ಕೊಪ್ಪಳ: ರೀಲ್ಸ್ ಗಾಗಿ ತುಂಗಭದ್ರಾ ನದಿಗೆ 20 ಅಡಿ ಎತ್ತರದಿಂದ ಜಿಗಿದ ಹೈದರಾಬಾದ್ ಮೂಲದ ವೈದ್ಯೆ ನೀರುಪಾಲು
Wednesday, February 19, 2025
ಕೊಪ್ಪಳ: ತುಂಗಭದ್ರಾ ನದಿಗೆ ಬಂಡೆಯ ಮೇಲಿಂದ ಜಿಗಿದು ಈಜಲು ಹೋದ ಯುವ ವೈದ್ಯೆ ನೀರು ಪಾಲಾದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದೆ.
ಮೃತರನ್ನು ಹೈದರಾಬಾದ್ ಮೂಲದ 26 ವರ್ಷದ ಅನನ್ಯರಾವ್ ಎಂದು ಗುರುತಿಸಲಾಗಿದೆ. ಇವರು ಸ್ನೇಹಿತರ ಜೊತೆ ಈಜಲು ಹೋಗಿದ್ದರು. ವೇಳೆ ಅನನ್ಯರಾವ್ ಅವರು ಬಂಡೆಯ ಮೇಲೆ ನಿಂತು ನೀರಿಗೆ ಹಾರಿದ್ದಾರೆ. ಈ ವೇಳೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಈಜಲು ಸಾಧ್ಯವಾಗದೇ ಮುಳುಗಿದ್ದಾಳೆ. ಹೈದರಬಾದ್ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅನನ್ಯರಾವ್, ನಿನ್ನೆ ಮೂವರು ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದು, ಇಂದು ಬೆಳಗ್ಗೆ ನದಿಗೆ ಈಜಲು ತೆರಳಿದ್ದರು. ಇನ್ನು ರೀಲ್ಸ್ ಗಾಗಿ ವಿಡಿಯೋ ಮಾಡುತ್ತಿದ್ದರು ಎನ್ನಲಾಗಿದೆ.
ದೂರದಲ್ಲಿ ನಿಂತಿದ್ದ ವ್ಯಕ್ತಿಯೋರ್ವ ಒಂದು, ಎರಡು, ಮೂರು ಜಂಪ್ ಎಂದು ಹೇಳಿದ ತಕ್ಷಣ ಅನನ್ಯರಾವ್ ನದಿಗೆ ಜಿಗಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ವೈದ್ಯೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ.