ಅಂಕೋಲಾ: ಕಾರಿನಲ್ಲಿ ಕೋಟಿ ನಗದು ಪತ್ತೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ; ಮಂಗಳೂರಿನ ಜುವೆಲ್ಲರಿ ಮಾಲೀಕನಿಂದ ದರೋಡೆ ಪ್ರಕರಣ, ಕೃತ್ಯದ ಹಿಂದೆ ಹವಾಲಾ ಜಾಲ, ಬಂಗಾರ ಒಯ್ದು ಹಣ ತರುತ್ತಿದ್ದಾಗ ಅಡ್ಡಹಾಕಿದ್ದ ಆಗಂತುಕರು!
ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿಯ ರಾಮನಗುಳಿ ಎಂಬಲ್ಲಿ ಕಾರಿನಲ್ಲಿ 1.15 ಕೋಟಿ ರೂಪಾಯಿ ಪತ್ತೆಯಾದ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಘಟನೆ ಸಂಬಂಧಿಸಿ ಮಂಗಳೂರಿನ ಆಭರಣ ತಯಾರಕರು ದರೋಡೆ ಪ್ರಕರಣ ದಾಖಲಿಸಿದ್ದು, ಹಣ ಸಿಕ್ಕಿದ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿದ್ದಾರೆ. ಪ್ರಕರಣದಲ್ಲಿ ದೊಡ್ಡ ಮಟ್ಟದ ಹವಾಲಾ ಜಾಲ ಸಕ್ರಿಯವಾಗಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

ಜನವರಿ 28ರಂದು ಅಂಕೋಲಾ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 66ರ ರಾಮನಗುಳಿ ಎಂಬಲ್ಲಿನ ಒಳರಸ್ತೆಯ ನಿರ್ಜನ ಪ್ರದೇಶದಲ್ಲಿ ಬಿಳಿ ಬಣ್ಣದ ಕ್ರೆಟಾ ಕಾರು ಹಿಂಬದಿ ಜಖಂಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾರನ್ನು ಪೊಲೀಸರು ಪರಿಶೀಲಿಸಿದಾಗ, ಹಿಂಬದಿ ಸೀಟಿನ ಅಡಿಯಲ್ಲಿ ಬಾಕ್ಸ್ ನಲ್ಲಿ 1.15 ಕೋಟಿ ರೂಪಾಯಿ ನಗದು ಹಣ ಇಟ್ಟಿರುವುದು ಪತ್ತೆಯಾಗಿತ್ತು. ಕಾರಿನ ನೋಂದಣಿ ಸಂಖ್ಯೆ ಬದಲಿಸಿರುವುದು ಮತ್ತು ಕಾರಿನ ಗಾಜುಗಳನ್ನು ಒಡೆದು ಹಾನಿ ಮಾಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿತ್ತಲ್ಲದೆ, ಕೋಟಿ ರೂ.ಗಳ ವಾರಿಸುದಾರರು ಯಾರು ಎನ್ನುವ ಬಗ್ಗೆ ಕುತೂಹಲಕ್ಕೆ ಕಾರಣವಾಗಿತ್ತು.


ಕಾರಿನ ಇಂಜಿನ್ ಚೇಸಿಸ್ ನಂಬರ್ ಆಧರಿಸಿ ತನಿಖೆ ನಡೆಸಿದಾಗ, ಕಾರು ಮಂಗಳೂರಿನ ಅಳಕೆ ನಿವಾಸಿಯಾಗಿರುವ ಮಹಾರಾಷ್ಟ್ರದ ಖಾನಾಪುರ ಮೂಲದ ಬಂಗಾರದ ಆಭರಣಗಳ ತಯಾರಕ ವಿವೇಕ್ ಸುರೇಶ್ ಪವಾರ್ ಎನ್ನುವವರಿಗೆ ಸೇರಿದ್ದು ಎಂದು ತಿಳಿದುಬಂದಿತ್ತು. ಪೊಲೀಸರು ಆತನನ್ನು ವಿಚಾರಣೆಗೆ ಬರುವಂತೆ ಹೇಳಿದ್ದರೂ, ಹಣದ ಬಗ್ಗೆ ಪೊಲೀಸರಿಗೂ ಕ್ಲಾರಿಟಿ ಸಿಕ್ಕಿರಲಿಲ್ಲ. ಇದೀ ವಿವೇಕ ಪವಾರ್, ಮಂಗಳೂರು ಕಾರ್ ಸ್ಟ್ರೀಟ್ ನಿವಾಸಿ ರಾಜೇಂದ್ರ ಪ್ರಕಾಶ್ ಪವಾರ್, ಬಂಟ್ವಾಳದ ಪುಣಚ ನಿವಾಸಿ ಅಬ್ದುಲ್ ಸಮದ್ ಮತ್ತು ಮಂಗಳೂರಿನ ಜಪ್ಪು ಕುಡುಪಾಡಿ ನಿವಾಸಿ ಮಹಮ್ಮದ್ ಇಸಾಕ್ ಎಂಬವರು ಅಂಕೋಲಾ ಪೊಲೀಸ್ ಠಾಣೆಗೆ ಹಾಜರಾಗಿದ್ದು, ದರೋಡೆ ಕುರಿತಂತೆ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಮಂಗಳೂರಿನ ಜುವೆಲ್ಲರಿ ಮಾಲೀಕ ರಾಜೇಂದ್ರ ಪವಾರ್ ಅವರ ಕಾರು ಚಾಲಕನಾದ ಮಹಮ್ಮದ್ ಇಸಾಕ್ ಎಂಬಾತ ಜುವೆಲ್ಲರಿ ವ್ಯವಹಾರ ನೋಡಿಕೊಳ್ಳುತ್ತಿದ್ದ ಆಕಾಶ್ ಪವಾರ್ ಸೂಚನೆಯಂತೆ ಬೆಳಗಾವಿಯ ಸಚಿನ್ ಜಾಧವ್ ಎಂಬವರಿಗೆ ಬಂಗಾರ ತಲುಪಿಸಲು ಕಾರಿನಲ್ಲಿ ತೆರಳಿದ್ದ. ಈ ವೇಳೆ, ಮಹಮ್ಮದ್ ಇಸಾಕ್ ತನ್ನ ಜೊತೆಗೆ ಇನ್ನೋರ್ವ ಕಾರು ಚಾಲಕ ಅಬ್ದುಲ್ ಸಮದ್ ಎಂಬಾತನನ್ನು ಜೊತೆಗೆ ಕರೆದೊಯ್ದಿದ್ದು, ಜ.26ರಂದು ಬೆಳಗ್ಗೆ 3.45ಕ್ಕೆ ಕೆಎ 19 ಎಂಪಿ 1036 ನಂಬರಿನ ಕಾರಿನಲ್ಲಿ ಬೆಳಗಾವಿಗೆ ತೆರಳಿದ್ದರು. ಈ ವೇಳೆ ಸೀಟಿನ ಅಡಿಭಾಗದಲ್ಲಿ ಲಾಕರಿನಲ್ಲಿ ಬಂಗಾರ ಇಟ್ಟಿದ್ದು ಕಾರಿನ ನಂಬರ್ ಪ್ಲೇಟನ್ನು ಬದಲಿಸಿ (ಕೆಎ 51 ಎಂಬಿ 9634) ಬೆಳಗಾವಿ ನಗರದತ್ತ ಹೊರಟಿದ್ದರು. ಬೆಳಗ್ಗೆ 11.30ರ ಸುಮಾರಿಗೆ ಬೆಳಗಾವಿ ತಲುಪಿದ್ದು,
ಅಲ್ಲಿ ತುಷಾರ್ ಎನ್ನುವವರು ಬಂದು 2.95 ಕೋಟಿ ರೂ. ನಗದು ನೀಡಿ ಬಂಗಾರವನ್ನು ಪಡೆದುಕೊಂಡಿದ್ದರು.
ಈ ಹಣದಲ್ಲಿ 1.80 ಕೋಟಿ ರೂ.ವನ್ನು ಚಾಲಕನ ಅಡಿಭಾಗದ ಸೀಟಿನಡಿಯಲ್ಲಿ ಇಟ್ಟಿದ್ದರೆ, ಉಳಿದ 1.15 ಕೋಟಿ ರೂ.ವನ್ನು ಹಿಂಬದಿ ಸೀಟಿನ ಅಡಿಯಲ್ಲಿ ಬಾಕ್ಸ್ ನಲ್ಲಿ ಇಟ್ಟಿದ್ದರು. ಅದೇ ದಿನ ಕಾರಿನಲ್ಲಿ ಯಲ್ಲಾಪುರ ದಾಟಿ ಅಂಕೋಲಾ ಕಡೆ ಬರುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಓವರ್ ಟೇಕ್ ಮಾಡಿ ಬಂದ ಐದು ಜನ ಅಪರಿಚಿತ ವ್ಯಕ್ತಿಗಳು ತಲವಾರು, ಚಾಕು ಹಿಡಿದು ಅಡ್ಡಗಟ್ಟಿ ಕಾರಿನ ಗಾಜುಗಳನ್ನು ಒಡೆದು ಇಬ್ಬರು ಚಾಲಕರ ಮೊಬೈಲ್, ಪರ್ಸ್ ಕಿತ್ತುಕೊಂಡು ಕಾರನ್ನು ಅಪಹರಿಸಿ ಚಾಲಕನ ಸೀಟಿನ ಅಡಿಯಲ್ಲಿದ್ದ 1.80 ಕೋಟಿ ರೂ. ಹಣವನ್ನು ದರೋಡೆ ಮಾಡಿದ್ದರು. ಬಳಿಕ ಕಾರನ್ನು ರಾಮನಗುಳಿಯ ಒಳರಸ್ತೆಯಲ್ಲಿ ಬಿಟ್ಟು ತೆರಳಿದ್ದರು ಎಂದು ಪೊಲೀಸ್ ಠಾಣೆಗೆ ಹಾಜರಾದ ನಾಲ್ವರು ದೂರಿನಲ್ಲಿ ತಿಳಿಸಿದ್ದಾರೆ. ದರೋಡೆ ಪ್ರಕರಣದಿಂದಾಗಿ ಹೆದರಿ ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ಹೇಳಿದ್ದಾರೆ.

ತೆರಿಗೆ ತಪ್ಪಿಸಲು ಹವಾಲಾ ಜಾಲ
ಮಂಗಳೂರಿನಿಂದ ಬೆಳಗಾವಿ, ಮುಂಬೈ ನಡುವೆ ಜುವೆಲ್ಲರಿ, ನಗದು ವ್ಯವಹಾರದ ಹವಾಲಾ ಜಾಲ ಹಿಂದಿನಿಂದಲೂ ಸಕ್ರಿಯವಾಗಿದೆ. ಆಭರಣಗಳನ್ನು ತಯಾರಿಸಿ ಅವುಗಳನ್ನು ಬೇರೆ ಬೇರೆ ಜುವೆಲ್ಲರಿ ಮಾಲಕರಿಗೆ ತಲುಪಿಸುತ್ತಿದ್ದು, ತೆರಿಗೆ ತಪ್ಪಿಸುವುದಕ್ಕಾಗಿ ನೇರವಾಗಿ ಕಾರು, ಬಸ್ಸುಗಳಲ್ಲಿ ಒಯ್ಯಲಾಗುತ್ತದೆ. ಕಾರಿನಲ್ಲಿ ಕೋಟ್ಯಂತರ ಮೌಲ್ಯದ ಬಂಗಾರ ಒಯ್ಯುತ್ತಿರುವುದನ್ನು ತಿಳಿದು ಯಾರಾದ್ರೂ ದರೋಡೆಗೆ ಸ್ಕೆಚ್ ಹಾಕುತ್ತಾರೆಂದೇ ಸಾಗಾಟ ಸಂದರ್ಭದಲ್ಲಿ ನಂಬರ್ ಪ್ಲೇಟ್ ಬದಲಿಸುತ್ತಾರೆ ಎನ್ನಲಾಗುತ್ತದೆ. ಇದೇ ರೀತಿ ಬಂಗಾರ ತಲುಪಿಸಿ ಎರಡೂವರೆ ಕೋಟಿ ಹಣವನ್ನು ಮರಳಿ ತರುತ್ತಿದ್ದಾಗ ಇದರ ಬಗ್ಗೆ ತಿಳಿದವರು ಅಂಕೋಲಾದಲ್ಲಿ ದರೋಡೆ ಮಾಡಿದ್ದಾರೆ. ಈಗ ದೂರು ನೀಡಿರುವ ರಾಜೇಂದ್ರ ಪವಾರ್, ಗೋಲ್ಡ್ ಸ್ಮಗ್ಲಿಂಗ್, ಹವಾಲಾ ಜಾಲದ ಆರೋಪದಲ್ಲಿ ಮಂಗಳೂರಿನಲ್ಲಿ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.
ಹಿಂದೆಯೂ ಇಂಥದ್ದೇ ದರೋಡೆ ಆಗಿತ್ತು
ಈ ಹಿಂದೆ 2019ರಲ್ಲಿ ಇದೇ ಮಾದರಿಯ ದರೋಡೆ ಪ್ರಕರಣ ಮಂಗಳೂರಿನಲ್ಲಿ ನಡೆದಿತ್ತು. ಬೆಳಗಾವಿಯಿಂದ ಮಂಗಳೂರಿಗೆ ಬಂದಿದ್ದ ಬಸ್ಸಿನಿಂದ ಹಣದ ಬ್ಯಾಗ್ ಜೊತೆಗೆ ಇಳಿದಿದ್ದ ವ್ಯಕ್ತಿಯನ್ನು ಬೆಳ್ಳಂಬೆಳಗ್ಗೆ ಇನ್ನೋವಾ ಕಾರಿನಲ್ಲಿದ್ದ ತಂಡ ಮಂಗಳೂರಿನ ಲೇಡಿಹಿಲ್ ಸರ್ಕಲ್ ನಲ್ಲಿಯೇ ಅಪಹರಿಸಿತ್ತು. ಜುವೆಲ್ಲರಿ ಒಯ್ದು ಸುಮಾರು 2.40 ಕೋಟಿ ಹಣವನ್ನು ಹಿಂದೆ ತರುತ್ತಿದ್ದಾಗ ದರೋಡೆ ಮಾಡಲಾಗಿತ್ತು. ಪ್ರಕರಣ ಸಂಬಂಧಿಸಿ ಮಂಗಳೂರಿನ ಸಿಸಿಬಿ ಪೊಲೀಸರು ಬಿಸಿ ರೋಡ್ ಭಾಗದ ಹಲವರನ್ನು ಬಂಧಿಸಿ ಹಣವನ್ನು ವಸೂಲಿ ಮಾಡಿದ್ದರು. ಮಂಗಳೂರಿನ ರಥಬೀದಿಯ ಜುವೆಲ್ಲರಿ ಮಾಲಕರೇ ಹಣ ದರೋಡೆ ಬಗ್ಗೆ ದೂರು ನೀಡಿದ್ದರು.