ವಿಜಯಪುರ:ಭೀಮಾತೀರದ ಹಂತಕ ಬಾಗಪ್ಪನ ಬರ್ಬರ ಕೊಲೆ ; ಗುಂಡೇಟಿಗೂ ಜಗ್ಗದ ಚಂದಪ್ಪ ಹರಿಜನ್ ಶಿಷ್ಯನಿಗಿತ್ತು ಸುದೀರ್ಘ ಕ್ರಿಮಿನಲ್ ಹಿಸ್ಟರಿ! ಶತ್ರುನಾಶಕ್ಕಾಗಿ ಪೂಜೆ ಮಾಡಿದ್ದರೂ ಜೀವ ಉಳಿಸದ ಶತ್ರು ಪಡೆ !
ವಿಜಯಪುರ: ಭೀಮಾ ತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ ಸಹಚರ ಹಾಗೂ ಸಹೋದರ ಸಂಬಂಧಿ ಬಾಗಪ್ಪ ಹರಿಜನ್ ಹತ್ಯೆ ಮಾಡಲಾಗಿದೆ. ಮಂಗಳವಾರ ರಾತ್ರಿ 8.50ರ ಸುಮಾರಿಗೆ ವಿಜಯಪುರದ ಮದಿನಾ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಈ ಹಿಂದೆ 2023ರಲ್ಲಿ ವಿಜಯಪುರ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿಯಾಗಿತ್ತು. ಆದರೆ ಆಗ ಸ್ವಲ್ಪದರಲ್ಲೇ ಬಾಗಪ್ಪ ಬಚಾವ್ ಆಗಿದ್ದ. ಆದರೆ ಈ ಬಾರಿ ಹಂತಕರು ಯೋಜಿತ ರೀತಿಯಲ್ಲಿ ದಾಳಿ ನಡೆಸಿ ಬಾಗಪ್ಪನನ್ನು ಕೊಂದು ಹಾಕಿದ್ದಾರೆ. ವಿಜಯಪುರದ ಮದಿನಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಬಾಗಪ್ಪ ರಾತ್ರಿ 8:50 ಸುಮಾರಿಗೆ ಮನೆಯಿಂದ ಹೊರ ಬರುತ್ತಿದ್ದಂತೆ ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ನಡೆಸಿದ್ದು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಂತಕರ ಪತ್ತೆಗಾಗಿ ASP ರಾಮನಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಈ ಹಿಂದೆ ವ್ಯಕ್ತಿಯೊಬ್ಬ ಏಕಾಏಕಿ ಐದು ಸುತ್ತು ಗುಂಡು ಹಾರಿಸಿದ್ದರಿಂದ ಬಾಗಪ್ಪ ಹರಿಜನ ಎದೆಯ ಭಾಗಕ್ಕೆ ಹೊಕ್ಕಿತ್ತು. ಕೂಡಲೇ ಆತನನ್ನು ಬಿಎಲ್ ಡಿಇ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಬದುಕುಳಿದಿದ್ದ. ಆದರೆ, ಈಗ ಸುಮಾರು 20 ಜನರಿದ್ದ ತಂಡ ಯೋಜಿತ ರೀತಿಯಲ್ಲಿ ದಾಳಿ ನಡೆಸಿದ್ದು, ಬಾಗಪ್ಪ ಹರಿಜನ್ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ.
ಭಾಗಪ್ಪ ಹರಿಜನ್ ಹತ್ಯೆ ಕುರಿತು ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿದ್ದು, ಬಾಗಪ್ಪ ಮದೀನಾ ನಗರದ ಬಾಡಿಗೆ ಮನೆಯಲ್ಲಿದ್ದ. ಇದೆ ಜಾಗದಲ್ಲಿ ನಾಲ್ಕೈದು ಜನರಿಂದ ಹತ್ಯೆ ಮಾಡಲಾಗಿದೆ. ಆಟೋದಲ್ಲಿ ಬಂದ ನಾಲ್ಕೈದು ಜನರು ಕೊಡಲಿ ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಊಟ ಮಾಡಿಕೊಂಡು ಮನೆ ಎದುರು ಅಡ್ಡಾಡುತ್ತಿದ್ದ ವೇಳೆ ಕೃತ್ಯ ಎಸಗಲಾಗಿದೆ. ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಲ್ಲದೆ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದರು.
ಕರೆಂಟ್ ಕಟ್ ಮಾಡಿ ಹತ್ಯೆ?
ಬಾಗಪ್ಪ ಹತ್ಯೆಗೆ ಎಷ್ಟು ಜನರು ಬಂದಿದ್ದರು ಎಂದು ನಿಖರ ಮಾಹಿತಿ ಇಲ್ಲ ಎಂದು ಎಸ್ಪಿ ತಿಳಿಸಿದ್ದಾರೆ. ಮನೆಯವರು ಕರೆಂಟ್ ಕಟ್ ಮಾಡಿ ಹತ್ಯೆ ಮಾಡಿದ್ದಾಗಿ ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಎಸ್ಪಿ ತಿಳಿಸಿದ್ದಾರೆ. ಬಾಗಪ್ಪ ಮೇಲೆ 10 ಕೇಸ್‌ಗಳಿವೆ, ಈ ಪೈಕಿ 6 ಮರ್ಡರ್ ಕೇಸ್ ಇವೆ. 1993 ರಿಂದಲೇ ಚಂದಪ್ಪ ಹರಿಜನ್ ಜೊತೆಗಿದ್ದಾಗಲೇ ಬಾಗಪ್ಪನ ಕ್ರಿಮಿನಲ್ ಹಿಸ್ಟರಿ ಶುರುವಾಗಿತ್ತು. 2016-17ರಲ್ಲಿ ಬಾಗಪ್ಪನ ಮೇಲೆ ಸೆಕ್ಯೂರಿಟಿ ಕೇಸ್ ಹಾಕಲಾಗಿತ್ತು. ಎಲ್ಲ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಯಾರು ಈ ಬಾಗಪ್ಪ ಹರಿಜನ್?
ಬಾಗಪ್ಪ ಹರಿಜನ್ ಭೀಮಾತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ್‌ನ ಶಿಷ್ಯನಾಗಿದ್ದ. ಜೊತೆಗೆ ಆತನ ಸಂಬಂಧಿಕನೂ ಆಗಿದ್ದ. ಭೀಮಾತೀರದ ಹಂತಕರ ಪೈಕಿ ಅತ್ಯಂತ ಶಾರ್ಪ್ ಶೂಟರ್ ಕೂಡ ಆಗಿದ್ದ. 2000 ವರ್ಷದ ಮೇ ತಿಂಗಳಲ್ಲಿ ಚಂದಪ್ಪ ಹರಿಜನ್ ಹತ್ಯೆ ನಂತರ ಭೀಮಾತೀರದಲ್ಲಿ ಬಾಗಪ್ಪ ಹರಿಜನ್ ತನ್ನದೇ ಆದ ಹವಾ ಕ್ರಿಯೇಟ್ ಮಾಡಿದ್ದ.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ
ಚಂದಪ್ಪ ಹರಿಜನನಿಗೆ ಸೇರಿದ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಚಂದಪ್ಪನ ಕುಟುಂಬಕ್ಕೂ, ಬಾಗಪ್ಪನಿಗೂ ದ್ವೇಷವಿತ್ತು ಎನ್ನಲಾಗಿದೆ. ಅಲ್ಲದೇ ಚಂದಪ್ಪ ಹರಿಜನನ ಸಂಬಂಧಿ ಬಸವರಾಜ್ ಹರಿಜನನ ಹತ್ಯೆ ಪ್ರಕರಣದಲ್ಲೂ ಬಾಗಪ್ಪನ ಹೆಸರು ಕೇಳಿಬಂದಿತ್ತು. ಚಂದಪ್ಪನಿಗೆ ಸೇರಿದ ಒಂದಷ್ಟು ಆಸ್ತಿ ಬಾಗಪ್ಪನ ಕೈಲಿದ್ದುದರಿಂದ ಆತನ ಕುಟುಂಬಕ್ಕೂ ತಕರಾರು ಇತ್ತು. ಹೀಗಾಗಿ ಊರು ಬಿಟ್ಟಿದ್ದ ಚಂದಪ್ಪ ಪುಣೆ, ಮುಂಬೈ ಅಂತ ತಿರುಗಾಡಿಕೊಂಡಿದ್ದ. ಕಲಬುರಗಿ, ಪುಣೆ, ವಿಜಯಪುರ ಸೇರಿ ಹಲವು ಕಡೆಗಳಲ್ಲಿ ಕೇಸು ಎದುರಿಸುತ್ತಿದ್ದ. 1998 ರಲ್ಲಿ ಸಿಂದಗಿಯಲ್ಲಿ ಸ್ಟನ್ ಗನ್ ಬಳಸಿ ಗುಂಡು ಹಾರಿಸಿದ್ದ ಪ್ರಕರಣ ಸೇರಿದಂತೆ ಹಲವು ಕೇಸ್ಗಳಲ್ಲಿ ಈತನ ಹೆಸರಿದೆ. ಕಳೆದ 2018 ಆಗಸ್ಟ್ 8ರಲ್ಲಿ ಇದೇ ಬಾಗಪ್ಪ ಹರಿಜನ್ ಮೇಲೆ ಪೈರಿಂಗ್ ನಡೆದಿತ್ತು. ಪೀರಪ್ಪ ಹಡಪದ್ ಗುಂಡಿನ ದಾಳಿ ಮಾಡಿದ್ದ. ಆ ಪ್ರಕರಣದಲ್ಲಿ ಮತ್ತೆ ವಿಚಾರಣೆಗೆ ಬಂದಿದ್ದಾಗ ವಿಜಯಪುರದ ಕೋರ್ಟ್ ಆವರಣದಲ್ಲಿ ಗುಂಡಿನ ದಾಳಿ ನಡೆದಿತ್ತು.
ಶತ್ರು ನಾಶಕ್ಕಾಗಿ ದೇವರ ಪೂಜೆ
ಭಾಗಪ್ಪ ಹರಿಜನ ಆಲಮೇಲ ಸಮೀಪದ ಬ್ಯಾಡಗಿಹಾಳ ಗ್ರಾಮದವನು. ಇತ್ತೀಚೆಗೆ ಬ್ಯಾಡಗಿಹಾಳದಲ್ಲಿ ಲಕ್ಷ್ಮಿ ದೇವಿಯ ಗುಡಿ ಕಟ್ಟಿಸಲು 3 ಎಕರೆ ಭೂಮಿ ನೀಡಿದ್ದ. ದೇವರ ಪೂಜೆ, ದೈವಿಕ ಕಾರ್ಯಗಳಲ್ಲಿ ಹೆಚ್ಚು ಮಗ್ನನಾಗಿದ್ದ ಬಾಗಪ್ಪ ಕಳೆದ 6 -7 ವರ್ಷಗಳಿಂದ ಕಂಡ ಕಂಡ ದೇವರಿಗೆ ಕೈ ಮುಗಿದು ಪೂಜಿಸುತ್ತಿದ್ದ. ಕೋರ್ಟ್ ಆವರಣದಲ್ಲಿ ಗುಂಡಿನ ದಾಳಿ ನಂತರ ಬಾಗಪ್ಪನಿಗೆ ಭಯ ಹೆಚ್ಚಾಗಿತ್ತು. ಹಲವಾರು ಮಂದಿಯ ಶತ್ರುತ್ವ ಕಟ್ಟಿಕೊಂಡಿದ್ದ ಕಾರಣಕ್ಕೆ ಸಾವಿನ ಭಯ ಕಾಡ್ತಿತ್ತು. ಹೀಗಾಗಿ ಸಾವಿನ ಭಯ ದೂರಾಗಿಸಲು, ಮನಸ್ಸಿನ ಶಾಂತಿಗಾಗಿ ಪೂಜೆ ಮಾಡಿಸುತ್ತಿದ್ದ. ಶತ್ರು ನಾಶಕ್ಕಾಗಿ ಪೂಜೆ ಮಾಡಿದ್ದ ಬಾಗಪ್ಪನೇ ಈಗ ಹತ್ಯೆಯಾಗಿದ್ದಾನೆ