ಬೆಂಗಳೂರು : ವಿದೇಶಿ ವರ್ಕಿಂಗ್ ವೀಸಾ ನೀಡುವುದಾಗಿ ಹೇಳಿ 51 ಜನರಿಗೆ ವಂಚನೆ ; 2.64 ಕೋಟಿ ದೋಚಿದ ಬೆಂಗಳೂರಿನ ಖತರ್ನಾಕ್ ದಂಪತಿ ಸೆರೆ

ಬೆಂಗಳೂರು : ವಿದೇಶಿ ವರ್ಕಿಂಗ್ ವೀಸಾ ನೀಡುವುದಾಗಿ ಹೇಳಿ 51 ಜನರಿಗೆ ವಂಚನೆ ; 2.64 ಕೋಟಿ ದೋಚಿದ ಬೆಂಗಳೂರಿನ ಖತರ್ನಾಕ್ ದಂಪತಿ ಸೆರೆ


ಬೆಂಗಳೂರು : ವಿದೇಶಿ ವರ್ಕಿಂಗ್ ವೀಸಾ ಕೊಡಿಸುವುದಾಗಿ ಹೇಳಿ 51 ಜನರಿಂದ ಎರಡೂವರೆ ಕೋಟಿ ಪಡೆದು ವಂಚಿಸಿದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ತಿಲಕನಗರ ನಿವಾಸಿ ಸಕ್ಲೇನ್ ಸುಲ್ತಾನ್ (34) ಮತ್ತು ಈತನ ಪತ್ನಿ ನಿಖಿತಾ ಸುಲ್ತಾನ್ (28) ಬಂಧಿತರು. ಆರೋಪಿಗಳಿಂದ ಎರಡು ಐಷಾರಾಮಿ ಕಾರು, ಎರಡು ದ್ವಿಚಕ್ರ ವಾಹನ, 66 ಲಕ್ಷ ನಗದು, 24 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ರಾಜಸ್ಥಾನ ಮೂಲದ ಮಗ್ ಸಿಂಗ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿ ಸಕ್ಲೇನ್ ಸುಲ್ತಾನ್ ಈ ಹಿಂದೆ ನಗರದ ರೇಸ್ ಕೋರ್ಸ್ ನಲ್ಲಿ ಹಾರ್ಸ್ ರೈಡಿಂಗ್ ಕಲಿಯುವಾಗ ವಿದೇಶಿ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ವಿದೇಶದಲ್ಲಿ ಹಾರ್ಸ್ ಜಾಕಿ ಸೇರಿ ಬೇರೆ ಕೆಲಸ ಮಾಡಲು ಆಸಕ್ತರಿರುವ ವ್ಯಕ್ತಿಗಳಿಗೆ ವೀಸಾ ಮಾಡಿಸಿಕೊಡುತ್ತೇನೆ. ಆಸಕ್ತರನ್ನು ಪರಿಚಯಿಸಿದರೆ ಒಂದು ವೀಸಾಗೆ ರೂ.50 ಸಾವಿರ ಕಮಿಷನ್ ನೀಡುವುದಾಗಿ ಆತ ಹೇಳಿದ್ದ. ಅದರಂತೆ ಆರೋಪಿಗಳು ಆರಂಭದಲ್ಲಿ ಇಬ್ಬರಿಗೆ ಈ ವಿದೇಶಿ ಜಾಕಿ ಮುಖಾಂತರ ವೀಸಾ ಮಾಡಿಸಿ ರೂ.1 ಲಕ್ಷ ಕಮಿಷನ್ ಪಡೆದಿದ್ದಾರೆ. 

ಇದರ ಬಗ್ಗೆ ಇವರು ಜಾಹೀರಾತು ನೀಡಿದ್ದು ರಾಜಸ್ಥಾನ ಮೂಲದ ಮಗ್ ಸಿಂಗ್ ಇದನ್ನು ಗಮನಿಸಿದ್ದರು. ಮಗ್ ಸಿಂಗ್ ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದರು. ತಮ್ಮ ಕಂಪನಿ ಬೆಂಗಳೂರಿನಲ್ಲಿದ್ದು, ವಿದೇಶಗಳಲ್ಲಿ ಕೆಲಸ ಮಾಡಲು ವರ್ಕಿಂಗ್ ವೀಸಾ ಮಾಡಿಸಿಕೊಡುವುದಾಗಿ ಹೇಳಿದ್ದರು.

ಅಲ್ಲದೆ, ವೀಸಾ ಕೊಡಿಸಬೇಕಿದ್ದರೆ ತಲಾ ರೂ.8 ಲಕ್ಷ ನೀಡಬೇಕೆಂದು ತಿಳಿಸಿದ್ದಾರೆ. ದಾಖಲೆಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವಂತೆ ಹೇಳಿದ್ದು ಇಬ್ಬರಿಂದ ರೂ.16 ಲಕ್ಷ ಪಡೆದು ಜಪಾನ್ ಮತ್ತು ನ್ಯೂಜಿಲ್ಯಾಂಡ್ ವೀಸಾ ಮಾಡಿಸಿಕೊಟ್ಟಿದ್ದರು. ಇದರಿಂದಾಗಿ ಆರೋಪಿಗಳನ್ನು ನಂಬಿದ್ದ ಮಗ್ ಸಿಂಗ್ ಮತ್ತೆ ಮೂವರು ಸ್ನೇಹಿತರಿಗೆ ವೀಸಾ ಮಾಡಿಸುವಂತೆ ರೂ.8 ಲಕ್ಷದಂತೆ ಒಟ್ಟು 24 ಲಕ್ಷ ನೀಡಿದ್ದಾರೆ. ಆದರೆ, ತಿಂಗಳು ಕಳೆದರೂ ವೀಸಾ ಮಾಡಿಸಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಎಂಬೆಸ್ಸಿಯಲ್ಲಿ ಬಾಕಿಯಿದ್ದು, ಕೆಲವೇ ದಿನಗಳಲ್ಲಿ ವೀಸಾ ಬರಲಿದೆ ಎಂದು ಹೇಳಿದ್ದಾರೆ.

ಕೆಲವು ಸಮಯದ ಬಳಿಕ ವೀಸಾ ನೀಡಿದ್ದು ಪರಿಶೀಲಿಸಿದಾಗ ನಕಲಿ ಎಂಬುದು ತಿಳಿದಿದೆ. ಈ ಬಗ್ಗೆ ಪ್ರಶ್ನಿಸಲು ಕರೆ ಮಾಡಿದರೆ, ಆರೋಪಿಗಳು ಕರೆ ಸ್ವೀಕರಿಸಿಲ್ಲ. ಬಳಿಕ ಬೆಂಗಳೂರಿಗೆ ಬಂದು ಅವರು ನೀಡಿದ್ದ ವಿಳಾಸಕ್ಕೆ ತೆರಳಿದಾಗ ನಕಲಿ ವಿಳಾಸ ಎಂದು ತಿಳಿದುಬಂದಿತ್ತು. ಹೀಗಾಗಿ ಆರೋಪಿಗಳ ವಿರುದ್ಧ ಸೈಬರ್ ಕ್ರೈಂ ಠಾಣೆಗೆ ವಂಚನೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು 51 ಮಂದಿಗೆ ವಂಚನೆ ಮಾಡಿದ್ದಲ್ಲದೆ, 2.64 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾಗಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article