ಮಂಗಳೂರು: ಜಾಬ್ ಆಫರ್ ಲಿಂಕ್ ಸೋಗಿನಲ್ಲಿ ಆನ್ಲೈನ್ ಮೋಸ ; ಟಾಸ್ಕ್ ಹೆಸರಲ್ಲಿ ಸಾಲ ಮಾಡಿ ಹೂಡಿಕೆ ಮಾಡಿದ್ದ ಮಂಗಳೂರಿನ ಯುವಕ ಸಾವು , ಸೈಬರ್ ಕಳ್ಳರ ಹಣ ದುಪ್ಪಟ್ಟು ಆಮಿಷಕ್ಕೆ ಬಲಿ !!!
Saturday, December 28, 2024
ಮಂಗಳೂರು: ಆನ್ಲೈನ್ ಜಾಬ್ ಆಫರ್ ನೆಪದಲ್ಲಿ ಬಂದಿದ್ದ ಲಿಂಕ್ ಬೆನ್ನತ್ತಿ ಸುಲಭದಲ್ಲಿ ಹಣ ಗಳಿಸಲು ಹೋಗಿದ್ದ ಯುವಕನೊಬ್ಬ ವಂಚನೆಗೊಳಗಾಗಿ ಸಾವಿಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಡುಶೆಡ್ಡೆ ನಿವಾಸಿ ಸೂರ್ಯ (23) ಎಂಬ ಯುವಕ ಮರವೂರಿನಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಡುಶೆಡ್ಡೆ, ಮರವೂರಿನಲ್ಲಿ ತುಂಬ ಆಕ್ಟಿವ್ ಆಗಿದ್ದ ಸೂರ್ಯ ಡಿ.24ರಂದು ದಿಢೀರ್ ನಾಪತ್ತೆಯಾಗಿದ್ದ. ಮಂಗಳೂರಿನ ಕಾಲೇಜು ಒಂದರಲ್ಲಿ ಬಿಸಿಎ ಮುಗಿಸಿ ಕಾವೂರಿನ ದಿಯಾ ಸಿಸ್ಟಮ್ ನಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದ್ದ ಸೂರ್ಯ, ಆನಂತರ ಕೆಲಸ ಬಿಟ್ಟು ಮನೆಯಲ್ಲೇ ಇದ್ದ. ಒಂದು ವರ್ಷದಲ್ಲಿ ಸರಿಯಾದ ಕೆಲಸ ಇರಲಿಲ್ಲ. ಈ ನಡುವೆ, ಮೊಬೈಲ್ ನಲ್ಲಿ ತುಂಬ ಆಕ್ಟಿವ್ ಆಗಿದ್ದ ಎನ್ನುವುದು ಸ್ನೇಹಿತರಿಗೂ ತಿಳಿದಿತ್ತು. ಸಂಜೆಯಾಗುತ್ತಲೇ ಸ್ನೇಹಿತರ ಜೊತೆಗೆ ದಿನವೂ ಕ್ರಿಕೆಟ್ ಆಡುವುದು, ಮೊಬೈಲ್ ಗೇಮ್ ಆಡುವುದು ಮಾಡುತ್ತಿದ್ದ.
ಮನೆಯಲ್ಲಿ ತಂಗಿ ಮತ್ತು ತಾಯಿ ಮಾತ್ರ ಇದ್ದರು. ಈತನ ತಂದೆ ಸೂರ್ಯ ಸಣ್ಣದಿದ್ದಾಗಲೇ ತೀರಿಕೊಂಡಿದ್ದರು. ತಾಯಿ ಕಷ್ಟದಿಂದ ಮಗನನ್ನು ಬೆಳೆಸಿ ಪದವಿ ಓದಿಸಿದ್ದರು. ಮೊನ್ನೆ ದಿಢೀರ್ ಆಗಿ ನಾಪತ್ತೆಯಾಗುತ್ತಲೇ ಸ್ನೇಹಿತರು, ಮನೆಯವರು ಹುಡುಕಾಟ ಶುರು ಮಾಡಿದ್ದರು. ಮರುದಿನ ಡಿ.26ರಂದು ಮರವೂರಿನ ಅಣೆಕಟ್ಟಿನ ಸಂದಿನಲ್ಲಿ ಬಾತುಕೊಂಡಿದ್ದ ಯುವಕನ ಶವ ಪತ್ತೆಯಾಗಿತ್ತು. ಮೊಬೈಲನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರಿಂದ ಅದನ್ನು ಚೆಕ್ ಮಾಡಿದಾಗ ಆನ್ಲೈನ್ ಗೇಮ್ ಮೋಸಕ್ಕೆ ಬಲಿಯಾಗಿದ್ದಾನೆ ಎಂಬುದು ಪತ್ತೆಯಾಗಿದೆ. ಕಾವೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟೆಲಿಗ್ರಾಮ್ ಆಪ್ ಬಳಸುತ್ತಿದ್ದ ಯುವಕನಿಗೆ ಅಪರಿಚಿತರಿಂದ ಆನ್ಲೈನ್ ಮೂಲಕ ಜಾಬ್ ನೀಡುವುದಾಗಿ ಮೆಸೇಜ್ ಬಂದಿತ್ತು. ಅದಕ್ಕಾಗಿ ಲಿಂಕ್ ಒಂದನ್ನು ಷೇರ್ ಮಾಡಿದ್ದು ಸೂಚಿಸಲ್ಪಟ್ಟ ಟಾಸ್ಕ್ ಪೂರೈಸಿದರೆ ಹಣ ನೀಡುತ್ತೇವೆ ಎಂದು ನಂಬಿಸಿದ್ದರು. ಇಂಥ ಜಾಬ್ ಆಫರ್ ಮೆಸೇಜ್ ನಲ್ಲಿ ಬೇರೆ ಬೇರೆ ರೀತಿಯ ಟಾಸ್ಕ್ ಕೊಟ್ಟು ಅದನ್ನು ಮಾಡುವಂತೆ ಸೂಚಿಸಲಾಗುತ್ತದೆ. ಆರಂಭದಲ್ಲಿ ಈ ಟಾಸ್ಕ್ ಮಾಡುವುದಕ್ಕೂ ಇಂತಿಷ್ಟು ಮೊತ್ತ ನೀಡಬೇಕು ಎಂದು ಸೂಚಿಸಲಾಗುತ್ತದೆ. ಆನಂತರ, ಸ್ವಲ್ಪ ಹಣ ಗ್ರಾಹಕರಿಗೆ ಸಿಕ್ಕಿದೊಡನೆ ಮತ್ತಷ್ಟು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದರೆ, ದೊಡ್ಡ ಮೊತ್ತ ಗೆಲ್ಲುವ ಟಾಸ್ಕ್ ನೀಡುವುದಾಗಿ ನಂಬಿಸುತ್ತಾರೆ. ಕೊನೆಯಲ್ಲಿ ಹಣ ನೀಡಬೇಕಿದ್ದರೆ, ಟಾಸ್ಕ್ ಖಾತೆ ಆಕ್ಟಿವ್ ಮಾಡುವುದಕ್ಕೂ ಇಂತಿಷ್ಟು ಹಣ ತೆರಬೇಕು ಎಂದು ಬ್ಲಾಕ್ಮೇಲ್ ರೀತಿ ಮಾಡುತ್ತಾರೆ.
ಆರಂಭದಲ್ಲಿ 2 ಸಾವಿರ, ಆನಂತರ 5 ಸಾವಿರ, 15 ಸಾವಿರ ಎಂದು ಗ್ರಾಹಕರಿಗೆ ಹಣ ಹೂಡಿಕೆ ಮಾಡಿ ಅದಕ್ಕೆ ತಕ್ಕಂತೆ ಟಾಸ್ಕ್ ಪೂರೈಸುವ ಬಗ್ಗೆ ಹೇಳಲಾಗುತ್ತದೆ. ಸೂರ್ಯ ತನ್ನಲ್ಲಿ ಹಣ ಇಲ್ಲದಿದ್ದರೂ, ಸ್ನೇಹಿತರಲ್ಲಿ ಸಾಲ ಪಡೆದು ಆನ್ಲೈನ್ ಆಟದಲ್ಲಿ ಹೂಡಿಕೆ ಮಾಡುತ್ತಿದ್ದ. ಸೂರ್ಯ ಆನ್ಲೈನ್ ಗೇಮ್ ಆಡುತ್ತಿದ್ದಾನೆಂದು ತಿಳಿದಿದ್ದರೂ, ಇಷ್ಟೊಂದು ಸಾಲ ಮಾಡಿದ್ದಾನೆ ಎಂಬುದು ತಿಳಿದಿರಲಿಲ್ಲ. ಸಾವಿನ ಬೆನ್ನಲ್ಲೇ ಮೊಬೈಲ್ ಚೆಕ್ ಮಾಡಿದಾಗ, 85 ಸಾವಿರ ರೂ. ಹಣವನ್ನು ಆನ್ಲೈನ್ ಗೇಮ್ ನಲ್ಲಿ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ. ಆದರೆ ಹಣ ಹಿಂತಿರುಗಿ ಬರದೇ ಇದ್ದುದರಿಂದ ಧೃತಿಗೆಟ್ಟ ಯುವಕ ಸೂರ್ಯ ಸಾವಿಗೆ ಶರಣಾಗಿದ್ದಾನೆ ಎನ್ನುವ ಶಂಕೆ ಇದೆ.
ಆರಂಭದಲ್ಲಿ ಸಣ್ಣ ಮೊತ್ತದ ಹೂಡಿಕೆಗೆ ಇಂತಿಷ್ಟು ರಿಟರ್ನ್ಸ್ ನೀಡುವ ಸೈಬರ್ ಖದೀಮರು, ಬಕ್ರಾ ಗ್ರಾಹಕರು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ ಬೆನ್ನಲ್ಲೇ ತಮ್ಮ ಸಂಪರ್ಕ ಕಡಿತಗೊಳಿಸುತ್ತಾರೆ. ಕೇವಲ ವಾಟ್ಸಪ್, ಟೆಲಿಗ್ರಾಂ ಮೆಸೇಜಿಂಗ್ ನಲ್ಲಿ ಮಾತ್ರ ಇವರು ವ್ಯವಹಾರ ಮಾಡುತ್ತಿದ್ದು ಸಂಪರ್ಕ ಕಡಿತಗೊಳಿಸುತ್ತಿದ್ದಂತೆ ಹಣ ಕಳಕೊಂಡವರು ಧೃತಿಗೆಡುತ್ತಾರೆ. ಈ ರೀತಿಯ ಜಾಬ್ ಆಫರ್ ನೀಡುವ ಲಿಂಕ್ ವಾಟ್ಸಪ್, ಟೆಲಿಗ್ರಾಂ ಸೇರಿದಂತೆ ಎಲ್ಲ ಮೆಸೇಜಿಂಗ್ ಆಪ್ ಗಳಲ್ಲೂ ಬರುತ್ತದೆ. ಅದರಲ್ಲಿ ಟಾಸ್ಕ್ ನೀಡುವ ಮಂದಿ ತಮ್ಮದು ಬಹುರಾಷ್ಟ್ರೀಯ ಕಂಪನಿಯೆಂದೇ ನಂಬಿಸುತ್ತಾರೆ. ಇಂಗ್ಲಿಷ್ ಗೊತ್ತಿರುವ ನಿರುದ್ಯೋಗಿ ಯುವಕ, ಯುವತಿಯರು ಸುಲಭದಲ್ಲಿ ಹಣ ಮಾಡಲು ಹೋಗಿ ಇಂಥ ಮೋಸದಾಟಕ್ಕೆ ಬಲಿಯಾಗುತ್ತಿದ್ದಾರೆ ಎನ್ನುವುದು ಸೈಬರ್ ತಜ್ಞರ ವಿವರಣೆ.