ಕೋಲಾರ :ಮುರುಡೇಶ್ವರ ಬೀಚ್‌ನಲ್ಲಿ ನಾಲ್ವರು ಬಾಲಕಿಯರು ಜಲಸಮಾಧಿ ; ಶಾಲೆಯ ಪ್ರಿನ್ಸಿಪಾಲ್ ಅಮಾನತು , ಅತಿಥಿ ಶಿಕ್ಷಕರು ಸೇರಿ 6 ಮಂದಿ ಸೇವೆಯಿಂದ ವಜಾ ! ಮೃತ ಬಾಲಕಿಯರ ಕುಟುಂಬಕ್ಕೆ 5 ಲಕ್ಷ ಪರಿಹಾರ.
Wednesday, December 11, 2024
ಕೋಲಾರ: ಮುರುಡೇಶ್ವರ ಬೀಚ್‌ನಲ್ಲಿ ನಾಲ್ವರು ಬಾಲಕಿಯರು ಜಲಸಮಾಧಿ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪ, ಬೇಜವಾಬ್ದಾರಿ ಹಿನ್ನೆಲೆಯಲ್ಲಿ ಜಿಲ್ಲೆಯ ಮುಳಬಾಗಲು ತಾಲೂಕಿನ ಕೊತ್ತೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲು ಅಮಾನತುಗೊಂಡಿದ್ದು, ಐವರು ಅತಿಥಿ ಶಿಕ್ಷಕರನ್ನು ವಜಾ ಮಾಡಿ, ಗ್ರೂಪ್ ಡಿ ಮಹಿಳಾ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ತೆರಳಿದ್ದಾಗ ನಾಲ್ವರು ವಿದ್ಯಾರ್ಥಿನಿಯರು ಮಂಗಳವಾರ ಸಮುದ್ರಪಾಲಾಗಿದ್ದರು. ಮುಳಬಾಗಲು ತಾಲೂಕಿನ ಪೂಜಾರಹಳ್ಳಿ ಶ್ರಾವಂತಿ(15), ಎನ್.ಗಡ್ಡೂರು ದೀಕ್ಷಾ(15), ದೊಡ್ಡಗುಟ್ಟಳ್ಳಿ ವಂದನಾ(15) ಮತ್ತು ಹೆಬ್ಬಣಿ ಗ್ರಾಮದ ಲಾವಣ್ಯ(15) ಮೃತರು.
ಸಮುದ್ರಕ್ಕಿಳಿದಿದ್ದ ಏಳು ಬಾಲಕಿಯರ ಪೈಕಿ ನಾಲ್ವರು ನೀರುಪಾಲಾಗಿದ್ದರು. ಇನ್ನುಳಿದ ಬಾಳಸಂದ್ರ ವೀಕ್ಷಣಾ(15), ತಾತಿಘಟ್ಟ ಯಶೋಧಾ(15) ಹಾಗೂ ಕಲಿಕೇರಿ ಲಿಪಿತಾ(15) ಅವರನ್ನು ರಕ್ಷಣೆ ಮಾಡಿ ಮುರುಡೇಶ್ವರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಸತಿ ಶಾಲೆಯ 46 ಮಕ್ಕಳು 2 ದಿನದ ಶೈಕ್ಷಣಿಕ ಪ್ರವಾಸಕ್ಕಾಗಿ 8 ರಂದು ಭಾನುವಾರ ರಾತ್ರಿ 9 ಗಂಟೆಗೆ ಕೊತ್ತೂರಿನಿಂದ ನಿರ್ಗಮಿಸಿದ್ದರು. 9 ರಂದು ಬೆಳಗ್ಗೆ ಬನವಾಸಿ, ಶಿರಸಿ ನೋಡಿಕೊಂಡು ರಾತ್ರಿ ಗೋಕರ್ಣದಲ್ಲಿ ತಂಗಿದ್ದರು. 10ರಂದು ಮಂಗಳವಾರ ಮಧ್ಯಾಹ್ನ 1.30ಕ್ಕೆ ಮುರುಡೇಶ್ವರ ತಲುಪಿದ್ದು, ಸಂಜೆ 5 ಗಂಟೆಗೆ ದುರ್ಘಟನೆ ಸಂಭವಿಸಿತ್ತು.
ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ;
ಕರ್ತವ್ಯಲೋಪ, ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ವಸತಿ ಶಾಲೆಯ ಪ್ರಿನ್ಸಿಪಾಲ್ ಮಹರ್ ಶಶಿಕಲಾ ಅವರನ್ನ ಸೇವೆಯಿಂದ ಅಮಾನತು ಮಾಡಲಾಗಿದ್ದು, ಅತಿಥಿ ಶಿಕ್ಷಕರಾದ ಶಾರದಮ್ಮ, ಚೌಡಪ್ಪ, ನರೇಶ್, ವಿಶ್ವನಾಥ್, ಸುನೀಲ್ ವಜಾಗೊಂಡಿದ್ದು ಹಾಗೂ ಗ್ರೂಪ್ ಡಿ ಸಿಬ್ಬಂದಿ ಲಕ್ಷ್ಮಮ್ಮ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಅಂತೆಯೇ ಮೃತಪಟ್ಟ ಬಾಲಕಿಯರ ಪೋಷಕರಿಗೆ ತಲಾ 5 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ.
ಮೃತ ನಾಲ್ವರು ಬಾಲಕಿಯರೂ 15 ವರ್ಷದವರಾಗಿದ್ದು 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದರು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್.ಕಾಂತರಾಜು ತಿಳಿಸಿದ್ದಾರೆ.