ಚಿಕ್ಕಬಳ್ಳಾಪುರ : ಮುಜರಾಯಿ ಖಾತೆಯಲ್ಲಿದ್ದ 60 ಲಕ್ಷ ಹಣವನ್ನು ಹೆಂಡ್ತಿ ಖಾತೆಗೆ ವರ್ಗಾಯಿಸಿದ್ದ ಅಧಿಕಾರಿ ; ತಹಸೀಲ್ದಾರ್ ತನಿಖೆಯಲ್ಲಿ ಆಟಾಟೋಪ ಪತ್ತೆ, ಆರೋಪಿ ರೆವಿನ್ಯು ಇನ್ಸ್ ಪೆಕ್ಟರನ್ನು ಜೈಲಿಗಟ್ಟಿದ ಪೊಲೀಸರು!

ಚಿಕ್ಕಬಳ್ಳಾಪುರ : ಮುಜರಾಯಿ ಇಲಾಖೆ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಸರ್ಕಾರಿ ಅಧಿಕಾರಿಯೋರ್ವ ಹೆಂಡತಿ ಖಾತೆಗೆ ಹಾಕಿಸಿಕೊಂಡು ಮೋಜು ಮಸ್ತಿ ಮಾಡಿ, ಮನೆಯನ್ನೂ ಕಟ್ಟಿಸಿಕೊಂಡ ಪ್ರಸಂಗ ಬೆಳಕಿಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ರೆವೆನ್ಯೂ ಇನ್ಸ್ಪೆಕ್ಟರ್ ಆಗಿದ್ದ ಹೇಮಂತ್ ಕುಮಾರ್ ಸರ್ಕಾರಿ ಖಜಾನೆಯ ಹಣವನ್ನು ಲಪಟಾಯಿಸಿ ಸಿಕ್ಕಿಬಿದ್ದಿದ್ದಾನೆ. ಈ ಹಿಂದೆ ಮುಜರಾಯಿ ಇಲಾಖೆಯಲ್ಲಿ ಹೇಮಂತ್ ಕುಮಾರ್ ಕೇಸ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ಇಲಾಖೆಯ ಬಗ್ಗೆ ಹೆಚ್ಚು ಮಾಹಿತಿ ಅರಿತುಕೊಂಡಿದ್ದ ಹೇಮಂತ್ ಕುಮಾರ್ ಮುಜರಾಯಿ ಇಲಾಖೆಯಿಂದ 2023- 24ರಲ್ಲಿ ಇಬ್ಬರು ತಹಶೀಲ್ದಾರ್ ಸಹಿ ಪಡೆದು ಮತ್ತು ಸೀಲ್ ನಕಲಿ ಮಾಡಿ ಸುಮಾರು 60 ಲಕ್ಷ ರೂ. ಹಣವನ್ನ ಸ್ವಂತ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ.
ಆನಂತರ, ರೆವಿನ್ಯೂ ಇನ್ಸ್ಪೆಕ್ಟರ್ ಆಗಿ ವರ್ಗಾವಣೆ ಮಾಡಿಕೊಂಡಿದ್ದರೂ ಮುಜರಾಯಿ ಇಲಾಖೆಯ ಚೆಕ್ ಬುಕ್‌ಗಳನ್ನು ಮರಳಿ ಇಲಾಖೆಗೆ ನೀಡದೇ ತನ್ನ ಬಳಿಯೇ ಉಳಿಸಿಕೊಂಡಿದ್ದ. ಅಧಿಕಾರಿಗಳು ಕೇಳಿದಾಗ ಅವರಿಗೆ ಕೊಟ್ಟಿದ್ದೇನೆ, ಇವರಿಗೆ ಕೊಟ್ಟಿದ್ದೇನೆ ಎಂದು ಮರೆಮಾಚಿ, ಹಣ ಡ್ರಾ ಮಾಡಿದ್ದಾನೆ. ಎರಡು ಮೂರು ವರ್ಷದಲ್ಲಿ ಬರೋಬ್ಬರಿ 60 ಲಕ್ಷಕ್ಕೂ ಹೆಚ್ಚು ಹಣವನ್ನು ಹಂತ ಹಂತವಾಗಿ ಹೆಂಡತಿ ಸೇರಿ ಇತರರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದ.
ತಹಶೀಲ್ದಾರ್ ಮುಜರಾಯಿ ಇಲಾಖೆ ಖಾತೆಯ ಹಣದ ಬಗ್ಗೆ ಪರಿಶೀಲನೆ ಮಾಡಿದಾಗ ಅನುಮಾನ ಬಂದಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಖಚಿತ ಮಾಹಿತಿಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿ ಮುಜರಾಯಿ ಖಜಾನೆಯಿಂದ ಪಡೆದ ಹಣದಲ್ಲಿ ಮನೆಯನ್ನ ಕಟ್ಟಿಕೊಂಡಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ.
ಪ್ರಕರಣ ಬೆಳಕಿಗೆ ಬಂದು ಪೊಲೀಸರು ತನಿಖೆ ಕೈಗೆತ್ತಿಕೊಂಡ ಬಳಿಕ ಗಂಡ ಲೂಟಿ ಮಾಡಿದ್ದ 60 ಲಕ್ಷ ರೂ. ಹಣವನ್ನ ಹೆಂಡತಿ ಮರಳಿ ಮುಜರಾಯಿ ಇಲಾಖೆಯ ಖಾತೆಗಳಿಗೆ ವಾಪಸ್ ಹಾಕಿದ್ದಾಳೆ. ಇದೇ ವೇಳೆ, ರೆವಿನ್ಯು ಇನ್ಸ್ ಪೆಕ್ಟರ್ ಆಗಿದ್ದ ಹೇಮಂತ್ ಕುಮಾರ್‌ನನ್ನ ಸೇವೆಯಿಂದ ಅಮಾನತು ಮಾಡಿದ್ದು, ತಹಸೀಲ್ದಾರ್ ಇಲಾಖಾ ವಿಚಾರಣೆಗೆ ಒಳಪಡಿಸಿದ್ದಾರೆ