ದುಬೈ: ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮತ್ತೆ ಬರೆ, ಐಸಿಐಸಿಐ ಬ್ಯಾಂಕಿಗೆ 106 ಮಿಲಿಯನ್ ಡಾಲರ್ ಬಾಕಿ, ಬರೋಡಾ ಬ್ಯಾಂಕಿಗೆ 33 ಮಿ. ಡಾಲರ್ ಸಾಲ ಪಾವತಿಗೆ ಆದೇಶ, ದಿವಾಳಿ ಎದ್ದ ಎನ್ನೆಂಸಿಗೆ ಮತ್ತಷ್ಟು ಸಂಕಷ್ಟ
ದುಬೈ: ಎನ್ ಎಂಸಿ ಹೆಲ್ತ್ ಕೇರ್ ಹೆಸರಲ್ಲಿ ದುಬೈನಲ್ಲಿ ಅತಿದೊಡ್ಡ ಸಾಮ್ರಾಜ್ಯ ಕಟ್ಟಿದ್ದ ಮಂಗಳೂರು ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ದುಬೈ ಕೋರ್ಟ್ ಮತ್ತೊಂದು ಬರೆ ಎಳೆದಿದೆ. ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಸಾಲದ ಮೊತ್ತಕ್ಕೆ ಗ್ಯಾರಂಟಿ ನೀಡಿದ್ದ ಬಿ.ಆರ್. ಶೆಟ್ಟಿ ಅವರಿಗೆ 106 ಮಿಲಿಯನ್ ಡಾಲರ್ ಬಾಕಿ ಮೊತ್ತ ನೀಡುವಂತೆ ಕೋರ್ಟ್ ಆದೇಶ ಮಾಡಿದೆ.
ಎನ್ನೆಂಸಿ ಹಾಸ್ಪಿಟಲ್ ಗ್ರೂಪ್ ಗೆ ಸಾಲ ಪಡೆದಿದ್ದ ಸಂದರ್ಭದಲ್ಲಿ ಬಿ.ಆರ್ ಶೆಟ್ಟಿ ತಾವೇ ಐಸಿಐಸಿಐ ಬ್ಯಾಂಕಿಗೆ ಗ್ಯಾರಂಟಿ ನಿಂತಿದ್ದರು ಎನ್ನಲಾಗಿದೆ. ಎನ್ನೆಂಸಿ ಗ್ರೂಪ್ ಆರ್ಥಿಕ ನಷ್ಟಕ್ಕೀಡಾಗಿ ದಿವಾಳಿಯಾಗಿದ್ದರಿಂದ ಆ ಹಣಕ್ಕೆ ಗ್ಯಾರಂಟಿದಾರನಾಗಿದ್ದ ಬಿ.ಆರ್ ಶೆಟ್ಟಿ ಅವರೇ ಸಾಲದ ಮೊತ್ತ ನೀಡಬೇಕೆಂದು ಕೋರ್ಟ್ ಹೇಳಿದೆ. ದುಬೈನಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಎನ್ನೆಂಸಿ ಹೆಲ್ತ್ ಕೇರ್ 2020ರ ಕೋವಿಡ್ ಸಂದರ್ಭದಲ್ಲಿ ದಿಢೀರ್ ಆರ್ಥಿಕ ಕುಸಿತಕ್ಕೀಡಾಗಿ ದಿವಾಳಿಯಾಗಿತ್ತು. ಒಟ್ಟು 6.6 ಬಿಲಿಯನ್ ಡಾಲರ್ ನಷ್ಟು ಮೊತ್ತವನ್ನು 80 ವಿವಿಧ ಹಣಕಾಸು ಸಂಸ್ಥೆಗಳಿಂದ ಎನ್ನೆಂಸಿ ಹೆಲ್ತ್ ಕೇರ್ ಹೆಸರಲ್ಲಿ ಸಾಲ ಪಡೆಯಲಾಗಿತ್ತು. ವಿವಿಧ ಕಡೆಯಿದ್ದ 75 ಎನ್ನೆಂಸಿ ಕೇಂದ್ರಗಳಿಗಾಗಿ ಮಾಡಿದ್ದ ರಹಸ್ಯ ಸಾಲದ ಬಗ್ಗೆ ಆರ್ಥಿಕ ಸಮೀಕ್ಷಾ ಸಂಸ್ಥೆಯೊಂದು ಬಹಿರಂಗಪಡಿಸಿತ್ತು. ಇದರ ಬೆನ್ನಲ್ಲೇ ಎನ್ನೆಂಸಿ ಹೆಲ್ತ್ ಕೇರ್ ಮಾರುಕಟ್ಟೆ ಕುಸಿತಕ್ಕೊಳಗಾಗಿತ್ತು.
ಇದೀಗ ಭಾರತದ ಐಸಿಐಸಿಐ ಬ್ಯಾಂಕಿನ ಸಾಲದ ಬಗ್ಗೆ ದುಬೈ ಇಂಟರ್ ನ್ಯಾಶನಲ್ ಫೈನಾನ್ಶಿಯಲ್ ಸೆಂಟರ್ (ಡಿಐಎಫ್ ಸಿ) ಕೋರ್ಟ್, ಮೂರು ಎನ್ನೆಂಸಿ ಹೆಲ್ತ್ ಕೇರ್ ಸೆಂಟರ್ ಸಾಲಗಳ ಬಗ್ಗೆ ಬಿ.ಆರ್ ಶೆಟ್ಟಿ ವಿರುದ್ಧ ಸಾಲ ವಸೂಲಾತಿಗೆ ಆದೇಶ ಮಾಡಿದೆ. ತನ್ನ ಸಹಿಯನ್ನು ಪೋರ್ಜರಿ ಮಾಡಲಾಗಿದೆ, ಸಾಲಕ್ಕೆ ಗ್ಯಾರಂಟಿ ನಿಂತಿದ್ದು ತಾನಲ್ಲ ಎಂಬ ಬಿ.ಆರ್ ಶೆಟ್ಟಿ ಹೇಳಿಕೆಯನ್ನು ಕೋರ್ಟ್ ನಿರಾಕರಿಸಿದ್ದು, ಫಾರೆನ್ಸಿಕ್ ತಜ್ಞರ ತನಿಖೆಯಲ್ಲಿ ನಕಲಿ ಸಹಿಯೆಂದು ಕಂಡುಬಂದಿಲ್ಲ ಎಂದು ಕೋರ್ಟ್ ಹೇಳಿದೆ. ಯುಎಇ ಮತ್ತು ಮತ್ತು ಇನ್ನಿತರ ದೇಶಗಳಲ್ಲಿ ಸಾಲದ ಸುಳಿಗೆ ಬಿದ್ದಿರುವ ಬಿಆರ್ ಶೆಟ್ಟಿ, ಸಾಲದ ಮೇಲಿನ ಗ್ಯಾರಂಟಿ ಬಗ್ಗೆ ತನಗೇನೂ ಗೊತ್ತಿಲ್ಲ. ನನ್ನ ಸಹಿಯನ್ನು ಪೋರ್ಜರಿ ಮಾಡಲಾಗಿದೆ ಎಂದು ವಾದಿಸಿದ್ದಾರೆ.
ಐಸಿಐಸಿಐ ಬ್ಯಾಂಕು 125 ಮಿಲಿಯನ್ ಡಾಲರ್ ಸಾಲ ಬಾಕಿ ನೀಡುವಂತೆ ಕೋರ್ಟಿನಲ್ಲಿ ಅಪೀಲು ಮಾಡಿದೆ. ಎನ್ನೆಂಸಿ ಹೆಲ್ತ್ ಕೇರ್ ಒಂದು ಕಾಲದಲ್ಲಿ 85 ಕಡೆ ಮೆಡಿಕಲ್ ಸೆಂಟರ್ ಗಳನ್ನು ಹೊಂದುವ ಮೂಲಕ ದುಬೈನ ಅತಿ ದೊಡ್ಡ ಹೆಲ್ತ್ ಕೇರ್ ಕಂಪನಿಯಾಗಿ ಬೆಳೆದಿತ್ತು. ಅಬುಧಾಬಿ ಕಮರ್ಶಿಯಲ್ ಬ್ಯಾಂಕಿಗೆ 4 ಬಿಲಿಯನ್ ಡಾಲರ್ ಸಾಲ ಇದೆಯೆನ್ನುವ ವಿಚಾರ ಹೈಲೈಟ್ ಆಗಿದ್ದರಿಂದ ಬಿ.ಆರ್ ಶೆಟ್ಟಿ ತನ್ನೆಲ್ಲ ಆಸ್ತಿಯನ್ನೂ ಕಳಕೊಳ್ಳುವ ಸ್ಥಿತಿಯಾಗಿತ್ತು.
ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಭಾರತ ಸರಕಾರದ ಬ್ಯಾಂಕ್ ಆಫ್ ಬರೋಡಾಗೆ 33 ಮಿಲಿಯನ್ ಡಾಲರ್ ಸಾಲದ ಮೊತ್ತ ಪಾವತಿಸುವಂತೆ ಇದೇ ದುಬೈ ಕೋರ್ಟ್ ಕಳೆದ ನವೆಂಬರ್ ನಲ್ಲಿ ಆದೇಶ ಮಾಡಿತ್ತು. ಬ್ಯಾಂಕಿನಿಂದ 33.2 ಮಿಲಿಯನ್ ಡಾಲರ್ ಸಾಲವನ್ನು ಎನ್ನೆಂಸಿ ಹೆಲ್ತ್ ಹೆಸರಲ್ಲಿ ತೆಗೆದಿದ್ದು ಅದನ್ನು ಪಾವತಿಸುವಂತೆ ದುಬೈ ಕೋರ್ಟಿಗೆ ಹೋಗಲಾಗಿತ್ತು.