ್ರಯಾಣಿಕರು ಸಹ ಪ್ಲಾಟ್‌ಫಾರ್ಮ್ ಸಂಖ್ಯೆ 12, 13 ಮತ್ತು 14 ರಲ್ಲಿ ಬಂದು ಸೇರಿದ್ದರು.
ಪ್ರಕರಣದ ತನಿಖೆಯನ್ನು ಆರಂಭಿಸಿರುವ ದೆಹಲಿ ಪೊಲೀಸರು, ಘಟನೆ ಸ್ಫೋಟಗೊಳ್ಳುವ ಮುನ್ನ ಏನಾಯಿತು ಎಂಬುವುದರ ಬಗ್ಗೆ ನಿರ್ಧರಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಣೆ ಮಾಡಲಿದ್ದಾರೆ. ‘ಕಾಲ್ತುಳಿತ ಸಂಭವಿಸಲು ಕಾರಣವಾದ ಘಟನೆ ಏನೆಂಬುವುದನ್ನು ತಿಳಿದುಕೊಳ್ಳುವುದು ನಮ್ಮ ಮೊದಲ ಗುರಿಯಾಗಿದೆ. ಆ ಸಮಯದ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಧ್ವನಿ ಪ್ರಕಟಣೆಗಳನ್ನು ಸಂಗ್ರಹಿಸುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ಲಾರ್ಟ್‌ಫಾರ್ಮ್ ಬದಲಾವಣೆ ಬಗ್ಗೆ ತಪ್ಪಾಗಿ ಪ್ರಕಟಣೆ ಹೊರಡಿಸಿದ್ದರಿಂದ ಗೊಂದಲ ಉಂಟಾಗಿ ಕಾಲ್ತುಳಿತ ಸಂಭವಿಸಿರುವ ಸಾಧ್ಯತೆಯಿದೆ ಎಂದೂ ಮೂಲಗಳು ತಿಳಿಸಿವೆ.