ಮಂಗಳೂರು: ಪಾರ್ಟ್ ಟೈಮ್ ಉದ್ಯೋಗ ಕೊಡಿಸುತ್ತೇವೆಂದು ನಂಬಿಸಿ ವ್ಯಕ್ತಿಯೊಬ್ಬರಿಂದ 28.18 ಲಕ್ಷ ದೋಚಿದ ಖದೀಮರು; ಕಾಶ್ಮೀರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸ್
Wednesday, December 11, 2024
ಮಂಗಳೂರು: ಪಾರ್ಟ್ ಟೈಮ್ ಜಾಬ್ ಕೊಡಿಸುತ್ತೇವೆಂದು ವ್ಯಕ್ತಿಯೊಬ್ಬರಿಂದ 28.18 ಲಕ್ಷ ರೂಪಾಯಿ ಪೀಕಿಸಿದ್ದ ಪ್ರಕರಣದಲ್ಲಿ ಮತ್ತೆ ಇಬ್ಬರು ಕಾಶ್ಮೀರ ಮೂಲದ ಆರೋಪಿಗಳನ್ನು ಕೋಣಾಜೆ ಪೊಲೀಸರು ಬಂಧಿಸಿದ್ದಾರೆ.
ಜಮ್ಮು ಕಾಶ್ಮೀರದ ಅಮೀರ್ ಸುಹೇಲ್ ಹಾಗೂ ಸುಹೇಲ್ ಅಹ್ಮದ್ ವಾನಿ ಬಂಧಿತರು. ಪ್ರಕರಣದಲ್ಲಿ ಬೆಂಗಳೂರು ಹಾಗೂ ಮೈಸೂರು ಮೂಲದ ಐವರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು. ಅವರ ನೀಡಿದ ಮಾಹಿತಿ ಆಧರಿಸಿ ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ.
ಸುಹೇಲ್ ಅಹ್ಮದ್ ಮತ್ತು ಅಮೀರ್ ಸುಹೇಲ್ ಬೆಂಗಳೂರಿನಲ್ಲಿದ್ದುಕೊಂಡು ಹಲವು ಬ್ಯಾಂಕುಗಳಲ್ಲಿ ಬೇರೆ ಬೇರೆಯವರ ಹೆಸರಿನಲ್ಲಿ ಖಾತೆಗಳನ್ನು ಮಾಡಿಸಿದ್ದರು. ಬೇರೆ ಬೇರೆಯವರಿಂದ ದಿನಕ್ಕೆ ಮೂರರಿಂದ ನಾಲ್ಕು ಸಾವಿರ ರೂ. ಗಳಿಸುವ ಉದ್ದೇಶದಿಂದ ಬ್ಯಾಂಕ್ ಖಾತೆಗಳನ್ನು ಬಳಸಿಕೊಳ್ಳಲು ಮಾರಾಟ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ದೂರುದಾರರ ಮೊಬೈಲಿಗೆ ಜು.21ರಂದು ಪಾರ್ಟ್ ಟೈಮ್ ಜಾಬ್ ಬಗ್ಗೆ ವಾಟ್ಸಪ್ ಮೆಸೇಜ್ ಬಂದಿತ್ತು. ಬಳಿಕ ಟೆಲಿಗ್ರಾಮ್ ಏಪ್ ಲಿಂಕ್ ಕಳುಹಿಸಿ, ಅದನ್ನು ಓಪನ್ ಮಾಡುವಂತೆ ತಿಳಿಸಿದ್ದರು. ಪಾರ್ಟ್ ಟೈಮ್ ಜಾಬ್ ಏನೆಂದು ಕೇಳಿದಾಗ, ಅವರಿಗೆ ಒಂದು ವಿಡಿಯೋ ಕಳುಹಿಸಿ ಅದರ ಸ್ಕ್ರೀನ್ ಶಾಟ್ ಕಳಿಸಲು ತಿಳಿಸಿದ್ದರು. ಸ್ಕ್ರೀನ್ ಶಾಟ್ ಕಳಿಸಿದ ಬೆನ್ನಲ್ಲೇ ಇವರಿಗೆ 130 ರೂಪಾಯಿ ಬ್ಯಾಂಕ್ ಖಾತೆಗೆ ಕಳಿಸಿದ್ದರು. ಆನಂತರ, ಆ ವಿಡಿಯೋ ತಪ್ಪಾಗಿದೆ, ಅದನ್ನು ಸರಿ ಮಾಡಲು ಇನ್ನೊಂದು ಟೆಲಿಗ್ರಾಮ್ ಏಪ್ ಲಿಂಕ್ ಕಳುಹಿಸಿದ್ದರು. ಲಿಂಕ್ ಓಪನ್ ಮಾಡಿದಾಗ, ಆರೋಪಿಗಳು ಒಂದು ಸಾವಿರ ರೂ. ಹಾಕಲು ಹೇಳಿದ್ದಾರೆ. ಆನಂತರ, ಇದೇ ರೀತಿ ಹೆಚ್ಚು ಹಣ ಕಳಿಸಿದರೆ ಲಾಭ ಹೆಚ್ಚು ಎಂದು ನಂಬಿಸಿ ಬೇರೆ ಬೇರೆ ಖಾತೆಗಳಿಗೆ ಹಣ ಕಳಿಸಲು ಹೇಳಿದ್ದು ಅದರಂತೆ ಬರೋಬ್ಬರಿ 28 ಲಕ್ಷ ರೂ. ಹಣವನ್ನು ಪಾವತಿ ಮಾಡಿದ್ದರು.
ಆದರೆ ಕಳಿಸಿದ ಹಣ ಮರಳಿ ಸಿಗುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಮೋಸದ ಅರಿವಾಗಿದ್ದು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.