ತುಮಕೂರು:ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ, ವಿಡಿಯೋ ಶೇರ್, ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪನನ್ನು ಬಂಧಿಸಿದ ಪೊಲೀಸರು
Friday, December 13, 2024
ತುಮಕೂರು: ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಇದೀಗ ಮತ್ತೆ ಸುದ್ದಿಯಲ್ಲಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ತನ್ನ ಯುಟ್ಯೂಬ್ ಚಾನೆಲ್ ಒಂದಕ್ಕೆ ವಿಡಿಯೋ ಮಾಡುವ ಉದ್ದೇಶದಿಂದ ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಪೋಟಿಸಿದ್ದಾರೆ ಅಲ್ಲದೆ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಈ ವಿಚಾರವಾಗಿ ತುಮಕೂರು ಜಿಲ್ಲೆಯ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಡ್ರೋನ್ ಪ್ರತಾಪ್ ವಿಡಿಯೋ ಹಂಚಿಕೊಂಡಿದ್ದು ಅದರಲ್ಲಿ ವಿಜ್ಞಾನಕ್ಕೆ ಸಂಬಂದಿಸಿದ ಪ್ರಯೋಗ ನಡೆಸಿದ್ದು ಇದರಲ್ಲಿ ಸೋಡಿಯಂ ಸೇರಿದಂತೆ ಇತರ ರಾಸಾಯನಿಕಗಳನ್ನು ಸೇರಿಸಿ ಕೃಷಿ ಹೊಂಡಕ್ಕೆ ಎಸೆಯುವುದು ಕಾಣಬಹುದು ಇದಾದ ಬಳಿಕ ಕೃಷಿ ಹೊಂಡದಲ್ಲಿ ಬಾಂಬ್ ಸ್ಫೋಟ ಸಂಭವಿಸಿದಂತೆ ದೊಡ್ಡ ಸ್ಫೋಟ ಸಂಭವಿಸುತ್ತದೆ ಇದೆಲ್ಲಾ ಡ್ರೋನ್ ಪ್ರತಾಪ್ ಹಂಚಿಕೊಂಡ ವಿಡಿಯೋದಲ್ಲಿ ಕಾಣಬಹುದಾಗಿದೆ.
ಪ್ರತಾಪ್ ನನ್ನ ಘಟನೆ ನಡೆದ ಸ್ಥಳಕ್ಕೆ ಕರೆತಂದ ಪೊಲೀಸರು, ಇಂದು ಸ್ಥಳ ಮಹಜರು ನಡೆಸಿದರು. ಮಧುಗಿರಿ ತಾಲೂಕಿನ ಚಿನಕಲೋಟಿ ಗ್ರಾಮದ ರಾಯರ ಬೃಂದಾವನ ಫಾರ್ಮ್ ಬಳಿ ಡ್ರೋನ್ ಪ್ರತಾಪ್ ಅವರನ್ನು ಕರೆತಂದ ಪೊಲೀಸರು, ಕೆಲವು ಹೊತ್ತು ಪರಿಶೀಲನೆ ನಡೆಸಿದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಾಪ್, ಜಮೀನಿನ ಮಾಲೀಕ ಜಿತೇಂದ್ರ ಜೈನ್ ಮತ್ತು ಇತರರ ವಿರುದ್ಧ ಬಿಎನ್ಎಸ್ ಕಾಯ್ದೆ ಸೆಕ್ಷನ್ 176, ಸಿಆರ್‌ಪಿಸಿ 158 ಎ ಮತ್ತು ಬಿ ಹಾಗೂ ಸ್ಫೋಟಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿದ್ದ ಡ್ರೋನ್ ಪ್ರತಾಪ್ ಅವರನ್ನು ಮಿಡಿಗೇಶಿ ಪೊಲೀಸರು ಗುರುವಾರ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ಮುಂದುವರೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್, ಡ್ರೋನ್ ಪ್ರತಾಪ್ನನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಮಿಡಿಗೇಶಿ ಪೊಲೀಸರ ವಶಕ್ಕೆ ನೀಡಿ ತುಮಕೂರು ಜಿಲ್ಲೆಯ ಮಧುಗಿರಿ ನ್ಯಾಯಾಲಯ ಆದೇಶ ಹೊರಡಿಸಿದೆ. ನಿನ್ನೆ (ಡಿಸೆಂಬರ್ 12) ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್ರನ್ನ ಬಂಧಿಸಿ ಇಂದು (ಡಿಸೆಂಬರ್ 13) ಮಧುಗಿರಿ ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಪೊಲೀಸರ ಮನವಿ ಪುರಸ್ಕರಿಸಿದ ಕೋರ್ಟ್, ಡ್ರೋನ್ ಪ್ರತಾಪ್ನನ್ನು ಮೂರು ದಿನ ಮಿಡಿಗೇಶಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ವಿಡಿಯೋ ಆಧರಿಸಿ ಎಫ್ಐಆರ್ ಮಾಡಲಾಗಿತ್ತು. ಮಿಡಿಗೇಶಿ ಪೊಲೀಸರು BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಡ್ರೋನ್ ಪ್ರತಾಪ್ ಹಲವು ಸಂಗತಿಯಗಳನ್ನು ಬಾಯಿಬಿಟ್ಟಿದ್ದರು.
ಇದಕ್ಕೂ ಮುನ್ನ ಎರಡು ಬಾರಿ ಇದೇ ರೀತಿಯ ಸ್ಫೋಟಿಸಿದ್ದೆ. ಸ್ಫೋಟದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದೆ ಎಂದು ಡ್ರೋನ್ ಪ್ರತಾಪ್ ಪೊಲೀಸರ ಮುಂದೆ ಹೇಳಿದ್ದರು. ಹೀಗಾಗಿ ಪೊಲೀಸರು ಇನ್ನಷ್ಟು ತನಿಖೆ ಮಾಡಬೇಕಿರುವುದರಿಂದ ತಮ್ಮ ಕಸ್ಟಡಿಗೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದ್ದರು. ಅದರಂತೆ ಕೋರ್ಟ್ ಡ್ರೋನ್ ಪ್ರತಾಪ್ನನ್ನು ಪೊಲೀಸ್ ವಶಕ್ಕೆ ನೀಡಿದ್ದು, ಖಾಕಿ ಇನ್ನಷ್ಟು ವಿಚಾರಣೆಗೊಳಪಡಿಸಲಿದೆ