ಬೆಂಗಳೂರು:ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ; ಒಂದೇ ದಿನದ ಅಂತರದಲ್ಲಿ 6 ಜನ ಆತ್ಮಹತ್ಯೆ.
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಒಂದೇ ದಿನದ ಅಂತರದಲ್ಲಿ 6 ಜನ ಬಲಿಯಾಗಿದ್ದು, ಬೆಳಗಾವಿ, ಹಾವೇರಿ, ಹಾಸನ, ಚಿಕ್ಕಬಳ್ಳಾಪುರದಲ್ಲಿ ಇಬ್ಬರು ಸೇರಿದಂತೆ ಒಟ್ಟು 6 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಅಡವಿ ಆಂಜನೇಯ ಬಡಾವಣೆಯಲ್ಲಿ ಮಾಲತೇಶ್ (42) ಎಂಬವರು ಮೈಕ್ರೋ ಫೈನಾನ್ಸ್ ಕಿರುಕುಳದಿಂದ ನೊಂದು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡ ತಾಲೂಕಿನ ಕಂಟೇನಹಳ್ಳಿಯಲ್ಲಿ ರೈತ ರವಿ (50) ಎಂಬವರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವಿ ವಿವಿಧ ಸಹಕಾರಿ ಸಂಘ, ಮೈಕ್ರೋ ಫೈನಾನ್ಸ್ ಗಳಿಂದ 9 ಲಕ್ಷ ಸಾಲ ಮಾಡಿದ್ದರು. ಜೊತೆಗೆ ಶುಂಠಿ ಬೆಲೆ ಕುಸಿತ ಕಂಡಿದ್ದು, ಇದರಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಚ್.ನಾಗಸಂದ್ರ ಗ್ರಾಮದಲ್ಲಿ ಎನ್.ಆರ್ ನರಸಿಂಹಯ್ಯ (58) ಎಂಬವರು ನೇಣಿಗೆ ಶರಣಾಗಿದ್ದಾರೆ. ಆಟೋ ಚಾಲಕರಾಗಿದ್ದ ಇವರು ಧರ್ಮಸ್ಥಳ ಸಂಘ, ಆಶೀರ್ವಾದ, ಗ್ರಾಮೀಣ ಸಂಘ, ಎಲ್ ಅಂಡ್ ಟಿ, ಸ್ಪಂದನ, ಸಮಸ್ತ, ನವ ಚೈತನ್ಯ ಫೈನಾನ್ಸ್ ಕಂಪನಿಗಳಲ್ಲಿ ಒಟ್ಟು 3.5 ಲಕ್ಷ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ಸಾಲ ಕಟ್ಟಲು ಹಣವಿಲ್ಲದ ಕಾರಣ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಗಿರೀಶ್ (26) ಎಂಬ ಕೂಲಿ ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರೀಶ್ ವಿವಿಧ ಮೈಕ್ರೋ ಫೈನಾನ್ಸ್ ಗಳಿಂದ 4 ಲಕ್ಷ ರೂ. ಸಾಲ ಮಾಡಿದ್ದರು. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಶಿವನಪ್ಪ ಧರ್ಮಟ್ಟಿ(66) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕ್ಯಾನ್ಸರ್ ಪೀಡಿತ ಪತ್ನಿ ಚಿಕಿತ್ಸೆಗಾಗಿ ವಿವಿಧ ಫೈನಾನ್ಸ್ ಕಂಪನಿಗಳಿಂದ 10 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಆದ್ರೆ, ಆ ಸಾಲವನ್ನು ಮರು ಪಾವತಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಲಾರಂಭಿಸಿದ್ದರು. ಇದರಿಂದ ಬೇಸತ್ತು ಶಿವನಪ್ಪ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.