ದೆಹಲಿ: ಸಿಎಂ ಸ್ಥಾನಕ್ಕೆ ಬಿಜೆಪಿ ಅಚ್ಚರಿ ಆಯ್ಕೆ ; ರಾಜಧಾನಿಗೆ ನಾಲ್ಕನೇ ಮಹಿಳಾ ಮುಖ್ಯಮಂತ್ರಿ, ಮೊದಲ ಬಾರಿಯ ಶಾಸಕಿ ರೇಖಾ ಗುಪ್ತಾಗೆ ಸಿಎಂ ಪಟ್ಟ!
ನವದೆಹಲಿ: ದೆಹಲಿಯಲ್ಲಿ ಭಾರೀ ಅಂತರದಿಂದ ಗೆಲುವು ದಾಖಲಿಸಿರುವ ಬಿಜೆಪಿ ಸಿಎಂ ಹುದ್ದೆಗೆ ಅಚ್ಚರಿಯ ಹೆಸರನ್ನು ಆಯ್ಕೆ ಮಾಡಿದೆ. ಶಾಲಿಮಾರ್ ಬಾಗ್ ಕ್ಷೇತ್ರದಲ್ಲಿ ಮೊದಲ ಬಾರಿ ಶಾಸಕಿಯಾಗಿರುವ ರೇಖಾ ಗುಪ್ತಾ ದೆಹಲಿಯ ನೂತನ ಮುಖ್ಯಮಂತ್ರಿ ಆಗಲಿದ್ದಾರೆ. ಈ ಹಿಂದೆ 1998ರಲ್ಲಿ ಸುಷ್ಮಾ ಸ್ವರಾಜ್ ದೆಹಲಿಯಲ್ಲಿ ಬಿಜೆಪಿ ಮುಖ್ಯಮಂತ್ರಿಯಾಗಿದ್ದರು.ಇದೀಗ ದೆಹಲಿಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಬಿಜೆಪಿಗೆ ಮತ್ತೊಬ್ಬ ಮಹಿಳಾ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿದೆ. ಅಂದಹಾಗೆ, ರೇಖಾ ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿ ಆಗಲಿದ್ದಾರೆ. ಈ ಹಿಂದೆ ಸುಷ್ಮಾ ಸ್ವರಾಜ್, ಆನಂತರ ಕಾಂಗ್ರೆಸಿನ ಶೀಲಾ ದೀಕ್ಷಿತ್, ಆಪ್ ಪಕ್ಷದಿಂದ ನಾಲ್ಕು ತಿಂಗಳ ಹಿಂದೆ ಆತಿಷಿ ಮುಖ್ಯಮಂತ್ರಿಯಾಗಿದ್ದರು. ಇದೀಗ ಮತ್ತೊಬ್ಬ ಮಹಿಳೆ ರೇಖಾ ಸಿಎಂ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ದೇಶದ 18 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ, ಯಾವುದೇ ಕಡೆ ಮಹಿಳಾ ಮುಖ್ಯಮಂತ್ರಿ ಇಲ್ಲ. ಇದೀಗ ರೇಖಾ ಗುಪ್ತಾ ಅವರನ್ನು ಸಿಎಂ ಸ್ಥಾನಕ್ಕೇರಿಸಿ ಆ ಅಪವಾದವನ್ನು ಹೋಗಲಾಡಿಸಿದೆ. ಉಳಿದಂತೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತೊಬ್ಬ ಮಹಿಳೆಯಾಗಿ ಅಧಿಕಾರ ನಡೆಸುತ್ತಿದ್ದಾರೆ.
ದೆಹಲಿ ಮುಖ್ಯಮಂತ್ರಿ ಗಾದಿಗೆ ಹಲವರು ಆಕಾಂಕ್ಷಿಗಳಾಗಿದ್ದರು. ಮಹಿಳಾ ಕೋಟಾದಿಂದಲೇ ನಾಲ್ಕು ಮಂದಿ ಪ್ರಬಲ ಲಾಬಿ ನಡೆಸುತ್ತಿದ್ದರು. ವೀಕ್ಷಕರಾಗಿ ರವಿಶಂಕರ್ ಪ್ರಸಾದ್ ಮತ್ತು ಓಂಪ್ರಕಾಶ್ ಧನ್ಕರ್, 48 ಮಂದಿ ಶಾಸಕರ ಸಭೆಯ ಬಳಿಕ ಮಾಹಿತಿಯನ್ನು ಕೇಂದ್ರಕ್ಕೆ ರವಾನಿಸಿದ್ದರು. ಆನಂತರ, ಕೇಂದ್ರೀಯ ಸಂಸದೀಯ ಸಮಿತಿ ಅಳೆದು ತೂಗಿ ರೇಖಾ ಗುಪ್ತಾರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದೆ. ಫೆ.20ರಂದು ಬೆಳಗ್ಗೆ ಹತ್ತಕ್ಕೆ ರಾಮಲೀಲಾ ಮೈದಾನದಲ್ಲಿ ಹೊಸ ಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ