ಬೆಂಗಳೂರು: ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ; ಮಗಳನ್ನೇ ಕೆರೆಗೆ ತಳ್ಳಿ ಹತ್ಯೆ ಮಾಡಿದ ತಂದೆ ; ಬೆಂಗಳೂರಿನಲ್ಲೂ ಕೂಡ ಆಯಿತು ಮರ್ಯಾದಾ ಹತ್ಯೆ ಪ್ರಕರಣ!

ಬೆಂಗಳೂರು: ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ; ಮಗಳನ್ನೇ ಕೆರೆಗೆ ತಳ್ಳಿ ಹತ್ಯೆ ಮಾಡಿದ ತಂದೆ ; ಬೆಂಗಳೂರಿನಲ್ಲೂ ಕೂಡ ಆಯಿತು ಮರ್ಯಾದಾ ಹತ್ಯೆ ಪ್ರಕರಣ!


ಬೆಂಗಳೂರು: ಮಗಳು ಅನ್ಯಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಾಳೆಂದು ತಂದೆಯೇ ಉಪಾಯದಿಂದ ತನ್ನ ಟಿವಿಎಸ್ ಬೈಕಿನಲ್ಲಿ ಹೋಗುತ್ತಿದ್ದಾಗ ಕೆರೆಗೆ ಬೀಳಿಸಿ ಮಗಳನ್ನು ಕೊಂದಿರುವ ಆರೋಪ ಹೊತ್ತ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ ನಲ್ಲಿ ನಡೆದಿದೆ.

ಆನೆಕಲ್ ಹುಸ್ಕೂರು ಬಳಿಯ ಹಾರೋಹಳ್ಳಿಯಲ್ಲಿ ಘಟನೆ ನಡೆದಿದ್ದು, ಬೈಕ್ ಸಮೇತ ಕೆರೆಗೆ ಬಿದ್ದ ತಂದೆ ರಾಮಮೂರ್ತಿ ನೀರಿನಲ್ಲಿ ಈಜಿ ದಡ ಸೇರಿದ್ದರೆ, ಮಗಳು ಸಹನಾ (20) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಸಾವಿನ ಸುತ್ತ ಅನುಮಾನ ಕೇಳಿಬಂದಿದ್ದು, ತಂದೆಯೇ ಮಗಳನ್ನು ಕೊಂದಿದ್ದಾನೆಂದು ಗಂಭೀರ ಆರೋಪ ಉಂಟಾಗಿದೆ.

ಸಹನಾ ಬೇರೆ ಜಾತಿಗೆ ಸೇರಿದ ನಿಖಿಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಕೆಲವು ದಿನಗಳ ಹಿಂದೆ ಈ ವಿಷಯ ಮನೆಯವರಿಗೂ ತಿಳಿದುಹೋಗಿತ್ತು. ಇದರಿಂದ ಸಿಟ್ಟಿಗೆದ್ದ ತಂದೆ ರಾಮಮೂರ್ತಿ ಮನೆಯಲ್ಲಿ ಗಲಾಟೆ ಮಾಡಿದ್ದಲ್ಲದೆ, ಬೇರೆ ಹುಡುಗನ ಜೊತೆಗೆ ಮದುವೆ ಮಾಡಿಸಲು ಸಿದ್ಧತೆ ನಡೆಸಿದ್ದ. ತನ್ನ ಅಕ್ಕನ ಮಗನೊಂದಿಗೆ ಮದುವೆ ಮಾಡಲು ಮುಂದಾಗಿದ್ದು, ಈ ಬಗ್ಗೆ ಸ್ನೇಹಿತನೊಬ್ಬನ ಮನೆಗೆ ಕರೆದೊಯ್ದು ಮಾತುಕತೆಯನ್ನೂ ನಡೆಸಿದ್ದ. ಅಲ್ಲಿಯೂ ಮಗಳು ಮಾತ್ರ ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು ಎನ್ನಲಾಗಿದೆ.  


ಅಲ್ಲಿಂದ ಮಗಳನ್ನು ಬೈಕಿನಲ್ಲಿ ಕೂರಿಸಿಕೊಂಡು ಬರುತ್ತಿದ್ದಾಗಲೇ ಕೆರೆಯ ಏರಿ ಮೇಲಿನಿಂದ ಚಲಿಸುತ್ತಿದ್ದಾಗ ಬೈಕ್ ಸಮೇತ ಕೆರೆಗೆ ಬಿದ್ದಿದ್ದಾರೆ. ಮಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ತಂದೆ ರಾಮಮೂರ್ತಿ ಈಜಿ ದಡ ಸೇರಿದ್ದ. ಘಟನೆಯ ಬಳಿಕ ಹೆಬ್ಬಗೋಡಿ ಠಾಣೆಗೆ ತೆರಳಿ ಘಟನೆ ಬಗ್ಗೆ ಹೇಳಿಕೊಂಡಿದ್ದ. ಆದರೆ ಆತನ ವರ್ತನೆ ಕಂಡು ಪೊಲೀಸರು ಅನುಮಾನದಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಮರ್ಯಾದಾ ಹತ್ಯೆ- ಪ್ರಿಯಕರ ಆರೋಪ

ಇದೇ ವೇಳೆ, ಯುವತಿಯನ್ನು ಪ್ರೀತಿಸುತ್ತಿದ್ದ ನಿಖಿಲ್ ಮರ್ಯಾದೆ ಹತ್ಯೆ ಬಗ್ಗೆ ಆರೋಪ ಮಾಡಿದ್ದು, ಹುಡುಗಿ ತಂದೆಯ ವಿರುದ್ಧ ಹೆಬ್ಬಗೋಡಿ ಠಾಣೆಗೆ ದೂರು ನೀಡಿದ್ದಾನೆ. ತಂದೆಯೇ ತನ್ನ ಮಗಳನ್ನು ಹತ್ಯೆ ಮಾಡಿದ್ದಾನೆ, ಕೆರೆ ನೀರಿನಲ್ಲಿ ಕಾಲಿನಿಂದ ಒತ್ತಿ ತಲೆ ಮುಳುಗಿಸಿ ಹತ್ಯೆ ಮಾಡಿದ್ದಾನೆ. ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದೆವು. ಎರಡು ದಿನಗಳ ಹಿಂದಷ್ಟೇ ಯುವತಿ ಹೆತ್ತವರಿಗೆ ನಮ್ಮ ಪ್ರೀತಿ ಬಗ್ಗೆ ಗೊತ್ತಾಗಿತ್ತು. ಅದೇ ದಿನ ತನಗೆ ರಾಮಮೂರ್ತಿ ಕರೆ ಮಾಡಿದ್ದು ನಿಂದಿಸಿದ್ದಲ್ಲದೆ ಬೆಳಗ್ಗೆ ಮಾತುಕತೆಗೆ ಬರುವಂತೆ ತಿಳಿಸಿದ್ದರು. ಬೇರೊಂದು ಮನೆಯಲ್ಲಿ ನ್ಯಾಯ ಪಂಚಾಯಿತಿ ಆಗಿದ್ದು, ಈ ವೇಳೆ ಯುವತಿ ಮೇಲೆ ರಾಮಮೂರ್ತಿ ಹಲ್ಲೆ ಮಾಡಿದ್ದ. ಅಲ್ಲದೆ, ಪ್ರಾಣ ಹೋದರೂ ನಿನ್ನ ಪ್ರೀತಿಗೆ ಒಪ್ಪುವುದಿಲ್ಲ ಎಂದು ಆವಾಜ್ ಹಾಕಿದ್ದ. ಈಗ ಮಾರ್ಗ ಮಧ್ಯೆ ಕೆರೆಗೆ ತಳ್ಳಿ ಆಕೆಯನ್ನು ಹತ್ಯೆ ಮಾಡಿದ್ದಾನೆಂದು ಪೊಲೀಸ್ ದೂರು ನೀಡಿದ್ದಾನೆ.

Ads on article

Advertise in articles 1

advertising articles 2

Advertise under the article