ಮಂಗಳೂರು:ಕಾರುಗಳ ಓವರ್ ಟೇಕ್ ಧಾವಂತ; ರಸ್ತೆ ದಾಟುತ್ತಿದ್ದ ಪಾದಚಾರಿ ವೃದ್ಧೆ ಬಲಿ ! ನೇತ್ರಾವತಿ ಸೇತುವೆ ಬಳಿಯ ಹೆದ್ದಾರಿ ಕಮರಿಗೆ ಉರುಳಿ ಬಿದ್ದ ಕಾರುಗಳು
Monday, December 9, 2024
ಉಳ್ಳಾಲ, ಡಿ.9: ಕಾರುಗಳ ನಡುವಿನ ಓವರ್ ಟೇಕ್ ರಭಸಕ್ಕೆ ವೃದ್ಧೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ.66ರ ಆಡಂಕುದ್ರು ಎಂಬಲ್ಲಿ ಸೋಮವಾರ ಸಂಜೆ ನಡೆದಿದ್ದು, ಮಹಿಳೆಗೆ ಡಿಕ್ಕಿ ಹೊಡೆದ ಕಾರು ಮತ್ತು ಅದನ್ನ ಓವರ್ ಟೇಕ್ ಮಾಡುತ್ತಿದ್ದ ಕಾರುಗಳೆರಡು ಕಮರಿಗೆ ಉರುಳಿ ಬಿದ್ದಿವೆ.
ಮೃತರು ಚೆಂಬುಗುಡ್ಡೆ ಸೇವಂತಿ ಗುಡ್ಡೆ ನಿವಾಸಿ ಕೃಷ್ಣಪ್ಪ ಶೆಟ್ಟಿಯವರ ಪತ್ನಿ ಬೇಬಿ (65) ಎಂಬವರಾಗಿದ್ದು ಅಡಂಕುದ್ರು ಶಾಲೆಯ ಮುಂದೆ ಅಂಗಡಿ ನಡೆಸುತ್ತಿದ್ದರು. ಬೇಬಿ ಅವರು ಅಂಗಡಿ ಕೆಲಸದ ಬಳಿಕ, ದಿನವೂ ಪಂಪ್ವೆಲ್ನ ಅಪಾರ್ಟ್ ಮೆಂಟ್ ಒಂದರಲ್ಲಿ ರಾತ್ರಿ ಪಾಳಿ ಕೆಲಸಕ್ಕೆ ತೆರಳುತ್ತಿದ್ದರು. ಸೋಮವಾರ ಸಂಜೆ ಬೇಬಿ ಅವರು ರಾತ್ರಿ ಪಾಳಿ ಕೆಲಸಕ್ಕೆ ಹೊರಟಿದ್ದು ಅಡಂಕುದ್ರುವಿನಲ್ಲಿ ಬಸ್ಸು ಹತ್ತಲು ಹೆದ್ದಾರಿ ದಾಟುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ವೇಗವಾಗಿ ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಧಾವಿಸುತ್ತಿದ್ದ ಪೋಲೊ ಕಾರು ಮಹಿಳೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವೃದ್ಧೆಯ ಒಂದು ಕಾಲು ತುಂಡಾಗಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಯಂತ್ರಣ ತಪ್ಪಿದ ಪೋಲೊ ಕಾರು ನೇತ್ರಾವತಿ ಸೇತುವೆ ಬಳಿಯ ಹೆದ್ದಾರಿ ಅಂಚಿನ ಆಳವಾದ ಕಮರಿಗೆ ಉರುಳಿ ಬಿದ್ದಿದೆ. ಪೋಲೋ ಕಾರನ್ನ ಓವರ್ ಟೇಕ್ ಮಾಡುತ್ತಿದ್ದ ಕಿಯಾ ಕಾರು ಕೂಡ ರಸ್ತೆ ಬದಿಯ ಪೊದೆಗೆ ನುಗ್ಗಿದೆ.
ಘಟನೆಯಲ್ಲಿ ಕಾರು ಚಾಲಕರಿಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವೈಜ್ಞಾನಿಕ ಹೆದ್ದಾರಿ ನಿರ್ಮಾಣದಿಂದ ಕಲ್ಲಾಪು, ಅಡಂಕುದ್ರು ಪ್ರದೇಶದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದೆ. ಘಟನಾ ಸ್ಥಳಕ್ಕೆ ಡಿಸಿಪಿ ರವಿಶಂಕರ್, ಸಂಚಾರಿ ಎಸಿಪಿ ನಜ್ಮಾ ಫಾರೂಕಿ, ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.