ಮಂಗಳೂರು : ಮೀನಿನ ಟೆಂಪೋದಲ್ಲಿ ಗಾಂಜಾ ಸಾಗಾಟ ; ಆಂಧ್ರಪ್ರದೇಶದಿಂದ ಮಂಗಳೂರು,ಕಾಸರಗೋಡಿಗೆ ಗಾಂಜಾ ಪೂರೈಸುತ್ತಿದ್ದ ಖದೀಮರು ಸಿಸಿಬಿ ಪೊಲೀಸರ ಬಲೆಗೆ; 35 ಲಕ್ಷ ಮೌಲ್ಯದ 119 ಕೇಜಿ ವಶ.
ಮಂಗಳೂರು, ಫೆ.18: ಮೀನಿನ ಟೆಂಪೋದಲ್ಲಿ ಮೀನಿನ ಬದಲಾಗಿ ಟ್ರೇನಲ್ಲಿ ಕೇಜಿಗಟ್ಟಲೆ ಗಾಂಜಾವನ್ನು ತುಂಬಿಸಿಕೊಂಡು ಆಂಧ್ರಪ್ರದೇಶದಿಂದ ಬೆಂಗಳೂರು ಮೂಲಕ ಮಂಗಳೂರು ಹಾಗೂ ಕೇರಳದ ಕಾಸರಗೋಡು ಜಿಲ್ಲೆಗೆ ಪೂರೈಕೆ ಮಾಡುತ್ತಿದ್ದ ಜಾಲವನ್ನು ಮಂಗಳೂರಿನ ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದು, 119 ಕೇಜಿ ಗಾಂಜಾ, 407 ಟೆಂಪೋ ಮತ್ತು ಮಾರುತಿ ಆಲ್ಟೋ ಕಾರು ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.


ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ನಿವಾಸಿ ಮೊಯ್ದೀನ್ ಶಬೀರ್ (38), ಥಾಣೆ ಡೊಂಬಿವಿಲಿ ನಿವಾಸಿ, ವಿಜಯವಾಡದಲ್ಲಿ ನೆಲೆಸಿದ್ದ ಮಹೇಶ್ ದ್ವಾರಿಕಾನಾಥ ಪಾಂಡೆ(30), ಕೇರಳದ ಆಲಪ್ಪುಯ ಜಿಲ್ಲೆಯ ಚೇರ್ತಲಾ ನಿವಾಸಿ ಅಜಯ್ ಕೃಷ್ಣ(33), ಹರಿಯಾಣದ ಜಿಂದ್ ಜಿಲ್ಲೆಯ ನರ್ವಾನ ನಿವಾಸಿ ಜೀವನ್ ಸಿಂಗ್(35) ಬಂಧಿತರೆಂದು ಗುರುತಿಸಲಾಗಿದೆ. ಗಾಂಜಾ ಸಾಗಾಟಕ್ಕೆ ಬಳಸಿದ ಮೀನು ಸಾಗಾಟದ KL-01-BF-9310 (Tata 407- Insulator Vehicle) ಹಾಗೂ AP-31-BP-3575 ಮಾರುತಿ ಆಲ್ಟೋ ಕಾರನ್ನು ಹಾಗೂ ರೂ. 35 ಮೌಲ್ಯದ ನಿಷೇಧಿತ ಮಾದಕ ವಸ್ತು 119 ಕೆಜಿ ಗಾಂಜಾವನ್ನು ಸ್ವಾಧೀನಪಡಿಸಲಾಗಿದೆ.
ಐದು ಮೊಬೈಲ್ ಫೋನ್, ಮೀನು ಸಾಗಾಟಕ್ಕೆ ಉಪಯೋಗಿಸುವ ಮೀನಿನ ಕ್ರೆಟ್ ಹಾಗೂ ಇತರ ಸೊತ್ತುಗಳನ್ನು ಸ್ವಾಧೀನ ಪಡಿಸಲಾಗಿದೆ. ಆರೋಪಿಗಳು ಆಂಧ್ರ ಪ್ರದೇಶದಿಂದ ಬೆಂಗಳೂರು -ಮಂಗಳೂರು ಮೂಲಕ ಕೇರಳ ರಾಜ್ಯದ ಕಾಸರಗೋಡಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಆರೋಪಿಗಳಿಂದ ವಶಪಡಿಸಿದ ಸೊತ್ತಿನ ಒಟ್ಟು ಮೌಲ್ಯ 51 ಲಕ್ಷ ರೂ. ಆಗಬಹುದು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಗಳ ಪೈಕಿ ಮೊಯಿದ್ದೀನ್ ಶಬ್ಬೀರ್ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕುಂಬ್ಳೆ, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ದನ ಕಳ್ಳತನ, ಹಲ್ಲೆ, ಕೊಲೆ ಹೀಗೆ ಒಟ್ಟು 12 ಪ್ರಕರಣ ದಾಖಲಾಗಿರುತ್ತದೆ. ಅಲ್ಲದೇ, ಆಂಧ್ರ ಪ್ರದೇಶದಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿರುತ್ತದೆ. 2023ನೇ ಇಸವಿಯಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರ ತಂಡ ದಸ್ತಗಿರಿ ಮಾಡಿ ಆತನ ವಶದಿಂದ 23.250 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಸುಮಾರು ಒಂದೂವರೆ ವರ್ಷ ಜೈಲಿನಲ್ಲಿದ್ದು ಸುಮಾರು 6 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡವನು ಪುನಃ ಅದೇ ಗಾಂಜಾ ಸಾಗಾಟ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.
ಇನ್ನೋರ್ವ ಆರೋಪಿ ಮಹೇಶ್ ದ್ವಾರಿಕನಾಥ ಪಾಂಡೆ ಎಂಬಾತನ ವಿರುದ್ಧ ಆಂಧ್ರ ಪ್ರದೇಶದ ರಾಜಮಂಡ್ರಿ ಎಂಬಲ್ಲಿ ಎರಡು ಗಾಂಜಾ ಸಾಗಾಟ ಪ್ರಕರಣ ದಾಖಲಾಗಿರುತ್ತದೆ. ಅಜಯ್ ಕೃಷ್ಣನ್ ಎಂಬಾತನ ವಿರುದ್ಧ ಆಲಪ್ಪುಳ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಹಲ್ಲೆ, ಗಾಂಜಾ ಮಾರಾಟ ಹಾಗೂ ನಕಲಿ ಚಿನ್ನವನ್ನು ಬ್ಯಾಂಕ್ ನಲ್ಲಿ ಅಡವಿರಿಸಿ ವಂಚನೆ ಮಾಡಿರುವ ಹೀಗೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿ ಜೀವನ್ ಸಿಂಗ್ ವಿರುದ್ಧ ಆಂಧ್ರಪ್ರದೇಶದ ಮೊತುಕುಡಮ್ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ. ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ.ಎಂ, ಪಿಎಸ್ಐಗಳಾದ ಶರಣಪ್ಪ ಭಂಡಾರಿ, ಸುದೀಪ್ ಹಾಗೂ ಮೋಹನ್ ಕೆ.ವಿ, ರಾಮ ಪೂಜಾರಿ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.