ದಕ್ಷಿಣ ಕನ್ನಡ :ಜೋಕಾಲಿಗೆ ಸಿಲುಕಿ ಮೃತಪಟ್ಟ 3ನೇ ತರಗತಿ ಬಾಲಕಿ; ಸಾವಿನ ಸುದ್ದಿ ತಿರುವಿನೊಂದಿಗೆ ಆತ್ಮಹತ್ಯೆಯೆಂದು ದೂರು ದಾಖಲು, ವಿಟ್ಲ ಪೊಲೀಸರಿಂದ ತನಿಖೆ..
Monday, December 9, 2024
ಪುತ್ತೂರು, ಡಿ.9: ವಿಟ್ಲ ಠಾಣೆ ವ್ಯಾಪ್ತಿಯ ಪೆರಾಜೆ ಗ್ರಾಮದಲ್ಲಿ ಹತ್ತು ವರ್ಷದ ಬಾಲಕಿಯೊಬ್ಬಳು ಜೋಕಾಲಿಗೆ ಸಿಲುಕಿ ಸಾವನ್ನಪ್ಪಿದ್ದಾಳೆಂದು ಹೇಳಲಾಗಿದ್ದ ಸುದ್ದಿಗೆ ತಿರುವು ಸಿಕ್ಕಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದಾಗ, ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದಿದ್ದು, ಹೆತ್ತವರ ದೂರಿನಂತೆ ಅದೇ ರೀತಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅದು ಆತ್ಮಹತ್ಯೆಯೋ, ಕೊಲೆಯೋ ಎನ್ನುವ ಬಗ್ಗೆ ಪೊಲೀಸರು ನಿರ್ಧಾರಕ್ಕೆ ಬಂದಿಲ್ಲ.
ಬುಡೋಳಿ ಗ್ರಾಮದ ಶೇರಾ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ, ಪೆರಾಜೆ ಗ್ರಾಮದ ಮದಕ ನಿವಾಸಿ ಕಿಶೋರ್ ಎಂಬವರ ಪುತ್ರಿ ತೀರ್ಥಶ್ರೀ(10) ಮೃತ ಬಾಲಕಿ. ಭಾನುವಾರ ರಾತ್ರಿ ಮನೆಯೊಳಗಿನ ಕೋಣೆಯಲ್ಲಿ ಬಟ್ಟೆ ಹಾಕಲು ಅಳವಡಿಸಿದ್ದ ಸ್ಟೀಲ್ ಸರಳಿಗೆ ಚೂಡಿದಾರದ ಹಗ್ಗದ ಒಂದು ತುದಿಯನ್ನು ಕಟ್ಟಿದ್ದು, ಮತ್ತೊಂದು ತುದಿಯನ್ನು ಬಾಲಕಿಯ ಕುತ್ತಿಗೆಗೆ ಕಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ರಾತ್ರಿಯೇ ಮನೆಯವರು ನೋಡಿದ್ದು, ಹಗ್ಗ ಬಿಚ್ಚಿ ಬಾಲಕಿಯನ್ನು ರಕ್ಷಣೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಬೆಳಗ್ಗಿನ ವೇಳೆಗೆ ಸುದ್ದಿಯಾಗಿದ್ದು ಜೋಕಾಲಿಯಲ್ಲಿ ಸಿಲುಕಿ ಬಾಲಕಿ ಸಾವಿಗೀಡಾಗಿದ್ದಾಗಿ ವದಂತಿ ಹರಡಿತ್ತು. ಆದರೆ ಪೊಲೀಸರು ಮನೆಯವರನ್ನು ವಿಚಾರಣೆ ನಡೆಸಿದಾಗ, ಸೀರೆಯಲ್ಲ, ಚೂಡಿದಾರದ ಹಗ್ಗ ಎಂದು ತಿಳಿದುಬಂದಿತ್ತು. ಭಾನುವಾರ ಆಗಿದ್ದರಿಂದ ಬಾಲಕಿಗೆ ಶಾಲೆಗೆ ರಜೆ ಇದ್ದುದರಿಂದ ಬಾಲಕಿಗೆ ಮನೆಯಲ್ಲಿ ಏನು ಆಗಿತ್ತು, ಇಷ್ಟು ಸಣ್ಣ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿದೆಯೇ, ಇದರ ಹಿಂದೆ ಬೇರೇನಾದರೂ ಕೈವಾಡ ಇದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಾಗಿದೆ. ವಿಟ್ಲ ಪೊಲೀಸರು ಸದ್ಯ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದಾರೆ.