ಭೀಮಾತೀರದ ಹಂತಕ ಬಾಗಪ್ಪ ಕೊಲೆ ಪ್ರಕರಣ ; ವಕೀಲ ರವಿ ಹತ್ಯೆಗೆ ಸೇಡು ತೀರಿಸಿದ್ದ ಕುಟುಂಬಸ್ಥರು, ಬರ್ಬರ ಹತ್ಯೆ ಬೆನ್ನಲ್ಲೇ ಸ್ಟೇಟಸ್ ಹಾಕ್ಕೊಂಡಿದ್ದ ತಮ್ಮ ಪಿಂಟು ! ನಾಲ್ವರ ಬಂಧಿಸಿದ ಪೊಲೀಸರು
ವಿಜಯಪುರ, ಫೆ.14: ಭೀಮಾತೀರದ ಹಂತಕ, ನಟೋರಿಯಸ್ ರೌಡಿ ಬಾಗಪ್ಪ ಹರಿಜನ್ ಬರ್ಬರ ಹತ್ಯೆಗೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ಪ್ರಕರಣದ ಸಂಬಂಧಿಸಿ 4 ಜನರನ್ನ ಬಂಧಿಲಾಗಿದೆ. ಪ್ರಕಾಶ್ ಮೇಲಿನಕೇರಿ ಅಲಿಯಾಸ್ ಪಿಂಟು, ರಾಹುಲ್ ಭೀಮಾಶಂಕರ್ ತಳಕೇರಿ, ಸುದೀಪ್ ಕಾಂಬಳೆ ಹಾಗೂ ಮಣಿಕಂಠ ಬೆನಕೊಪ್ಪ ಬಂಧಿತ ಆರೋಪಿಗಳು. ಮೂವರು ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಮಣಿಕಂಠ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ನಿವಾಸಿ ಎಂದು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಿದ ಆಯುಧಗಳು ಹಾಗೂ ಆಟೋ, ಬೈಕ್ ವಶಕ್ಕೆ ಪಡೆಯಲಾಗಿದೆ. ಪಿಸ್ತೂಲ್ ಬಳಸಿ ಗುಂಡು ಹಾರಿಸಿ, ಮಚ್ಚು ಹಾಗೂ ಜಂಬೆಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಆಸ್ತಿ ವಿಚಾರವಾಗಿ ವಕೀಲ ರವಿ ಹಾಗೂ ಭಾಗಪ್ಪ ನಡುವೆ ಗಲಾಟೆ ನಡೆದಿತ್ತು. ಇದೇ ಕಾರಣಕ್ಕಾಗಿ ಭಾಗಪ್ಪನ ಶಿಷ್ಯರು ರವಿಯನ್ನ ಹತ್ಯೆ ಮಾಡಿದ್ದರು. ರವಿ ಹತ್ಯೆಗೆ ಪ್ರತೀಕಾರವಾಗಿ ಆತನ ತಮ್ಮ ಪ್ರಕಾಶ ಮೇಲಿನಕೇರಿ ಸೇಡು ತಿರಿಸಿಕೊಂಡಿದ್ದಾನೆ ಎಂದರು.
ಹತ್ಯೆಗೆ ಸಂಬಂಧಿಸಿ ಮಗಳು ಗಂಗೂಬಾಯಿ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನಲ್ಲಿ, ಈ ಹಿಂದೆ ಕೊಲೆಯಾದ ರವಿ ಅಗರಖೇಡ್ ಸಹೋದರ ಪಿಂಟ್ಯಾ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರು. ಅದರಂತೆ, ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ರವಿ ಅಗರಖೇಡ್ ವಕೀಲ ವೃತ್ತಿಯಲ್ಲಿ ತೊಡಗಿದ್ದ ಯುವಕನಾಗಿದ್ದು ಬಾಗಪ್ಪನ ದೂರ ಸಂಬಂಧಿಯಾಗಿದ್ದ. ಕಳೆದ ವರ್ಷ ವಿಜಯಪುರದ ಕೋರ್ಟ್ನಿಂದ ಸ್ಕೂಟಿಯಲ್ಲಿ ಬರುತ್ತಿದ್ದಾಗ ಇನ್ನೋವಾ ಕಾರು ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ರವಿ ಸ್ಕೂಟಿ ದೂರ ಹೋಗಿ ಬಿದ್ದರೆ, ಆತನ ದೇಹವನ್ನು 2 ಕಿಮೀ ದೂರದವರೆಗೂ ಕಾರಿನಲ್ಲಿ ಎಳೆದೊಯ್ಯಲಾಗಿತ್ತು. ಭೀಕರ ಅಪಘಾತದಿಂದ ರವಿ ಸ್ಥಳದಲ್ಲೇ ಮೃತಪಟ್ಟಿದ್ದರು. ಮೊನ್ನೆ ಬಾಗಪ್ಪ ಹತ್ಯೆ ಬಳಿಕ ರವಿ ಜೊತೆಗಿನ ಪೋಟೋ ಸ್ಟೇಟಸ್ ಹಾಕಿದ್ದ ಪಿಂಟು ಅಣ್ಣಾ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದ.ಸಾಕ್ಷಿ ಹೇಳಲು ಬಂದಿದ್ದ ಬಾಗಪ್ಪ
2018ರ ಆಗಸ್ಟ್ 8 ರಂದು ಕೋರ್ಟ್ ಆವರಣದಲ್ಲಿ ತನ್ನ ಮೇಲೆ ನಡೆದಿದ್ದ ಫೈರಿಂಗ್ ಕೇಸ್ನಲ್ಲಿ ಸಾಕ್ಷಿ ನುಡಿಯಲು ಬಾಗಪ್ಪ ವಿಜಯಪುರ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ವಿರೋಧಿ ಗ್ಯಾಂಗ್‌ಗಳಿಗೆ ಗೊತ್ತಾಗದಿರಲಿ ಎಂದು ನಗರದ ಹೊರ ವಲಯದಲ್ಲಿ ಬಾಡಿಗೆ ಮನೆ ಮಾಡಿದ್ದು ಅಡಿಗೆ ಮಾಡಲು ತನ್ನ ದೂರದ ಸಂಬಂಧಿ ಮಹಿಳೆಯನ್ನು ಇರಿಸಿದ್ದ. ಮೊನ್ನೆ ರಾತ್ರಿ ಬಾಗಪ್ಪ ಊಟ ಮಾಡಿ ವಾಕಿಂಗ್‌ಗೆ ಹೊರ ಬಂದಿದ್ದಾಗಲೇ ಅಟ್ಯಾಕ್ ಮಾಡಿದ್ದರು.