ಮಂಗಳೂರು : ಮಂಗಳೂರಿನ ಅಡಿಕೆ ಸುಪಾರಿ ಕಂಪನಿಗಳಿಗೆ ಐಟಿ ದಾಳಿ ; ಕಚೇರಿ ಮತ್ತು ಮಾಲಕರ ಮನೆಗಳಲ್ಲಿ ಕೋಟ್ಯಂತರ ಮೌಲ್ಯದ ನಗದು, ಚಿನ್ನ ವಶಕ್ಕೆ.
ಮಂಗಳೂರು: ಮಂಗಳೂರು ನಗರದ ಮೂರು ಅಡಿಕೆ ಸುಪಾರಿ ಕಂಪನಿಗಳಿಗೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಅಕ್ರಮವಾಗಿ ಕೂಡಿಟ್ಟಿರುವ ಕೋಟ್ಯಂತರ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ಪತ್ತೆ ಮಾಡಿದ್ದಾರೆ.
ನಗರದ ಕಾರ್ ಸ್ಟ್ರೀಟ್ ಬಳಿಯಿರುವ ಸ್ವಸ್ತಿಕ್ ಟ್ರೇಡಿಂಗ್ ಕಂಪನಿ, ನರೇಶ್ ಅಂಡ್ ಕಂಪನಿ, ಶಿವ್ ಪ್ರೇಮ್ ಟ್ರೇಡರ್ಸ್, ಪರಮೇಶ್ವರ್ ಟ್ರೇಡಿಂಗ್ ಕಂಪನಿ ಶಾಪ್ ಗಳಿಗೆ ದಾಳಿ ಮಾಡಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಕಂಪನಿ ಮೂಲಕ ಅಡಿಕೆ ಸುಪಾರಿ, ಗುಟ್ಕಾ, ಪಾನ್ ಮಸಾಲ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ತರ ಭಾರತಕ್ಕೆ ಪೂರೈಕೆ ಮಾಡುತ್ತಿದ್ದರು. ಬಿಹಾರ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಇವರ ಮಾರುಕಟ್ಟೆ ಹರಡಿಕೊಂಡಿದ್ದು ಸಾವಿರಾರು ಕೋಟಿ ವಹಿವಾಟು ಮಾಡುತ್ತಿದ್ದರು. ಆದರೆ ತೆರಿಗೆ ತಪ್ಪಿಸಲು ಅನಧಿಕೃತವಾಗಿ ಮಾರಾಟ, ವಹಿವಾಟು ನಡೆಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಮಂಗಳೂರಿನ ಐಟಿ ಇಲಾಖೆಯ ಅಧಿಕಾರಿಗಳು ಕಂಪನಿ ಕಚೇರಿಗಳು ಮತ್ತು ಮಾಲಕರ ಮನೆಗಳಿಗೂ ದಾಳಿ ನಡೆಸಿದ್ದಾರೆ. ಸ್ವಸ್ತಿಕ್ ಟ್ರೇಡಿಂಗ್ ಕಂಪನಿ, ಪರಮೇಶ್ವರಿ ಟ್ರೇಡಿಂಗ್ ಕಂಪನಿ ಮತ್ತು ನರೇಶ್ ಅಂಡ್ ಕಂಪನಿಯ ಮಾಲಕರಾದ ಸತ್ಯೇಂದ್ರ ಶರ್ಮಾ ಮತ್ತು ಶಿವಕುಮಾರ್ ಶರ್ಮಾ ಅವರ ಮನೆಗಳಲ್ಲಿ ಅನಧಿಕೃತವಾಗಿ ಕೂಡಿಟ್ಟಿರುವ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದೆ. ಒಟ್ಟು ಎಷ್ಟು ಕೋಟಿ ಮೌಲ್ಯದ ಚಿನ್ನ ಮತ್ತು ನಗದು ಸಿಕ್ಕಿದೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ಅಧಿಕಾರಿಗಳ ಪರಿಶೀಲನೆ ಮುಂದುವರಿದಿದೆ.
ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯಲಾಗುತ್ತಿದ್ದು ಗುಜರಾತಿ ವ್ಯಾಪಾರಿಗಳು ಅಡಿಕೆ ಖರೀದಿಸಿ ಉತ್ತರ ಭಾರತಕ್ಕೆ ರವಾನೆ ಮಾಡುತ್ತಾರೆ. ಜೊತೆಗೆ, ತಮ್ಮದೇ ಪಾನ್ ಮಸಾಲಾ ರೀತಿಯ ಉತ್ಪನ್ನಗಳನ್ನು ತಯಾರಿಸಿ ಸಗಟು ಮಾರಾಟಕ್ಕೆ ಬಿಡುತ್ತಾರೆ. ಇವೆಲ್ಲವನ್ನೂ ನಗದು ವ್ಯವಹಾರದಲ್ಲಿ ನಡೆಸುವ ಮೂಲಕ ಸಾವಿರಾರು ಕೋಟಿ ವಹಿವಾಟು ಆಗುತ್ತಿದ್ದರೂ, ಅದನ್ನು ಸರ್ಕಾರದ ಕಣ್ಣನಿಂದ ಮುಚ್ಚಿಡುತ್ತಾರೆ. ಈ ಬಗ್ಗೆ ಆಗಿಂದಾಗ್ಗೆ ಐಟಿ ಅಧಿಕಾರಿಗಳು ದಾಳಿ ನಾಟಕ ಮಾಡಿದರೂ, ಅವರಿಗೆ ದೊಡ್ಡ ಮೊತ್ತದ ದಂಡ ವಿಧಿಸಿದ್ದಾಗಲೀ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವುದಾಗಲೀ ಮಾಡಿಲ್ಲ