ಬೆಂಗಳೂರು : ಬಿಜೆಪಿ ಸರ್ಕಾರದ ಕೋವಿಡ್ ಅಕ್ರಮ ; ಎಫ್ಐಆರ್ ದಾಖಲಾದ ಎರಡು ತಿಂಗಳ ಬಳಿಕ ತನಿಖೆ ಸಿಐಡಿಗೆ, ಎಸ್ಐಟಿ ರಚನೆಗೆ ಅಧಿಕಾರಿಗಳಿಂದಲೇ ಹಿಂದೇಟು
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿತ್ತು ಎನ್ನಲಾದ ಕೋವಿಡ್ ಹಗರಣದ ತನಿಖೆ ಹೊಣೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಕುರಿತು ಎಫ್ಐಆರ್ ದಾಖಲಾದ ಎರಡು ತಿಂಗಳ ಬಳಿಕ ಸಿಐಡಿ ತನಿಖೆಗೆ ಆದೇಶಿಸಿದೆ. ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ, ಮೂವರು ಡಿವೈಎಸ್ಪಿ ಗಳನ್ನು ಒಳಗೊಂಡ ತಂಡ ಹಗರಣದ ತನಿಖೆ ನಡೆಸಲಿದೆ.
ಡಿಸೆಂಬರ್ 13ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಪಿಜಿ ಗಿರೀಶ್, ಲೆಕ್ಕಪತ್ರ ಇಲಾಖೆ ಜಂಟಿ ನಿಯಂತ್ರಕ ಜೆಪಿ ರಘು, ಚುನಾಯಿತ ಪ್ರತಿನಿಧಿಗಳು ಸೇರಿ ಇತರರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅದಕ್ಕೂ ಮುನ್ನ ಕೋವಿಡ್ ಅಕ್ರಮದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವ ಬಗ್ಗೆ ಸಚಿವ ಸಂಪುಟ ನಿರ್ಧಾರ ಕೈಗೊಂಡಿತ್ತು. ಆದರೆ ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳು ಹಾಗೂ ಐಎಎಸ್ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿರುವುದರಿಂದ ಎಸ್ಐಟಿ ನೇತೃತ್ವ ವಹಿಸಲು ಐಪಿಎಸ್ ಅಧಿಕಾರಿಗಳು ಹಿಂದೇಟು ಹಾಕಿದ್ದರು. ಹೀಗಾಗಿ ಇದೀಗ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಕೋವಿಡ್ ವೇಳೆ ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕ ಎನ್-95 ಮಾಸ್ಕ್ ಹಾಗೂ ಪಿಪಿಇ ಕಿಟ್ ಸೇರಿದಂತೆ ಇತರ ಉಪಕರಣಗಳ ಖರೀದಿಯಲ್ಲಿ 167 ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಧಾನಸೌಧ ಠಾಣೆಗೆ ಡಿ.13ರಂದು ದೂರು ದಾಖಲಾಗಿತ್ತು.