ಮಂಗಳೂರು : ಉಳ್ಳಾಲ 17 ವರ್ಷದ ಬಾಲಕಿಯ ಮದುವೆ ; ತಂದೆ, ತಾಯಿ, ಅತ್ತೆ, ಮಾವ, ಗಂಡನಿಗೆ ಒಂದು ವರ್ಷ ಶಿಕ್ಷೆ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು.
Monday, December 16, 2024
ಮಂಗಳೂರು: 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಕಾನೂನು ಉಲ್ಲಂಘಿಸಿ ಮದುವೆ ಮಾಡಿದ್ದಕ್ಕಾಗಿ ಬಾಲಕಿಯ ತಂದೆ, ತಾಯಿ, ಅತ್ತೆ, ಮಾವ ಮತ್ತು ಗಂಡನ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ದಾಖಲಾದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ಪೋಕ್ಸೋ ನ್ಯಾಯಾಲಯ ಆರೋಪಿತರಿಗೆ ಒಂದು ವರ್ಷ ಕಾಲ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಮೊಂಟೆಪದವು ನಿವಾಸಿ ಮಹಮ್ಮದ್ ಇಂತಿಯಾಜ್ (29), ಆತನ ತಂದೆ ಕೆ.ಐ ಮೊಹಮ್ಮದ್, ತಾಯಿ ಮೈಮೂನಾ, ಹುಡುಗಿ ತಂದೆ ಫರಂಗಿಪೇಟೆ ನಿವಾಸಿ ಅಬ್ದುಲ್ ಖಾದರ್ ಮತ್ತು ತಾಯಿ ರಮ್ಲತ್ ಒಂದು ವರ್ಷ ಶಿಕ್ಷೆಗೆ ಗುರಿಯಾಗಿದ್ದಾರೆ. 2023ರ ಮೇ 31ರಂದು ಮೊಂಟೆಪದವು ಗ್ರಾಮದ ಮದುವೆ ಗಂಡಿನ ಮನೆಯಲ್ಲಿ ಮಹಮ್ಮದ್ ಇಂತಿಯಾಜ್ ಜೊತೆಗೆ ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಸಿದ್ದರು. ಹುಡುಗನ ತಂದೆ, ತಾಯಿ ಮತ್ತು ಹುಡುಗಿಯ ತಂದೆ, ತಾಯಿ ಸಮ್ಮುಖದಲ್ಲಿಯೇ ಮದುವೆ ನಡೆದಿತ್ತು.
ಆದರೆ ವಧುವಿಗೆ ಪ್ರಾಯ ಪೂರ್ತಿಯಾಗಿಲ್ಲ ಎಂಬ ಸುದ್ದಿ ಹಬ್ಬಿತ್ತು. ಇದರಂತೆ, ಮರುದಿನ ಜೂನ್ 1ರಂದು ತನಿಖೆ ನಡೆಸಿದ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ವರ ಮತ್ತು ವಧುವಿನ ತಂದೆ, ತಾಯಿ ಹಾಗೂ ಮದುವೆ ಗಂಡು ವಿರುದ್ಧ ಕೇಸು ದಾಖಲಿಸಿದ್ದರು. ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ರಾಜೇಂದ್ರ ಬಿ. ಅವರು ತನಿಖೆ ಪೂರ್ತಿಗೊಳಿಸಿ ಪೋಕ್ಸೋ ಕಾಯ್ದೆಯ ಕಲಂ 6 ಮತ್ತು ಬಾಲ್ಯ ವಿವಾಹ ಕಾಯ್ದೆ ಕಲಂ 9, 10, 11ರಂದು ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು. ಕೋರ್ಟಿನಲ್ಲಿ 10 ಸಾಕ್ಷಿದಾರರು ಮತ್ತು 22 ದಾಖಲೆಗಳನ್ನು ಪರಿಶೀಲಿಸಿ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಧೀಶ ಮಾನು ಕೆ.ಎಸ್ ತೀರ್ಪು ನೀಡಿದ್ದಾರೆ.
ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಕಲಂ 10 ಮತ್ತು 11ರಡಿಯಲ್ಲಿ ಒಂದು ವರ್ಷ ಕಾಲ ಆರೋಪಿತರಿಗೆ ತಲಾ ಒಂದು ವರ್ಷ ಕಾಲ ಶಿಕ್ಷೆ ಮತ್ತು ತಲಾ 5 ಸಾವಿರ ದಂಡ ವಿಧಿಸಲಾಗಿದೆ. ಸಂತ್ರಸ್ತೆ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬದರಿನಾಥ ನಾಯರಿ ವಾದಿಸಿದ್ದರು. ಕೇಸು ದಾಖಲಾದ ಒಂದೂವರೆ ವರ್ಷದಲ್ಲಿ ಶಿಕ್ಷೆಯಾಗಿರುವುದು ವಿಶೇಷ.